ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಬಾಲಿವುಡ್ ಆ್ಯಕ್ಷನ್ ಥ್ರಿಲ್ಲರ್ ಪಠಾಣ್ ಸಿನಿಮಾ ಮತ್ತೊಂದು ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಹೌದು, 1971ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಚಲನಚಿತ್ರವಾಗಿ ಇತಿಹಾಸವನ್ನು ನಿರ್ಮಿಸಲು ಸಿದ್ಧವಾಗಿದೆ 'ಪಠಾಣ್'.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಮತ್ತು ಆದಿತ್ಯ ಚೋಪ್ರಾ ನಿರ್ಮಾಣದ ಈ ಚಿತ್ರ ಈ ವರ್ಷದ ಆರಂಭದಲ್ಲಿ ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಜನವರಿ ಕೊನೆಯಲ್ಲಿ ಬಿಡುಗಡೆಯಾದ ಈ ಸಿನಿಮಾ ವಿಶ್ವಾದ್ಯಂತ 1,000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಹಿಂದಿ ಚಿತ್ರರಂಗದ ಬಹುತೇಕ ದಾಖಲೆಗಳು ಪುಡಿಯಾಗಿವೆ. ಇದೀಗ ಮತ್ತೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಹೌದು, ಪಠಾಣ್ ಇದೇ ಮೇ 12ರಂದು ಬಾಂಗ್ಲಾದೇಶದ ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ ಮತ್ತು ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.
ಯಶ್ ರಾಜ್ ಫಿಲ್ಮ್ಸ್ನ ಅಂತಾರಾಷ್ಟ್ರೀಯ ವಿತರಣಾ ವಿಭಾಗದ ಉಪಾಧ್ಯಕ್ಷ ನೆಲ್ಸನ್ ಡಿಸೋಜಾ ಮಾತನಾಡಿ, "ಸಿನಿಮಾ ಯಾವಾಗಲೂ ರಾಷ್ಟ್ರಗಳು, ಜನಾಂಗಗಳು ಮತ್ತು ಸಂಸ್ಕೃತಿಗಳನ್ನು ಒಗ್ಗೂಡಿಸುವ ಶಕ್ತಿಯಾಗಿದೆ. ಇದು ಗಡಿಗಳನ್ನು ಮೀರಿ, ಜನರನ್ನು ಹುರಿದುಂಬಿಸುತ್ತದೆ ಮತ್ತು ಜನರನ್ನು ಒಟ್ಟುಗೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಾವು ನಂಬಲಾಗದಷ್ಟು ರೋಮಾಂಚನಗೊಂಡಿದ್ದೇವೆ. ವಿಶ್ವಾದ್ಯಂತ ಐತಿಹಾಸಿಕ ವ್ಯವಹಾರವನ್ನು ಮಾಡಿರುವ ಪಠಾಣ್ ಈಗ ಬಾಂಗ್ಲಾದೇಶದಲ್ಲಿ ಪ್ರೇಕ್ಷಕರನ್ನು ರಂಜಿಸುವ ಅವಕಾಶವನ್ನು ಪಡೆಯಲಿದೆ'' ಎಂದು ಹೇಳಿದ್ದಾರೆ.
ಮತ್ತಷ್ಟು ಮಾತನಾಡಿದ ಅವರು, "1971ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಹಿಂದಿ ಚಲನಚಿತ್ರ 'ಪಠಾಣ್'. ಆಲ್ಲಿನ ಅಧಿಕಾರಿಗಳ ನಿರ್ಧಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಶಾರುಖ್ ಖಾನ್ ಬಾಂಗ್ಲಾದೇಶದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂಬ ವಿಚಾರವನ್ನು ಹಲವು ವರ್ಷಗಳಿಂದ ಅರಿತುಕೊಂಡಿದ್ದೇವೆ. ಭಾರತೀಯ ಸಂಸ್ಕೃತಿ ಮತ್ತು ಸಿನಿಮಾವನ್ನು ಪ್ರಪಂಚದಲ್ಲಿ ಪ್ರತಿನಿಧಿಸಲಿರುವ ಪಠಾಣ್ ಶಾರುಖ್ ಖಾನ್ ಮತ್ತು ಹಿಂದಿ ಚಿತ್ರರಂಗದ ಮೊದಲ ಪರ್ಫೆಕ್ಟ್ ಚಿತ್ರ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಡೇರ್ ಡೆವಿಲ್ ಮುಸ್ತಾಫಾ'ಗೆ ಡಾಲಿ ಸಾಥ್: ಮೇ. 19ಕ್ಕೆ ಚಿತ್ರ ತೆರೆಗೆ
'ಪಠಾಣ್' ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸ್ಪೈ ಸಿನಿಮಾ. ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ಹೊರಹೊಮಮ್ಮಿದೆ. ಈ ಚಲನಚಿತ್ರವು ಅದರ ಆ್ಯಕ್ಷನ್ ಪ್ಯಾಕ್ಡ್ ಕಥಾವಸ್ತು ಮತ್ತು ಸ್ಟಾರ್ಗಳ ಆಕರ್ಷಕ ಅಭಿನಯಕ್ಕಾಗಿ ವ್ಯಾಪಕವಾಗಿ ಮೆಚ್ಚುಗೆಗೆ ಒಳಗಾಗಿದೆ. ನಾಲ್ಕು ವರ್ಷಗಳ ವಿರಾಮದ ನಂತರ ಹಿರಿತೆರೆಗೆ ಮರಳಿದ ಶಾರುಖ್ ಖಾನ್ ಅದ್ಭುತ ಯಶಸ್ಸನ್ನು ಕಂಡಿದ್ದಾರೆ.
ಇದನ್ನೂ ಓದಿ: ರಂಗೇರಿದ ಚುನಾವಣಾ ಕಣ: ಮಂಕಾದ ಕನ್ನಡ ಚಿತ್ರರಂಗ, ತೆರೆಕಾಣದ ಸಿನಿಮಾಗಳು
ಸಿನಿಮಾ ನಿರ್ಮಾಣದ ವೆಚ್ಚ 225 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಮುದ್ರಣ, ಜಾಹೀರಾತಿಗೆ ಹೆಚ್ಚುವರಿಯಾಗಿ 15 ಕೋಟಿ ಖರ್ಚು ಮಾಡಲಾಗಿದೆ. ಸಿನಿಮಾ ಶೂಟಿಂಗ್ ನವೆಂಬರ್ 2020ರಲ್ಲಿ ಮುಂಬೈನಲ್ಲಿ ಪ್ರಾರಂಭವಾಯಿತು. ಭಾರತ, ಅಫ್ಘಾನಿಸ್ತಾನ, ಸ್ಪೇನ್, ಯುಎಇ, ಟರ್ಕಿ, ರಷ್ಯಾ, ಇಟಲಿ ಮತ್ತು ಫ್ರಾನ್ಸ್‌ನ ವಿವಿಧ ಸ್ಥಳಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಎರಡು ಹಾಡುಗಳನ್ನು ವಿಶಾಲ್ ಮತ್ತು ಶೇಖರ್ ಸಂಯೋಜಿಸಿದ್ದಾರೆ. ಸಂಚಿತ್ ಬಲ್ಹರಾ ಮತ್ತು ಅಂಕಿತ್ ಬಲ್ಹರಾ ದನಿಯಾಗಿದ್ದಾರೆ. ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ.