ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಪೊನ್ನಿಯಿನ್ ಸೆಲ್ವನ್ 2' (Ponniyin Selvan 2) ಶುಕ್ರವಾರ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ನಿರೀಕ್ಷೆಯಂತೆ ಸಿನಿಮಾ ವೀಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಬಿಡುಗಡೆಯಾದ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದೆ. ಎರಡಂಕಿಯಿಂದ ಗಲ್ಲಾಪಟ್ಟಿಗೆ ಸಂಗ್ರಹ ಶುರುವಾಗಿದೆ. 'ಪೊನ್ನಿಯಿನ್ ಸೆಲ್ವನ್ 2' ಮೊದಲ ದಿನ 32 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಸಫಲವಾಗಿದೆ. ಚಿತ್ರದ ಮೊದಲ ಭಾಗ ಕೂಡ ಅದ್ಭುತ ಯಶಸ್ಸನ್ನು ಕಂಡಿತ್ತು. ಇದೀಗ ಸೀಕ್ವೆಲೆ ದಾಖಲೆಗಳನ್ನು ಮುರಿಯಲು ಸಜ್ಜಾಗಿರುವಂತೆ ತೋರುತ್ತಿದೆ.
ಮಾಹಿತಿ ಪ್ರಕಾರ, ಪೊನ್ನಿಯಿನ್ ಸೆಲ್ವನ್ 2 ಶುಕ್ರವಾರ ಶೇ. 59.94ರಷ್ಟು ತಮಿಳು ಆಕ್ಯುಪೆನ್ಸಿ (ಆಸನ ಭರ್ತಿ), ಶೇ. 10.20ರಷ್ಟು ಹಿಂದಿ ಆಕ್ಯುಪೆನ್ಸಿ ಮತ್ತು ಶೇ. 33.23ರಷ್ಟು ಮಲಯಾಳಂ ಆಕ್ಯುಪೆನ್ಸಿಯೊಂದಿಗೆ 32 ಕೋಟಿ ರೂ. ಸಂಗ್ರಹಿಸಿದೆ.
ಚಲನಚಿತ್ರ ವ್ಯಾಪಾರ ವಿಶ್ಲೇಷಕರಾದ ಮನೋಬಾಲಾ ವಿಜಯಬಾಲನ್ ಪ್ರಕಾರ, 'ಪೊನ್ನಿಯಿನ್ ಸೆಲ್ವನ್ 2'ಗೆ ಉತ್ತಮ ಆರಂಭಿಕ ದಿನ. ಚಲನಚಿತ್ರವು ವಾರಿಸು ಸಿನಿಮಾವನ್ನು ಸೋಲಿಸುವ ಮೂಲಕ ರಾಜ್ಯದಲ್ಲಿ ವರ್ಷದ ಎರಡನೇ ಅತ್ಯುತ್ತಮ ಓಪನಿಂಗ್ ಅನ್ನು ಪಡೆದುಕೊಂಡಿದೆ. ತುನಿವು 2023ರಲ್ಲಿ ಕೆಲಕ್ಷನ್ ವಿಚಾರದಲ್ಲಿ ಮೊದಲ ಸ್ಥಾನವನ್ನು ಹೊಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸಿನಿಮಾ ವ್ಯವಹಾರ ವಿಶ್ಲೇಷಕ ರಮೇಶ್ ಬಾಲಾ ಅವರು ಟ್ವೀಟ್ ಮಾಡಿದ್ದು, " 'ಪೊನ್ನಿಯಿನ್ ಸೆಲ್ವನ್ 2' ಮಹಾಕಾವ್ಯ ನಾಟಕವು ಅಮೆರಿಕದಲ್ಲಿಯೂ ಸಹ ಉತ್ತಮ ಆರಂಭವನ್ನು ಪಡೆದುಕೊಂಡಿದೆ ಎಂದು ಬಹಿರಂಗಪಡಿಸಿದರು. ಮಲೇಷ್ಯಾ, ಸಿಂಗಾಪುರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಚಿತ್ರ ಪ್ರಭಾವ ಬೀರಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: 13 ವರ್ಷಗಳ ನಂತರ ಐಟಿ ಉದ್ಯೋಗಿಯಾದ ಸಮಂತಾ: 'ಖುಷಿ' ಪೋಸ್ಟರ್ ರಿಲೀಸ್
'ಪೊನ್ನಿಯಿನ್ ಸೆಲ್ವನ್' ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿಯ ರೂಪಾಂತರ. ಅವರ ಕಾದಂಬರಿ ಹೆಸರು ಕೂಡ 'ಪೊನ್ನಿಯಿನ್ ಸೆಲ್ವನ್'. ಚಲನಚಿತ್ರದ ಮೊದಲ ಭಾಗವು ಕಳೆದ ಸೆಪ್ಟೆಂಬರ್ನಲ್ಲಿ ತೆರೆಕಂಡು ಸದ್ದು ಮಾಡಿತ್ತು. ಇದು ತಮಿಳು ಚಲನಚಿತ್ರರಂಗದಲ್ಲಿ ಉತ್ತಮ ಓಪನಿಂಗ್ ಪಡೆದಿರುವ ಸಿನಿಮಾ. ವಿಶ್ವದಾದ್ಯಂತ 80 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಒಟ್ಟಾರೆಯಾಗಿ, ಪ್ರಪಂಚದಾದ್ಯಂತ 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅದರ ಮುಂದುವರಿದ ಭಾಗ ಕೂಡ ಉತ್ತಮ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದೆ. ಮೊದಲ ಭಾಗದಂತೆ ಇದು ಸಹ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಷಾ, ಶೋಭಿತಾ, ಪ್ರಕಾಶ್ ರಾಜ್, ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಅನೇಕ ಘಟಾನುಘಟಿಗಳ ಚಿತ್ರ ಮಾತ್ರ ಭಾರೀ ಸದ್ದು ಮಾಡುತ್ತಿದ್ದು, ಎಷ್ಟು ಕಲೆಕ್ಷನ್ ಮಾಡಬಹುದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.
ಇದನ್ನೂ ಓದಿ: ಜೂ. 1ರಂದು ಕಿಚ್ಚ ಸುದೀಪ್ ಸಿನಿಮಾ ಲಾಂಚ್: ಪ್ರಚಾರದ ನಡುವೆಯೇ ಅಭಿಮಾನಿಗಳಿಗೆ ಗುಡ್ನ್ಯೂಸ್