ದಿ.ಪುನೀತ್ ರಾಜ್‍ಕುಮಾರ್ ಅವರ ಕನಸಿನ ಗಂಧದ ಗುಡಿ ಸಿನಿಮಾ ಇದೇ 19ರಂದು ಬಿಡುಗಡೆ ಆಗಲಿದೆ. ಅಂದು ತೆರೆ ಮೇಲೆ ಅಭಿಮಾನಿಗಳಿಗೆ ಅಪ್ಪು ದರ್ಶನ ನೀಡಲಿದ್ದಾರೆ. ಇದರ ಅಂಗವಾಗಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಗಂಧದ ಗುಡಿ ಪ್ರೀ ರಿಲೀಸ್ ಇವೆಂಟ್ ನಡೆಯುತ್ತಿದೆ. ಪುನೀತ್ ಪರ್ವ ಎಂದು ಹೆಸರಿಡಲಾಗಿರುವ ಈ ಕಾರ್ಯಕ್ರಮ ಸಂಜೆ 6ಕ್ಕೆ ಆರಂಭಗೊಂಡಿದೆ.
ಪುನೀತ್ ರಾಜ್‍ಕುಮಾರ್ ಒಬ್ಬ ಸ್ಟಾರ್ ನಟನಾಗಿರದೇ ಸಾಮಾಜಿಕ ಕಳಕಳಿ, ಪರಿಸರದ ಬಗ್ಗೆ ಕಾಳಜಿ ಹೊಂದಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಎಂಬ ಕನಸುಗಳನ್ನು ಕಂಡಿದ್ದರು. ಅದರಲ್ಲಿ ಈ ಗಂಧದ ಗುಡಿಯೂ ಒಂದು. ಕರ್ನಾಟಕದ ಅರಣ್ಯ ಸಂಪತ್ತು, ವನ್ಯಜೀವಿಗಳ ಬದುಕು ಸೇರಿದಂತೆ ಅನೇಕ ಸಂಗತಿಗಳನ್ನು ಚಿತ್ರೀಕರಣ ಮಾಡಲಾಗಿದೆ. ವೈಲ್ಡ್ ಫೋಟೋಗ್ರಾಫರ್ ಅಮೋಘ ವರ್ಷ ಸಹಯೋಗದಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.
ಈ ಪ್ರಾಜೆಕ್ಟ್ ಮೇಲೆ ಪುನೀತ್ ರಾಜ್‍ಕುಮಾರ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ತುಂಬ ಕಾಳಜಿ ವಹಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ಶೂಟಿಂಗ್ ಮಾಡಿದ್ದರು. ಆದರೆ, ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದರು.
ಕಳೆದ ವರ್ಷ ಅಕ್ಟೋಬರ್ 29ಕ್ಕೆ ಅಪ್ಪು ನಿಧನರಾಗಿದ್ದರು. ಈ ದಿನಕ್ಕೂ ಒಂದು ದಿನದ ಮುಂಚೆ, ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಅಕ್ಟೋಬರ್ 28ಕ್ಕೆ ಗಂಧದ ಗುಡಿ ಬಿಡುಗಡೆ ಆಗಲಿದೆ. ಇದೀಗ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಐದು ಎಕರೆ ಜಾಗದಲ್ಲಿ ಪ್ರೀ ರಿಲೀಸ್ ಈವೆಂಟ್ ನಡೆಯುತ್ತಿದೆ.
ಕಾರ್ಯಕ್ರಮಕ್ಕೆ ವಿಐಪಿ ಹಾಗೂ ವಿವಿಐಪಿಗಳು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದಾರೆ. 80-60 ಅಳತೆಯ 10 ಅಡಿ ಎತ್ತರದಲ್ಲಿ ವೇದಿಕೆ ರೆಡಿಯಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಲೂ LED ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ. 50ಕ್ಕೂ ಹೆಚ್ಚು ಪುನೀತ್ ರಾಜ್‍ಕುಮಾರ್ ಕಟೌಟ್ಗಳನ್ನು ಹಾಕಲಾಗಿದೆ.
500ಕ್ಕೂ ಹೆಚ್ಚು ವಿವಿಐಪಿಗಳು, 5000 ವಿಐಪಿಗಳು ಹಾಗೂ ಅಭಿಮಾನಿಗಳಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಸುತ್ತಲಿನ ಎಂಟು ಎಲ್ಇಡಿ ಸ್ಕ್ರೀನ್ಗಳ ವ್ಯವಸ್ಥೆಯಿದೆ. ಅಭಿಮಾನಿಗಳಿಗಾಗಿ ಮೂರು ಲಕ್ಷ ಆಸನ ವ್ಯವಸ್ಥೆಯಾಗಿದೆ. ಇದರ ಜೊತೆಗೆ ಎರಡು ಲಕ್ಷಕ್ಕೂ ಹೆಚ್ಚು ಮಂದಿ ನಿಂತು ನೋಡುವ ಅವಕಾಶ ಕಲ್ಪಿಸಲಾಗಿದೆ. ಅನುಶ್ರೀ ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ.