ಕನ್ನಡ ಚಿತ್ರರಂಗದ ಕಂಡ ಶ್ರೇಷ್ಠ ನಟ, ಇಂದಿಗೂ ಅಭಿಮಾನಿಗಳ ಮನದ ಉನ್ನತ ಸ್ಥಾನದಲ್ಲಿ ಉಳಿದಿರುವ ದಿ. ನಟ ಡಾ. ರಾಜ್ಕುಮಾರ್. ಅಣ್ಣಾವ್ರು ನಮ್ಮನ್ನೆಲ್ಲ ಆಗಲಿ ಬರೋಬ್ಬರಿ 17 ವರ್ಷಗಳು ಕಳೆದಿವೆ. ಈ ಮಹಾನ್ ನಟನ ಪುಣ್ಯ ಸ್ಮರಣೆಯನ್ನು ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಲ್ಲಿ ಮಾಡುತ್ತಿದ್ದಾರೆ.
![Rajkumar pictures](https://etvbharatimages.akamaized.net/etvbharat/prod-images/18234289_sdrjgfe.jpg)
ವರನಟ ಡಾ. ರಾಜ್ಕುಮಾರ್ ರಾಜಕೀಯದಿಂದ ದೂರ ಉಳಿದ ವಿಚಾರ ಅಭಿಮಾನಿಗಳ ದೃಷ್ಠಿಯಲ್ಲಿ ಆರಾಧ್ಯ ದೈವವಾಗಲು ಮುಖ್ಯ ಕಾರಣ. ಹಾಗಾದರೆ ಡಾ. ರಾಜ್ಕುಮಾರ್ ಅವರ ಈ ದಿಟ್ಟ ನಿರ್ಧಾರ ಹಿಂದೆ ಏನೆಲ್ಲ ಓಲೈಕೆಗಳು ಆದ್ವು? ಯಾವ ಯಾವ ಪಕ್ಷದವರು ಅವರಿಗೆ ನಮ್ಮ ಪಕ್ಷಕ್ಕೆ ಬನ್ನಿ ಅಂತಾ ದುಂಬಾಲು ಬಿದ್ದಿದ್ದರು ಎಂಬ ಕೆಲ ಸಂಗತಿಗಳನ್ನು ಹೇಳ್ತೀವಿ ನೋಡಿ.
ನಟಸಾರ್ವಭೌಮ ರಾಜ್ಕುಮಾರ್ ಅಂದು ಮನಸ್ಸು ಮಾಡಿದ್ದರೆ ರಾಜಕಾರಣಕ್ಕೆ ಬರಬಹುದಿತ್ತು. ಮುಖ್ಯಮಂತ್ರಿ ಪಟ್ಟವನ್ನೂ ಅಲಕಂರಿಸಬಹುದಿತ್ತು. ಆ ಎಲ್ಲ ಅವಕಾಶ, ಅರ್ಹತೆ ಡಾ. ರಾಜ್ ಅವರಿಗೆ ಇತ್ತು. ಆದರೆ ಅವರು ರಾಜಕೀಯಕ್ಕೆ ಬರಲಿಲ್ಲ. ಬದಲಿಗೆ ಕೊನೆವರೆಗೆ ಕಲಾ ಸೇವೆಯಲ್ಲೇ ತೊಡಗಿದರು. ತಮ್ಮ ಪಾತ್ರಗಳ ಮೂಲಕ ಜನರ ಮೇಲೆ ಅತೀವ ಪ್ರಭಾವ ಬೀರಿದರು. ದಕ್ಷಿಣ ಅಲ್ಲದೇ ಉತ್ತರದಲ್ಲೂ ರಾಜ್ಕುಮಾರ್ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದರು. ಅವರು ಹೋದಲ್ಲಿ ಬಂದಲ್ಲಿ ದೊಡ್ಡ ಜನಸಾಗರ ಸೇರುತ್ತಿತ್ತು. ಅಭಿಮಾನದ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿತ್ತು. ಇದೇ ಸಮಯದಲ್ಲಿ ತುರ್ತು ಪರಿಸ್ಥಿತಿಯನ್ನು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಹೇರಿಕೆ ಮಾಡಿದ್ದ ಕಾರಣಕ್ಕೆ ಅವರ ವಿರುದ್ಧ ವಿರೋಧಿ ಅಲೆ ಎದ್ದಿತ್ತು.
![Rajkumar pictures](https://etvbharatimages.akamaized.net/etvbharat/prod-images/18234289_zdvgawehd.jpg)
ಕರ್ನಾಟಕದಲ್ಲಿ ಉಪಚುನಾವಣೆ ರಂಗೇರಿತ್ತು. ಚಿಕ್ಕಮಗಳೂರಿನಿಂದ ಕಣಕ್ಕಿಳಿದ ಇಂದಿರಾ ಗಾಂಧಿಯವರನ್ನು ಹೇಗಾದರೂ ಮಾಡಿ ಸೋಲಿಸಬೇಕೆಂಬ ಪಣವನ್ನು ವಿರೋಧ ಪಕ್ಷ ತೊಟ್ಟಿತ್ತು. ಅವರನ್ನು ಸೋಲಿಸಬೇಕೆಂಬ ಆಲೋಚನೆ ಮಾಡ್ತಿದ್ದ ಸಮಯದಲ್ಲಿಯೇ ಜನತಾ ಪರಿವಾರದ ನಾಯಕರ ಕಣ್ಣಿಗೆ ಬಿದ್ದಿದ್ದು ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್ಕುಮಾರ್. ಹೀಗಾಗಿ ಬೆಂಗಾವಲು ಪಡೆಯ ಜೊತೆ ದಿನನಿತ್ಯ ರಾಜಕೀಯ ಕ್ಷೇತ್ರದಲ್ಲಿದ್ದವರು ರಾಜ್ ಮನೆಯ ಪ್ರದಕ್ಷಿಣೆ ಹಾಕತೊಡಗಿದರು. ಚುನಾವಣೆ ರಣರಂಗಕ್ಕೆ ಧುಮುಕುವಂತೆ ದುಂಬಾಲನ್ನೂ ಬಿದ್ದರು.
![Rajkumar pictures](https://etvbharatimages.akamaized.net/etvbharat/prod-images/18234289_sdrjgffdte4e.jpg)
ಆ ಕಾಲಕ್ಕೆ ರಾಜ್ ಕುಮಾರ್ ಜನಪ್ರಿಯತೆ ಎಷ್ಟಿತ್ತು ಅಂದರೆ ಇಂದಿರಾ ಗಾಂಧಿ ಎದುರು ಸ್ಪರ್ಧಿಸಿದ್ದರೆ ಇಂದಿರಾ ಗಾಂಧಿ ಸೋಲುತ್ತಿದ್ದರು ಎಂಬ ಮಾತಿದೆ. ಆದರೆ, ಡಾ. ರಾಜ್ಕುಮಾರ್ ರಾಜಕೀಯದ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದರು. ಒತ್ತಡ ಹೆಚ್ಚಾದಂತೆ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಕಾಣೆಯಾದರು. ತಮಿಳುನಾಡಿನ ರಾಣಿಪೇಟ್ ಬಳಿ ಇರುವ ಫಾರ್ಮ್ ಹೌಸ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ನಾಮ ಪತ್ರ ಸಲ್ಲಿಸುವ ಗಡುವು ಮುಗಿದ ನಂತರವೇ ಇವರು ಹೊರಬಂದಿದ್ದು.
ಚುನಾವಣೆಯಲ್ಲಿ ಇಂದಿರಾ ಗಾಂಧಿ ಗೆಲುವು ಕಂಡರು. 1980ರಲ್ಲಿ ಮತ್ತೆ ಸರ್ಕಾರವನ್ನೂ ರಚನೆ ಮಾಡಿದರು. ಗಮನಿಸಬೇಕಾದ ಅಂಶವೆಂದರೆ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಮದ್ರಾಸ್ನಲ್ಲಿದ್ದ ಡಾ.ರಾಜ್ ನಿವಾಸದ ಮೇಲೆ ಐಟಿ ದಾಳಿ ಆಯಿತು. ಐಟಿ ದಾಳಿಯ ವಿಚಾರ ಆ ದಿನದಲ್ಲಿ ದೊಡ್ಡ ಸಮಾಚಾರವಾಯ್ತೇ ಹೊರತು ಡಾ. ರಾಜ್ ಮನೆಯಲ್ಲಿ ಏನೂ ಸಿಗಲಿಲ್ಲ.
ಇದನ್ನೂ ಓದಿ: ಡಾ ರಾಜ್ ಕುಮಾರ್ 17ನೇ ಪುಣ್ಮ ಸ್ಮರಣೆ.. ಕುಟುಂಬಸ್ಥರಿಂದ ಸಮಾಧಿಗೆ ಪೂಜೆ
ಇನ್ನು 1980 ಹಾಗೂ 1982ರ ನಡುವೆ ಡಾ. ರಾಜ್ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರುವ ಅನೇಕ ಪ್ರಯತ್ನಗಳಾದವು. ಒತ್ತಡವನ್ನೂ ಹಾಕಲಾಯಿತು. ಸ್ವಂತ ಪಕ್ಷ ಕಟ್ಟಿ ಅನ್ನುವ ಸಲಹೆಯನ್ನೂ ಅಣ್ಣಾವ್ರಿಗೆ ನೀಡಲಾಯಿತು. ಆದರೆ ಡಾ. ರಾಜ್ ಆಗಲೂ ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ಬದಲಿಗೆ ಆ ಕಾಲಕ್ಕೆ ಅತ್ಯಂತ ಅವಶ್ಯಕವಾಗಿದ್ದ ಗೋಕಾಕ್ ಚಳವಳಿಗೆ ಡಾ. ರಾಜ್ ಧುಮುಕಿದರು. ಏಕೆಂದರೆ, ರಾಜಕೀಯದಲ್ಲಿ ತಮ್ಮನ್ನು ಅಸ್ತ್ರವನ್ನಾಗಿ ಬಳಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆ ಎನ್ನುವ ವಿಚಾರ ಅಷ್ಟರಲ್ಲಾಗಲೇ ಅಣ್ಣಾವ್ರಿಗೆ ಮನದಟ್ಟಾಗಿತ್ತು. ಬೇರೇ ಯಾರನ್ನೋ ಸೋಲಿಸಬೇಕು ಎಂದು ರಾಜಕಾರಣಿಳಲ್ಲಿದ್ದ ಉದ್ದೇಶ ಅರಿವಿಗೆ ಬಂದಿತ್ತು.
ಇದನ್ನೂ ಓದಿ: ನಂದಿನಿ ನಮ್ಮವಳಲ್ಲ 'ನನ್ನವಳು': ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್
ಇನ್ನು ಅದೇ ಸಮಯದಲ್ಲಿ ನಡೆದ ಗೋಕಾಕ್ ಚಳವಳಿಯಲ್ಲಿ ಸಕಾರಾತ್ಮಕ ಉದ್ದೇಶ ಅಡಗಿತ್ತು. ಅಣ್ಣಾವ್ರ ಪಾಲ್ಗೊಳ್ಳುವಿಕೆ ಕೂಡಾ ಅನಿವಾರ್ಯ ಆಗಿತ್ತು. ರಾಜ್ ಅವರು ಗೋಕಾಕ್ ಚಳುವಳಿಯಲ್ಲಿ ಭಾಗಿಯಾಗಲು ಇದೇ ಕಾರಣ. ಇನ್ನೂ ಅಭಿಮಾನಿಗಳನ್ನು ದೂರ ಮಾಡಿಕೊಳ್ಳಲು ಡಾ. ರಾಜ್ಕುಮಾರ್ ಅವರಿಗೆ ಮನಸ್ಸು ಇರಲಿಲ್ಲ. ಹೀಗಾಗಿಯೇ ರಾಜಕೀಯದ ಆಲೋಚನೆಯನ್ನೇ ಬದಿಗಿಟ್ಟ ಅಣ್ಣಾವ್ರು ಕೊನೆವರೆಗೆ ಅಭಿಮಾನಿಗಳ ಮೆಚ್ಚಿನ ರಾಜಕುಮಾರನಾಗಿಯೇ ಉಳಿದರು. ಅಭಿಮಾನಿಗಳಲ್ಲಿಯೇ ದೇವರನ್ನು ಕಂಡರು. ಕಲಾಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿ ಇಟ್ಟರು. ಅಣ್ಣಾವ್ರು ನಮ್ಮನ್ನಗಲಿ 17 ವರ್ಷವಾಗಿದ್ದು, ಅಭಿಮಾನಿಗಳ ಹೃದಯದಲ್ಲಿ ಜೀವಂತ.