2022ನೇ ವರ್ಷಕ್ಕೆ ಗುಡ್ ಬೈ ಹೇಳಿ 2023ನೇ ವರ್ಷವನ್ನು ಸ್ವಾಗತಿಸಲು ಕೆಲವೇ ಗಂಟೆಗಳು ಬಾಕಿ ಇವೆ. ಈಗಾಗಲೇ ವಿದೇಶಗಳಲ್ಲಿ 2023ನೇ ವರ್ಷವನ್ನು ಕುಣಿದು ಕುಪ್ಪಳಿಸುವ ಮೂಲಕ ಸ್ವಾಗತಿಸಲಾಗಿದೆ. ಈ ಸಂಭ್ರಮ ನಮ್ಮ ದೇಶದಲ್ಲೂ ನಡೆದುಕೊಂಡು ಬಂದಿದೆ. ಈ ಆಚರಣೆಯನ್ನು ನಟಿ ಹಾಗು ನಿರ್ದೇಶಕಿ ರೂಪ ಅಯ್ಯರ್ ಹಾಗು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ನೇತೃತ್ವದಲ್ಲಿ ವಿರೋಧಿಸಲಾಯಿತು. ಇವರಿಗೆ ವಿಶ್ವ ಹಿಂದೂ ಮಹಿಳಾ ಪ್ರತಿಷ್ಠಾನ ಹಾಗು ನಾರಿ ಶಕ್ತಿ ತರುಣಿ ಸತ್ಸಂಗ ಮತ್ತು ಬ್ರಹ್ಮಜ್ಮಾನ ಪೀಠ ಬ್ರಾಹ್ಮಿ ಮಹಿಳಾ ಸಂಘ, ಶ್ರೀ ಶಾರದೆ ಮಹಿಳೆಯರ ಒಕ್ಕೂಟ ಸಾಥ್ ನೀಡಿದವು.
ಈ ಹೊಸ ವರ್ಷದ ಆಚರಣೆಯನ್ನು ಬೈಕ್ ಹಾಗೂ ಪಾದಯಾತ್ರೆ ಮಾಡುವ ಮೂಲಕ ವಿರೋಧಿಸಲಾಯಿತು. ನಟಿ ರೂಪ ಅಯ್ಯರ್ ನೇತೃತ್ವದಲ್ಲಿ ಜಯನಗರ ನಾಲ್ಕನೇ ಬ್ಲಾಕ್ ರಾಘವೇಂದ್ರ ಸ್ವಾಮಿ ಮಠದಿಂದ ಜಯನಗರದ ಅಶೋಕ ಪಿಲ್ಲರ್ ವರೆಗೆ ಸುಮಾರು ಆರು ಕಿಲೋ ಮೀಟರ್ ವರೆಗೆ ಪಾದಯಾತ್ರೆ ಮಾಡಲಾಯಿತು.
ಭಾರತೀಯರು ಎಂದು ನೆನಪಿಸುವ ಕಾಲ ಬಾರದೇ ಇರಲಿ : ಬಳಿಕ ಮಾತನಾಡಿದ ನಟಿ ಹಾಗು ನಿರ್ದೇಶಕಿ ರೂಪ ಅಯ್ಯರ್, ಈ ಹೊಸ ವರ್ಷಾಚರಣೆ ನಮ್ಮ ಭಾರತೀಯ ಸಂಸ್ಕೃತಿ ಅಲ್ಲ. ಆದರೂ ಎಲ್ಲರೂ ಈ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ. ನಾವೆಲ್ಲಾ ಭಾರತೀಯರು ಎಂದು ನೆನಪಿಸಬೇಕಾಗಿರುವುದು ನಮ್ಮ ದುರಂತ. ಯುಗಾದಿ ಹಬ್ಬ ನಮಗೆ ಹೊಸ ವರ್ಷ. ಆದರೆ ನಮ್ಮ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ನಾವು ಹೇಳಿಕೊಟ್ಟಿಲ್ಲ. ಹಬ್ಬದ ದಿನ ತಂದೆ ತಾಯಿ ಸಿನಿಮಾ ನೋಡಲು ಹೋಗುತ್ತಾರೆ. ಈ ಪಾದಯಾತ್ರೆ ಮಾಡುವ ಉದ್ದೇಶ ಏನೆಂದರೆ ನಾವು ಭಾರತೀಯರು ಎಂದು ನೆನಪಿಸುವ ಕಾಲ ಬಾರದೇ ಇರಲಿ ಎಂಬುದಾಗಿ ನಟಿ ರೂಪ ಅಯ್ಯರ್ ಹೇಳಿದರು.
ಪಾರ್ಟಿ ನಮ್ಮ ಸಂಸ್ಕೃತಿ ಅಲ್ಲ : ಪಾದಯಾತ್ರೆಯ ನೇತೃತ್ವ ವಹಿಸಿದ್ದ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಮಾತನಾಡಿ, ಪಾರ್ಟಿ ಸಂಸ್ಕೃತಿ ನಮ್ಮ ಅಲ್ಲ. ನಾವು ಭಾರತೀಯ ಸಂಪ್ರದಾಯವನ್ನು ಮರೆಯುತ್ತಿದ್ದೇವೆ. ಎಣ್ಣೆ ಹೊಡೆದು ಮೈಮರಿಬೇಡಿ ಎಂದು ಕಿವಿಮಾತು ಹೇಳಿದರು.
ಇನ್ನು ಹಿಂದು ಸಂಪ್ರದಾಯದ ಪ್ರಕಾರ ನಮಗೆ ಹೊಸ ವರ್ಷ ಅಂದರೆ ವಸಂತ ಕಾಲದಲ್ಲಿ ಯುಗಾದಿ ಹಬ್ಬವನ್ನು ನಾವು ಆಚರಣೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿ ಹೆಚ್ಚು ಉನ್ನತ ಸ್ಥಾನ ಸಿಗುತ್ತದೆ. ಕಲಿಯುಗ ಮುಗಿದು ಹೋಗಿ, ಎಲ್ಲಿ ಅಧರ್ಮ ಮಣ್ಣು ಮುಕ್ಕುತ್ತದೆ. ರಾಜಕಾರಣಿಗಳು ಅನ್ಯಾಯ ಮಾಡುವುದನ್ನು ಬಿಟ್ಟು ಒಳ್ಳೆಯದನ್ನು ಮಾಡಿ. ಇಲ್ಲವೆಂದರೆ ಗಂಡಾಂತರಗಳು ಗ್ಯಾರಂಟಿ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದರು. ಪಾದಯಾತ್ರೆಯ ಮೂಲಕ ನಮ್ಮ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಗುರೂಜಿ ಇದೇ ವೇಳೆ ಹೇಳಿದರು.
ಇದನ್ನೂ ಓದಿ :ಹೊಸ ವರ್ಷಾಚರಣೆಗೆ ಕ್ಷಣಗಣನೆ.. 2023 ನ್ನು ಸ್ವಾಗತಿಸಲು ಬೆಂಗಳೂರಿನಲ್ಲಿ ಸಜ್ಜಾದ ಜನಸಾಗರ