ಕನ್ನಡ ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಎಂದೇ ಖ್ಯಾತರಾಗಿರುವ ಪ್ರೇಮ್ ಈಗಾಗಲೇ ಕೆಲ ಸಿನಿಮಾಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಇವರು ನಟಿಸಿದ ಬಹುತೇಕ ಚಿತ್ರಗಳು ಕಂಪ್ಲೀಟ್ ಲವ್ ಸ್ಟೋರಿಯನ್ನೇ ಹೊಂದಿದೆ. ತಮ್ಮ ಅಭಿನಯದಿಂದ ಕನ್ನಡಿಗರ ಮನ ಗೆಲ್ಲುವ ಜೊತೆಗೆ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
2004ರಲ್ಲಿ ತೆರೆಕಂಡ ಪ್ರಾಣ ಸಿನಿಮಾ ಮೂಲಕ ವೃತ್ತಿ ಜೀವನ ಆರಂಭಿಸಿದರು. ಆದರೆ ಚೊಚ್ಚಲ ಚಿತ್ರ ಯುವ ನಟನಿಗೆ ದೊಡ್ಡ ಮಟ್ಟದ ಹೆಸರು ತಂದುಕೊಡಲಿಲ್ಲ. ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿಸಿದಷ್ಟು ಮಟ್ಟಿಗೆ ಸದ್ದು ಮಾಡಲಿಲ್ಲ. ಬಳಿಕ 2005ರಲ್ಲಿ ತೆರೆಕಂಡ ನೆನಪಿರಲಿ ಚಿತ್ರ ಪ್ರೇಮ್ ಸಿನಿ ಕರಿಯರ್ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಚಿತ್ರ ಸೂಪರ್ ಹಿಟ್ ಆಗಿದ್ದಲ್ಲದೇ, ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದಿದ್ದರು. ಅದಾದ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ಸ್ಯಾಂಡಲ್ವುಡ್ನ ಲವ್ಲಿ ಸ್ಟಾರ್. 'ಪ್ರೇಮಂ ಪೂಜ್ಯಂ' ಪ್ರೇಮ್ ಕೊನೆಯದಾಗಿ ಕಾಣಿಸಿಕೊಂಡಿರುವ ಚಿತ್ರ. 2021ರ ನವೆಂಬರ್ನಲ್ಲಿ ಈ ಸಿನಿಮಾ ತೆರೆ ಕಂಡಿತ್ತು.
ಪ್ರೇಮಂ ಪೂಜ್ಯಂ ಸಿನಿಮಾ ನಂತರ ಲವ್ಲಿ ಸ್ಟಾರ್ ಪ್ರೇಮ್ ಏನು ಮಾಡ್ತಿದ್ದಾರೆ? ಅವರ ಮುಂದಿನ ಚಿತ್ರ ಯಾವುದು? ಯಾವ ನಟಿಯೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ? ನಿರ್ದೇಶಕರು ಯಾರು? ಹೀಗೆ ಹಲವು ಪ್ರಶ್ನೆಗಳು ಅವರ ಅಭಿಮಾನಿಗಳಲ್ಲಿತ್ತು. ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದ ಪ್ರೇಮ್ ಹೆಸರಿಡದ ಹೊಸ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿದ್ದಾರೆ. ಪ್ರೇಮ್ ಜೊತೆ ಟಗರು ಪುಟ್ಟಿ ಖ್ಯಾತಿಯ ಮಾನ್ವಿತಾ ಕಾಮತ್ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದಾರೆ. ಜೂಟಾಟ, ಗುಬ್ಬಚ್ಚಿ ಸಿನಿಮಾಗಳ ಸಾರಥಿ ಅಥರ್ವ್ ಆರ್ಯ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.
ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ.
ಇದನ್ನೂ ಓದಿ: 'ವೀಕೆಂಡ್ ವಿತ್ ರಮೇಶ್'ನಲ್ಲಿ ಮಂಡ್ಯ ರಮೇಶ್, ಅವಿನಾಶ್: ಶೋ ವೀಕ್ಷಿಸಲು ಅಭಿಮಾನಿಗಳ ಕಾತರ
ಕೆಆರ್ಎಸ್ ಪ್ರೊಡಕ್ಷನ್ಸ್ ಅಡಿ ತಬಲಾ ನಾಣಿ ಹಾಗೂ ಸ್ನೇಹಿತರು ಜೊತೆಗೂಡಿ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ ಇದು. ತಂದೆಯ ಮಹತ್ವ ಸಾರುವ, ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಆತ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಎಂಬುದು ಕಥೆಯ ತಿರುಳು. ಇಲ್ಲಿ ತಂದೆಯಾಗಿ ತಬಲಾ ನಾಣಿ ಬಣ್ಣ ಹಚ್ಚಿದ್ದು, ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.
ಇದನ್ನೂ ಓದಿ: ಐಷಾರಾಮಿ ಮನೆ ಖರೀದಿಸಿದ ರಿಯಲ್ ಸ್ಟಾರ್:'ಅದೃಷ್ಟದ ಹುಡುಕಾಟ'ದಲ್ಲಿ ಉಪ್ಪಿ!
ಸಿನಿಮಾಗೆ ನಾಗಾರ್ಜುನ್ ಆರ್ ಡಿ ಛಾಯಾಗ್ರಹಣ, ವೇಧಿಕ್ ವೀರ ಸಂಕಲನ, ಗಂಗಮ್ ರಾಜು ಕೊರಿಯೋಗ್ರಾಫಿ ಇದೆ. ಆಕಾಶ್ ಪರ್ವ ಸಂಗೀತ ನಿರ್ದೇಶನ ಇರುವ ಹಾಡುಗಳಿಗೆ ಡಾ.ನಾಗೇಂದ್ರ ಪ್ರಸಾದ್, ಕವಿರಾಜ್, ಕೆ. ಕಲ್ಯಾಣ್, ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ 65 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.