ಕನ್ನಡ ಪ್ರೇಕ್ಷಕರಿಗೆ ಹೊಸತನವನ್ನು ಉಣಬಡಿಸುವಲ್ಲಿ ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ ಸದಾ ಮುಂದು. ಪ್ರತಿ ಬಾರಿಯೂ ವಿಭಿನ್ನ ಕಥೆಯನ್ನು ಹೇಳಿ, ಸಿನಿಮಾಪ್ರೇಮಿಗಳನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ. ಇದೀಗ ಶೆಟ್ರು 'ಟೋಬಿ' ಎಂಬ ಹೊಸ ಕಥೆಗೆ ಜೀವ ತುಂಬುತ್ತಿದ್ದಾರೆ. ಈಗಾಗಲೇ ಪೋಸ್ಟರ್ನಿಂದ ಕುತೂಹಲ ಮೂಡಿಸಿರುವ ಚಿತ್ರದ ಟ್ರೇಲರ್ ಈಗಷ್ಟೇ ಬಿಡುಗಡೆಯಾಗಿದೆ.
ಸಹಜ ಅಭಿನಯದ ಮೂಲಕ ಸಿನಿಪ್ರಿಯರ ಮನ ಗೆದ್ದಿರುವ ರಾಜ್ ಬಿ.ಶೆಟ್ಟಿ ನಟನೆಯ 'ಟೋಬಿ' ಚಿತ್ರದ ಮೇಲೆ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಕೆಣಕಿದರೆ ಕುರಿಯೂ ಮಾರಿಯಾಗಬಲ್ಲದು' ಎನ್ನುತ್ತಾ ನಿಮ್ಮ ಮುಂದೆ ಬರಲು ಶೆಟ್ರು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಸದ್ದಿಲ್ಲದೇ ಚಿತ್ರದ ಶೂಟಿಂಗ್ ಕೂಡ ಮುಕ್ತಾಯಗೊಂಡಿದೆ. ಸದ್ಯ 'ಟೋಬಿ' ಟ್ರೇಲರ್ ಬಿಡುಗಡೆಯಾಗಿದ್ದು, ರಾಜ್ ಬಿ.ಶೆಟ್ಟಿ ಅಬ್ಬರಿಸಿದ್ದಾರೆ. ಟ್ರೇಲರ್ ಅಂದ್ರೆ ಹೀಗೆನೇ ಇರ್ಬೇಕು ಅನ್ನೋ ಮಟ್ಟಕ್ಕೆ ಮೂಡಿಬಂದಿದೆ.
- " class="align-text-top noRightClick twitterSection" data="">
ಟ್ರೇಲರ್ ಅನ್ನು ವಿಭಿನ್ನವಾಗಿ ಮತ್ತು ಕಥೆಯ ಕುತೂಹಲ ಹೆಚ್ಚಾಗುವಂತೆ ಕಟ್ಟಿಕೊಡಲಾಗಿದೆ. ರಾಜ್ ಬಿ.ಶೆಟ್ಟಿ ಅವರನ್ನು ಎಷ್ಟು ಶೇಡ್ನಲ್ಲಿ ತೋರಿಸಿದ್ದಾರೆ ಎಂಬುದೇ ಅರ್ಥವಾಗದಂತೆ, ಸಿನಿಮಾ ಬಗ್ಗೆ ಆಸಕ್ತಿ ಮೂಡುವಂತೆ ಡಿಫರೆಂಟ್ ಆಗಿ ತೋರಿಸಲಾಗಿದೆ. ರಾಜ್ ಜೊತೆ ಸಂಯುಕ್ತಾ ಹೊರನಾಡು ಮತ್ತು ಚೈತ್ರಾ ಆಚಾರ್ ನಾಯಕಿಯರಾಗಿ ನಟಿಸಿದ್ದಾರೆ. ಇವರಿಬ್ಬರ ಜೊತೆಯೂ ಶೆಟ್ರು ಕಾಣಿಸಿಕೊಳ್ಳುತ್ತಾರೆ. ಮಗಳಾಗಿಯೂ ಚೈತ್ರಾ ಆಚಾರ್ ಅವರನ್ನು ತೋರಿಸಲಾಗಿದೆ.
ಟ್ರೇಲರ್ ಪ್ರಾರಂಭದಲ್ಲಿ ರಾಜ್ ಬಿ.ಶೆಟ್ಟಿ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಕಾಣಿಸುತ್ತಾರೆ. ಅದೇ ಕೊನೆಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿದ್ದಂತೆ, ಕುರುಚಲು ಗಡ್ಡ, ತಲೆ ಹಾಗೂ ಮೂಗಿನಲ್ಲಿ ರಕ್ತದ ಕಲೆಯಿಂದ ಕೂಡಿರುವ ಗಾಯದೊಂದಿಗೆ ಕಾಣಿಸಿಕೊಳ್ಳುತ್ತಾರೆ. ಅಂತೂ ಈ ಸಿನಿಮಾದ ಮೂಲಕ ಚೈತ್ರಾ ಆಚಾರ್ ಸ್ಯಾಂಡಲ್ವುಡ್ನ ಸ್ಟಾರ್ ನಟಿಯಾಗಿ ಹೊರಹೊಮ್ಮಲಿದ್ದಾರೆ.
'ಟೋಬಿ' ಸಿನಿಮಾ ಆಗಸ್ಟ್ 25 ರಂದು ತೆರೆ ಕಾಣಲಿದೆ. ಟೋಬಿ ಮೂಲ ಕಥೆ ಟಿ.ಕೆ ದಯಾನಂದ್ ಅವರದ್ದು. ಈ ಸಿನಿಮಾವನ್ನು ಬಾಸಿಲ್ ನಿರ್ದೇಶಿಸುತ್ತಿದ್ದಾರೆ. 'ಲೈಟರ್ ಬುದ್ಧ ಫಿಲ್ಮ್ಸ್'ನಡಿ 'ಗರುಡ ಗಮನ ವೃಷಭ ವಾಹನ' ಮೂಡಿಬಂದಿತ್ತು. ಅದೇ ಬ್ಯಾನರ್ನಲ್ಲಿ ರವಿ ರೈ ಕಳಸ 'ಟೋಬಿ'ಯನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ. ಶಾಮಿಲ್ ಬಂಗೇರ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
'ಅಗಸ್ತ್ಯ ಫಿಲ್ಮ್ಸ್' ಕೂಡ ಇದಕ್ಕೆ ಸಾಥ್ ನೀಡಿದೆ. ಪ್ರತಿಷ್ಠಿತ ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದೆ. ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ ಮತ್ತು ಸಂಕಲನ ಹಾಗೂ ಅರ್ಜುನ್ ರಾಜ್ ಮತ್ತು ರಾಜಶೇಖರ್ ಸಾಹಸ ನಿರ್ದೇಶನ ಇರಲಿದೆ. ಅಲ್ಲದೇ 'ಟೋಬಿ' ಬಿಗ್ ಬಜೆಟ್ ಚಿತ್ರವಾಗಿದ್ದು, ರಾಜ್ ಬಿ.ಶೆಟ್ಟಿ ತಂಡ ಕೋಟಿಗಟ್ಟಲೆ ದುಡ್ಡು ಹಾಕಿ ಚಿತ್ರ ಸಿದ್ಧಪಡಿಸುತ್ತಿದ್ದಾರೆ. ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಕೂಡ ಇದ್ದಾರೆ.
ಇದನ್ನೂ ಓದಿ: ಜಗ್ಗೇಶ್ ಜೊತೆ 'ತೋತಾಪುರಿ 2' ಸಿನಿಮಾದಲ್ಲಿ ಡಾಲಿ ಧನಂಜಯ್ ಪಾತ್ರವೇನು ಗೊತ್ತಾ?