ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿವಾದದಲ್ಲಿ ತಮ್ಮ ಹೆಸರು ಸಿಕ್ಕಿಹಾಕಿಕೊಂಡ ನಂತರ ಇದೀಗ ನಟಿ ಬಹುದೊಡ್ಡ ಪ್ರಾಜೆಕ್ಟ್ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ತಮ್ಮ ಬಣ್ಣದ ಜಗತ್ತಿನ ಜರ್ನಿ ಆರಂಭಿಸಿದ್ದ ಕಿರುತೆರೆಗೆ ಮತ್ತೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ತಾನು ಮತ್ತೆ ನಿಮ್ಮನ್ನು ಮನರಂಜಿಸಲು ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಪ್ರೀತಿ ಹಾಗೂ ಬೆಂಬಲ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಕಿರುತೆರೆಯೊಂದಿಗೆ ತಮ್ಮ ಪ್ರಯಾಣವನ್ನು ಆರಂಭಿಸಿದ್ದ ನಟಿ ರಿಯಾ ಚಕ್ರವರ್ತಿ ಇದೀಗ ಅದೇ ವೇದಿಕೆಗೆ ಮರಳಲು ಸಿದ್ಧರಾಗಿದ್ದಾರೆ. ಎಂಟಿವಿ ಇಂಡಿಯಾದಲ್ಲಿ ವಿಜೇತರಾಗಿದ್ದ ದಿನಗಳಿಂದ ಬಹಳ ದೂರ ಬಂದಿರುವ ನಟಿ ಯುವ ಆಧಾರಿತ ರಿಯಾಲಿಟಿ ಶೋ ಎಂಟಿವಿ ರೋಡೀಸ್‌ನ 19 ನೇ ಸೀಸನ್‌ನಲ್ಲಿ ಪ್ರಿನ್ಸ್ ನರುಲಾ ಮತ್ತು ಗೌತಮ್ ಗುಲಾಟಿ ಅವರ ಗ್ಯಾಂಗ್ ಲೀಡರ್ ಆಗಿ ಸೇರಿಕೊಂಡಿದ್ದಾರೆ. ತನ್ನ ದೃಢತೆ ಹಾಗೂ ನಿರ್ಭೀತಿಯನ್ನು ಪ್ರೂವ್ ಮಾಡಲು ಸಾಧ್ಯವಿರುವ ಕಾರ್ಯಕ್ರಮದ ಭಾಗವಾಗಲು ಅವರು ಎದುರು ನೋಡುತ್ತಿದ್ದಾರೆ.
ಇತ್ತೀಚಿನ ರಿಯಾಲಿಟಿ ಶೋದ ಭಾಗವಾಗಿರುವ ಬಗ್ಗೆ ಮಾತನಾಡಿರುವ ನಟಿ ರಿಯಾ ಚಕ್ರವರ್ತಿ, "ಎಂಟಿವಿ ರೋಡೀಸ್ ಕರ್ಮ್ ಯಾ ಕಾಂಡ್‌ನ ಭಾಗವಾಗಲು ನಾನು ರೋಮಾಂಚನಗೊಂಡಿದ್ದೇನೆ. ಇದು ಅಪ್ರತಿಮ ಸಾಂಸ್ಕೃತಿಕ ವಿದ್ಯಮಾನವಾಗಿದೆ. ಈ ರೋಮಾಂಚಕ ಪ್ರಯಾಣದಲ್ಲಿ ನನ್ನ ದೃಢನಿಶ್ಚಯ ಮತ್ತು ನಿರ್ಭೀತಿ ಪ್ರದರ್ಶಿಸಲು ನಾನು ಸೋನು ಸೂದ್ ಮತ್ತು ನನ್ನ ಸಹವರ್ತಿ ಗ್ಯಾಂಗ್ ನಾಯಕರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಈ ಹೊಸ ಸಾಹಸಕ್ಕಾಗಿ ಅಭಿಮಾನಿಗಳಿಂದ ಪ್ರೀತಿ ಮತ್ತು ಬೆಂಬಲವನ್ನು ನಾನು ಬಯಸುತ್ತೇನೆ!" ಎಂದಿದ್ದಾರೆ.
ಎಂಟಿವಿಯಲ್ಲಿ ಪ್ರಸಾರವಾಗಲಿರುವ ರೋಡೀಸ್ ರಿಯಾಲಿಟಿ ಶೋಗೆ ಈ ಬಾರಿ ಕರ್ಮ್ ಯಾ ಕಾಂಡ್ ಎಂದು ಥೀಮ್ ಇರಿಸಲಾಗಿದೆ. ಈ ಬಾರಿ ನಟ ಸೋನು ಸೂದ್ ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. MTV ಕಂಟೆಂಟ್ ಒರಿಜಿನಲ್ಸ್‌ನ ಅಸೋಸಿಯೇಟ್ ಉಪಾಧ್ಯಕ್ಷ ಮತ್ತು ಹೆಡ್ ಡೆಬೊರಾ ಪಾಲಿಕಾರ್ಪ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಈ ಕಾರ್ಯಕ್ರಮವು ಯುವ ಮನರಂಜನೆಯಲ್ಲಿ ಸಾಂಸ್ಕೃತಿಕ ಆಧಾರವಾಗಿದೆ. ಹೊಸ ಸೀಸನ್‌ನಲ್ಲಿ ತನ್ನ ವೃತ್ತಿಜೀವನವನ್ನು ನಮ್ಮ ಜೊತೆ ಇದೇ ಇಂಡಸ್ಟ್ರಿಯಲ್ಲಿ ಪ್ರಾರಂಭಿಸಿದ ರಿಯಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ" ಎಂದು ಹೇಳಿದ್ದಾರೆ.
ಬಾಲಿವುಡ್ನಲ್ಲಿ ಅಮಿತಾಬ್ ಬಚ್ಚನ್, ಇಮ್ರಾನ್ ಹಶ್ಮಿ, ಕ್ರಿಸ್ಟಲ್ ಡಿಸೋಜಾ, ಸಿದ್ದಾಂತ್ ಕಪೂರ್, ಅನ್ನು ಕಪೂರ್, ಅಲೆಕ್ಸ್ ಓ'ನೆಲ್, ಸಮೀರ್ ಸೋನಿ, ಧೃತಿಮಾನ್ ಚಟರ್ಜಿ ಮತ್ತು ರಘುಬೀರ್ ಯಾದವ್ ನಟಿಸಿರುವ 2021 ರ ಚಲನಚಿತ್ರ ಚೆಹ್ರೆಯಲ್ಲಿ ರಿಯಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇವರ ಮಾಜಿ ಗೆಳೆಯ, ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿವಾದದಲ್ಲಿ ರಿಯಾ ಚಕ್ರವರ್ತಿ ಹೆಸರು ಸಿಲುಕಿಕೊಂಡ ನಂತರ ನಟಿ ಸಿನಿಮಾಗಳಲ್ಲಿ ಹೆಚ್ಚು ಪಾತ್ರಗಳು ಸಿಗುವಲ್ಲಿ ಕಷ್ಟಪಡುವಂತಾಗಿತ್ತು.
ಇದನ್ನೂ ಓದಿ: ಮಹೇಶ್ ಬಾಬು ಕಿಲ್ಲಿಂಗ್ ಲುಕ್ಗೆ ಹೆಂಡತಿ ನಮ್ರತಾ ಕಮೆಂಟ್; 'ಟಾಲಿವುಡ್ನ ಗ್ರೀಕ್ ದೇವತೆ' ಎಂದ ಅಭಿಮಾನಿ