ಕನ್ನಡದ ರಾಜರತ್ನ, ಅಭಿಮಾನಿಗಳ ಬೆಟ್ಟದ ಹೂ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ ನಮ್ಮನೆಲ್ಲ ಅಗಲಿ ಒಂದು ವರ್ಷ ಆಗ್ತಾ ಬರ್ತಾ ಇದೆ. ಆದರೆ ಅಪ್ಪು ಸ್ಮರಣೆ ಮಾತ್ರ ನಿಂತಿಲ್ಲ. ನಿನ್ನೆಯಷ್ಟೇ ಪವರ್ ಸ್ಟಾರ್ ಕನಸಿನ ಚಿತ್ರ ಗಂಧದ ಗುಡಿ ಟ್ರೈಲರ್ ಬಿಡುಗಡೆ ಆಗಿ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಪುನೀತ್ ರಾಜ್‍ಕುಮಾರ ನೆನಪಿನಲ್ಲಿ ಆಯೋಜಿಸಿರುವ 'ಅಪ್ಪು ಕಪ್' ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಲೀಗ್ನ ಲೋಗೋ, ಜರ್ಸಿ, ಥೀಮ್ ಸಾಂಗ್ ಲಾಂಚ್ ಉದ್ಘಾಟನಾ ಸಮಾರಂಭ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಭಾನುವಾರ ನಡೆಯಿತು.
ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಟಗಾರರಿಗೆ ಶುಭಾಶಯ ಕೋರಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಚಿವ ಆರ್.ಅಶೋಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗಿಯಾಗಿದ್ದರು.
ಅಪ್ಪು ಕಪ್ ಬ್ಯಾಡ್ಮಿಂಟನ್ ಬಗ್ಗೆ ಮಾತಾನಾಡಿದ ಸಚಿವ ಆರ್ ಅಶೋಕ್, ಅಪ್ಪು ಕಪ್ ಬ್ಯಾಡ್ಮಿಂಟನ್ ಲೀಗ್ ಉದ್ಘಾಟನೆಯಾಗಿದೆ. ಎಲ್ಲರೂ ನಿಮ್ಮ ಅಭಿಪ್ರಾಯ ಹಂಚಿಕೊಂಡಿದ್ದೀರಿ. ಎಲ್ಲರೂ ನಾನೇ ಗೆಲ್ಲುತ್ತೇನೆ ಎಂದು ಹೇಳಿದ್ದೀರಿ. ಇದು ಪ್ರತಿಯೊಬ್ಬ ಆಟಗಾರನ ಆತ್ಮವಿಶ್ವಾಸ. ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಒಬ್ಬರೇ ಗೆಲುವು ಆಗುವುದು. ಅಪ್ಪು ಹೆಸರಲ್ಲಿ ಮಾಡುತ್ತಿರುವ ಈ ಪಂದ್ಯಾವಳಿ ಯಶಸ್ವಿಯಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದ ಅವರು, ಅಪ್ಪು ಜೊತೆಗಿನ ಒಡನಾಟ ಬಿಚ್ಚಿಟ್ಟರು. ರಾಜ್‍ಕುಮಾರ ಅವರಲ್ಲಿದ್ದ ಗುಣಗಳು ಅಪ್ಪುವಿನಲ್ಲಿದ್ದವು. ನವೆಂಬರ್ ತಿಂಗಳಲ್ಲಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತವೆ ಎಂದರು.
ಕನ್ನಡ ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಞರು ಆಡ್ತಿರುವ ಈ ಪಂದ್ಯಾವಳಿಯಲ್ಲಿ ಜಾಕಿ ರೈಡರ್ಸ್, ರಾಜ್ ಕುಮಾರ್ ಕಿಂಗ್ಸ್, ಅರಸು ಹಂಟರ್ಸ್, ಬಿಂದಾಸ್ ಸೂಪರ್ ಸ್ಟಾರ್ಸ್, ಮಯೂರ್ ಸ್ಟ್ರೈಕರ್ಸ್, ಜೇಮ್ಸ್ ವಾರಿಯರ್, ಪವರ್ ಪೈಥಾನ್, ದೊಡ್ಮನೆ ಡ್ರ್ಯಾಗನ್ ಸೇರಿದಂತೆ ಎಂಟು ತಂಡಗಳು ಭಾಗಿಯಾಗಲಿವೆ. ದಿಗಂತ್, ಸೃಜನ್ ಲೋಕೇಶ್, ವಸಿಷ್ಠ ಸಿಂಹ, ಪ್ರಿಯಾಂಕಾ ಉಪೇಂದ್ರ, ರಾಗಿಣಿ, ಕವಿತಾ ಲಂಕೇಶ್, ಶ್ವೇತಾ ಶ್ರೀವಾಸ್ತವ್, ಮಾಸ್ಟರ್ ಆನಂದ್ ತಂಡಗಳನ್ನು ಮುನ್ನೆಡಸಲಿದ್ದಾರೆ. ಇದರ ಜೊತೆಗೆ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.
ನಟ ಚೇತನ್ ಸೂರ್ಯ ತಮ್ಮದೇ ಸ್ಟೆಲ್ಲರ್ ಸ್ಟುಡಿಯೋ ಅಂಡ್ ಇವೆಂಟ್ ನಡಿ ಈ ಪಂದ್ಯಾವಳಿ ಆಯೋಜಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್ ಅವರು ಚೇತನ್ಗೆ ಸಾಥ್ ಕೊಟ್ಟಿದ್ದಾರೆ. ಇದೇ ತಿಂಗಳ 21ರಿಂದ ಮೂರು ದಿನಗಳ ಕಾಲ ಅಪ್ಪು ನೆನಪಿನಲ್ಲಿ ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಲೀಗ್ ನಡೆಯಲಿದೆ. ಇನ್ನು ಜಾಕಿ ರೈಡರ್ಸ್ ತಂಡದ ಒಡೆತನದ ಜವಾಬ್ದಾರಿಯನ್ನು ಅಪ್ಲೆಕ್ಸ್ ಸಾಫ್ಟ್‌ವೇರ್ ಮಾಲೀಕರಾದ ಗಿರೀಶ್ ಕುಮಾರ್ ಹೊತ್ತುಕೊಂಡಿದ್ರೆ, ರಾಜ್ ಕುಮಾರ್ ಕಿಂಗ್ಸ್ ತಂಡಕ್ಕೆ ನಿರ್ಮಾಪಕ ರವಿಕುಮಾರ್ ಬಿ ಮಾಲೀಕರು, ಅರಸು ಹಂಟರ್ಸ್ ಟೀಂ ನಮೋ ವೆಲ್ ನೆಸ್ ಮಾಲೀಕ ಮಹೀಂದ್ರ, ಬಿಂದಾಸ್ ಸೂಪರ್ ಸ್ಟಾರ್ಸ್ ತಂಡಕ್ಕೆ ನಿರ್ಮಾಪಕಿ ರಾಮದೇವಿ, ಜೇಮ್ಸ್ ವಾರಿಯರ್ ತಂಡಕ್ಕೆ ಬ್ಯಾಡ್ಮಿಂಟನ್ ಅಕಾಡೆಮಿ ಮಾಲೀಕ ಚಂದ್ರಶೇಖರ್, ಪವರ್ ಪೈಥಾನ್ ತಂಡಕ್ಕೆ ಬಿಗ್ ಮೇಕರ್ಸ್ ಮಾಲೀಕ ಸಂತೋಷ್, ದೊಡ್ಮನೆ ಡ್ರ್ಯಾಗನ್ ತಂಡಕ್ಕೆ ನಿರ್ಮಾಪಕ ಮಂಜುನಾಥ್ ಸುಪುತ್ರ ಹರ್ಷ, ಮಯೂರ್ ಸ್ಟ್ರೈಕರ್ ತಂಡದ ಒಡೆತನವನ್ನು ಗುಬ್ಬಿ ವೀರಣ್ಣ ಮೊಮ್ಮಗ ಹಾಗೂ ಕಾರ್ನರ್ ಹೌಸ್ ಮಾಲೀಕ ಶಿವಪ್ರದೀಪ್ ಹೊತ್ತುಕೊಂಡಿದ್ದಾರೆ.
(ಓದಿ: ಗಂಧದಗುಡಿ ಟ್ರೈಲರ್ ರಿಲೀಸ್ ವೇಳೆ ಅಶ್ವಿನಿ ಪುನೀತ್ ರಾಜ್ಕುಮಾರ್ ಭಾವುಕ: ಅಪ್ಪು ಸಿನಿಮಾ ಬಗ್ಗೆ ಹೇಳಿದ್ದೇನು?)