ವಿವಾದಗಳ ನಡುವೆ ತೆರಕಂಡ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಅಭಿನಯದ 'ಪಠಾಣ್' ಸೂಪರ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ವಿಶ್ವದಾದ್ಯಂತ ಈವರೆಗೆ 981 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಚಿತ್ರರಂಗದ ಇತಿಹಾಸದಲ್ಲಿ 'ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರ'ವಾಗಿ ಹೊರಹೊಮ್ಮಿದೆ. ಯಶ್ ರಾಜ್ ಫಿಲ್ಮ್ಸ್ (YRF) ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಚಿತ್ರದ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
981 ಕೋಟಿ ರೂ. ಕಲೆಕ್ಷನ್: ಈ ಚಿತ್ರವು ಅಮೀರ್ ಖಾನ್ ಅವರ ದಂಗಲ್ ದಾಖಲೆಯನ್ನು ಮುರಿದಿದೆ. 1,000 ಕೋಟಿ ರೂಪಾಯಿ ಕಲೆಕ್ಷನ್ನತ್ತ ಸಾಗುತ್ತಿದೆ. ಪಠಾಣ್ ಚಿತ್ರ ಈವರೆಗೆ ಭಾರತದಲ್ಲಿ 612 ಕೋಟಿ ರೂ., ಹೊರದೇಶಗಳಲ್ಲಿ 369 ಕೋಟಿ ರೂ. ಸೇರಿ ಒಟ್ಟು 981ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಯಶ್ ರಾಜ್ ಫಿಲ್ಮ್ಸ್ ಪ್ರಕಾರ, ಪಠಾಣ್ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿದೆ. ಎಸ್‌ಆರ್‌ಕೆ ಅವರ ಪಠಾಣ್ ಈಗ ಯಶಸ್ಸಿನ ವಿಷಯದಲ್ಲಿ ಕೆಜಿಎಫ್ 2 ಮತ್ತು ಬಾಹುಬಲಿ 2 ಸಾಲಿನಲ್ಲಿದೆ.
ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಶಾರುಖ್ ಖಾನ್ ಹಿಂದಿ ಚಿತ್ರರಂಗಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಆ್ಯಕ್ಷನ್ ಹೀರೋ ಆಗಬೇಕೆಂಬ ಕನಸು ಹೊತ್ತು ಬಂದ ಶಾರುಖ್ ಆಗಿದ್ದು ಮಾತ್ರ ರೊಮ್ಯಾಂಟಿಕ್ ಹೀರೋ. ಆದ್ರೆ ಪಠಾಣ್ ಸಿನಿಮಾದಲ್ಲಿ ಸಂಪೂರ್ಣ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೇಶರಂ ರಂಗ್ ಹಾಡಿನ ವಿಚಾರವಾಗಿ ಚಿತ್ರ ಸಾಕಷ್ಟು ವಿರೋಧ ಎದುರಿಸಿತ್ತು. ನಟಿಯ ವೇಷಭೂಷಣಕ್ಕೆ ಕೆಲವರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಿನಿಮಾ ಮೇಲೆ ಬಾಯ್ಕಾಟ್ ಬಿಸಿ ಇತ್ತು. ಆದ್ರೆ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮತ್ತು ನಿರ್ದೇಶಕ ಸಿದ್ಧಾರ್ಥ್ ಆನಂದ್ ಸೇರಿದಂತೆ ಚಿತ್ರತಂಡ ಆಶಾವಾದದೊಂದಿಗೆ ಮುನ್ನಡೆಯಿತು.
ಪಠಾಣ್ ವಿವಾದ: ಸಿನಿಮಾ ಬಿಡುಗಡೆ ಆದ ಹೊತ್ತಲ್ಲೂ ಪ್ರತಿಭಟನೆ ಮೂಲಕ ಹಲವೆಡೆ ಆಕ್ರೋಶ ವ್ಯಕ್ತವಾಯಿತು. ಆದ್ರೆ ಚಿತ್ರದ ಯಶಸ್ಸು ಮಾತ್ರ ಅಭೂತಪೂರ್ವ. ಪಠಾಣ್ ಕಲೆಕ್ಷನ್ ನಂಬರ್ ಕೇಳಿ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರೂ ಹುಬ್ಬೇರಿಸಿದ್ದಾರೆ. ಜನವರಿ 25ರಂದು ತೆರೆಕಂಡ ಈ ಸಿನಿಮಾ ಈವರೆಗೆ ಜಗತ್ತಿನಾದ್ಯಂತ 981 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: 17 ವರ್ಷದ ಸಂಭ್ರಮದಲ್ಲಿ 'ಮೈ ಆಟೋಗ್ರಾಫ್': ಹರ್ಷ ಹಂಚಿಕೊಂಡ ಅಭಿನಯ ಚಕ್ರವರ್ತಿ
ಕೆಲ ದಿನಗಳ ಹಿಂದೆ ಪಠಾಣ್ ಸಕ್ಸಸ್ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದ ನಿರ್ದೇಶಕ ಸಿದ್ಧಾರ್ಥ್ ಆನಂದ್, ಬಾಯ್ಕಾಟ್ ಗುಂಪುಗಳ ಬಗ್ಗೆಯೂ ಮಾತನಾಡಿದ್ದರು. ಪಠಾಣ್ ಬಾಯ್ಕಾಟ್ ಅಜೆಂಡಾ ವಿಫಲವಾಗಿದೆ. ನಮ್ಮ ಚಿತ್ರದಲ್ಲಿ ಆಕ್ಷೇಪಾರ್ಹ ವಿಷಯಗಳು ಇಲ್ಲ. ಆ ವಿಷಯ ನನಗೆ ಮತ್ತು ನಮ್ಮ ಚಿತ್ರತಂಡಕ್ಕೆ ಗೊತ್ತಿತ್ತು. ಆದ್ರೆ ಅದನ್ನು ಜನರಿಗೆ ತಲುಪಿಸುವವರು ಯಾರು ಎಂಬ ಭಯವಿತ್ತು. ಸಿನಿಮಾ ವೀಕ್ಷಣೆ ಮಾಡಿದರೆ ಮಾತ್ರ ಸತ್ಯ ಗೊತ್ತಾಗಲಿದೆ. ಭಯದ ನಡುವೆ ಪ್ರೇಕ್ಷಕರು ನಮ್ಮ ಸಿನಿಮಾ ನೋಡಿ ನಮ್ಮನ್ನು ಗೆಲ್ಲಿಸಿದ್ದಾರೆ. ಬಹಿಷ್ಕಾರ ತಂಡದ ಗುರಿ ವಿಫಲಗೊಂಡಿವೆ. ಪಠಾಣ್ ಚಿತ್ರಕ್ಕೆ ಬಹಿಷ್ಕಾರ ಹಾಕಲು ಬಯಸುವವರು ಸಹ ಬಂದು ಚಿತ್ರ ವೀಕ್ಷಿಸಲಿ ಎಂದು ತಿಳಿಸಿದ್ದರು.