ಮೈಸೂರು: ನಗರದ ಎನ್‌ಟಿಎಂ ಶಾಲೆ ಉಳಿಸಲು ಒಕ್ಕೂಟದ ಕಾರ್ಯಕರ್ತರು ನಡೆಸುತ್ತಿರುವ ನಿರಂತರ ಹೋರಾಟವನ್ನು ಚಲನಚಿತ್ರ ನಟಿ ರಚಿತಾ ರಾಮ್ ಬೆಂಬಲಿಸಿದ್ದಾರೆ. ಪ್ರತಿ ಮಂಗಳವಾರ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿ ಕರಪತ್ರ ಹಂಚಿ ಚಳುವಳಿ ನಡೆಸುತ್ತಿರುವ ಒಕ್ಕೂಟದ ಸದಸ್ಯರು ಇಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಕರಪತ್ರ ಚಳುವಳಿ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರಚಿತಾ ರಾಮ್ ಅವರಿಗೂ ಸಹ ಕಾರ್ಯಕರ್ತರು ಕರಪತ್ರ ನೀಡಿದರು. ಅದನ್ನು ಓದಿದ ರಚಿತಾ ರಾಮ್, ಒಂದು ಕನ್ನಡ ಶಾಲೆಯ ಉಳಿವಿಗಾಗಿ ನಿರಂತರ ಹೋರಾಟ ನಡೆಯುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರಲ್ಲದೇ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ತಮ್ಮ ಚಳುವಳಿಗೆ ಪೂರಕವಾಗಿ ನಿಂತು ರಾಜ್ಯ ಮಟ್ಟದ ಶೋಗಳಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಈ ವಿಷಯ ಪ್ರಸ್ತಾಪಿಸುವ ಮೂಲಕ ಬೆಂಬಲ ನೀಡುವಂತೆ ಒಕ್ಕೂಟದ ಸಂಚಾಲಕರಾದ ಎಂ. ಮೋಹನ್ ಕುಮಾರ್ ಗೌಡ ಮನವಿ ಮಾಡಿಕೊಂಡರು. ರಚಿತಾ ರಾಮ್ ಸ್ಪಂದಿಸಿ, ಪೂರಕ ಬೆಂಬಲ ನೀಡುವುದಾಗಿ ತಿಳಿಸಿದರು. ಇಂದಿನ ಪ್ರತಿಭಟನೆ ಹಾಗೂ ಕರಪತ್ರ ಚಳುವಳಿಯಲ್ಲಿ ಒಕ್ಕೂಟದ ಸದಸ್ಯರಾದ ಹೆಚ್.ಸಿ. ಗೋವಿಂದರಾಜು, ಎಂ.ಎನ್. ಸ್ವಾಮಿಗೌಡ, ಹೆಚ್. ಸ್ವಾಮಿ, ಜೆ. ಉಮೇಶ್, ಎಲ್‌ಐಸಿ ಸಿದ್ದಪ್ಪ, ಟಿ. ರವಿಗೌಡ, ಟಿ. ರವೀಂದ್ರ, ಉಮೇಶ್, ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ತನ್ನ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಕಿಚ್ಚ ಸುದೀಪ್
'ಅರಸಿ' ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರ ಮನೆ ಮಾತಾಗಿದ್ದ ರಚಿತಾ ರಮ್ ಸದ್ಯ ಸ್ಯಾಂಡಲ್ವುಡ್ನ ಬಹುಬೇಡಿಕೆ ನಟಿ. 2013ರಲ್ಲಿ ಬಿಡುಗಡೆ ಆದ 'ಬುಲ್ ಬುಲ್' ಚಿತ್ರದಲ್ಲಿ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಬರುವ ಮೇ ತಿಂಗಳಿಗೆ ಕನ್ನಡ ಚಿತ್ರರಂಗದಲ್ಲಿ ದಶಕ ಪೂರೈಸಲಿದ್ದಾರೆ. ಕ್ರಾಂತಿ, ಐ ಲವ್ ಯೂ, ಮಾನ್ಸೂನ್ ರಾಗ, ಎಕ್ ಲವ್ ಯಾ, ಲವ್ ಯೂ ರಚ್ಚು, ರನ್ನ, ಸೀತಾರಾಮ ಕಲ್ಯಾಣ, ಚಕ್ರವ್ಯೂಹ, ರಥಾವರ, ಸೂಪರ್ ಮಚಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಮಿಕಾಸಿಂಗ್ ಕಿಸ್ ಪ್ರಕರಣ: ಅಫಿಡವಿಟ್ ಸಲ್ಲಿಸುವಂತೆ ರಾಖಿ ಸಾವಂತ್ಗೆ ಹೈಕೋರ್ಟ್ ಸೂಚನೆ
ಕ್ರಾಂತಿ ಮತ್ತು ಮಾನ್ಸೂನ್ ರಾಗ ಇತ್ತೀಚೆಗೆ ತೆರೆಕಂಡು ಸದ್ದು ಮಾಡಿರುವ ಸಿನಿಮಾ. ದರ್ಶನ್ ಜೊತೆ ಕ್ರಾಂತಿ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ದರ್ಶನ್ ಅಭಿನಯದ 55ನೇ ಸಿನಿಮಾ ಇದೇ ಸಾಲಿನ ಜನವರಿ 26ರಂದು ಬಿಡುಗಡೆಯಾಗಿ ಯಶಸ್ವಿಯಾಗಿದೆ. ಇನ್ನೂ ಮಾನ್ಸೂನ್ ರಾಗ ಸಿನಿಮಾದಲ್ಲಿ ಮೊದಲ ಬಾರಿಗೆ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. ರಚಿತಾ ರಾಮ್ ಲೈಂಗಿಕ ಕಾರ್ಯಕರ್ತೆ ಪಾತ್ರ ನಿರ್ವಹಿಸಿದ್ದರೆ, ಡಾಲಿ ಧನಂಜಯ್ ಪ್ರೇಮಿಯಾಗಿ ಬಣ್ಣ ಹಚ್ಚಿದ್ದರು.