ಹಿಂದಿ ಬಿಗ್ ಬಾಸ್ ಓಟಿಟಿ 2 ವಿನ್ನರ್ ಹಾಗೂ ಖ್ಯಾತ ಯೂಟ್ಯೂಬರ್ ಎಲ್ವಿಶ್ ಯಾದವ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಪ್ರಕರಣವಾಗಿ ತನಿಖೆ ನಡೆಸುತ್ತಿರುವ ನೋಯ್ಡಾ ಪೊಲೀಸರು ತಮ್ಮ ಮುಂದೆ ಹಾಜರಾಗುವಂತೆ ಎಲ್ವಿಶ್ ಯಾದವ್ಗೆ ನೋಟಿಸ್ ನೀಡಿದ್ದಾರೆ. ಶೀಘ್ರದಲ್ಲೇ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಎಲ್ವಿಶ್ ಯಾದವ್ ಅವರನ್ನು ಪ್ರಕರಣದ ಆರೋಪಿ ಎಂದು ಹೆಸರಿಸಲಾಗಿದ್ದು, ನೋಯ್ಡಾ ಪೊಲೀಸ್ ಠಾಣೆ ಸೆಕ್ಟರ್ 20ರ ತನಿಖಾಧಿಕಾರಿ ಕೈಲಾಶ್ ನಾಥ್ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ನೋಯ್ಡಾ ಹರೀಶ್ ಚಂದರ್, "ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆಗೆ ಸಂಬಂಧಿಸಿದಂತೆ ನವೆಂಬರ್ 3ರಂದು 49 ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅರಣ್ಯ ಇಲಾಖೆ ಹಾಗೂ ಎನ್ಜಿಒ ನೆರವಿನಿಂದ 5 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಂತರ 20 ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. 5 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಎಲ್ವಿಶ್ ಯಾದವ್ ಅವರಿಗೆ ವಿಚಾರಣೆಗೆ ಬರುವಂತೆ ನೊಟೀಸ್ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಟ್ರೋಫಿ ಹಿಂದಿರುಗಿಸಲು ಇಚ್ಛಿಸಿದ ವಿಜೇತ: ಇದರ ಹಿಂದಿದೆ ಬಲವಾದ ಕಾರಣ
ಪ್ರಕರಣದ ಹಿನ್ನೆಲೆ: ಇತ್ತೀಚೆಗೆ ಎಲ್ವಿಶ್ ಯಾದವ್ ಆಯೋಜಿಸಿದ್ದ ರೇವ್ ಪಾರ್ಟಿಗಳಿಗೆ ಹಾವು ಹಾಗೂ ಅವುಗಳ ವಿಷವನ್ನು ಸರಬರಾಜು ಮಾಡಿದ ಆರೋಪದ ಮೇಲೆ ನೋಯ್ಡಾದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳಿಂದ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳನ್ನು ಮತ್ತು ಹಾವಿನ ವಿಷವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದರಲ್ಲಿ ಎಲ್ವಿಶ್ ಯಾದವ್ ಶಾಮೀಲಾಗಿದ್ದಾರೆ ಎಂದು ಹೇಳಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ್ದ ಅವರು, ತಮ್ಮ ಮೇಲೆ ಬಂದಿರುವ ಆರೋಪವನ್ನು ನಿರಾಕರಿಸಿದ್ದರು. ಹಾವಿನ ವಿಷ ಬಳಕೆ ಎಂದು ಹೇಳಲಾದ ರೇವ್ ಪಾರ್ಟಿಗೂ ತನಗೂ ಯಾವುದೇ ಸಂಬಂಧವಿಲ್ಲ. ಆದರೆ, ಸಂಬಂಧ ಇದೆ ಎಂಬ ಆಧಾರ ರಹಿತ ಸುದ್ದಿಗಳು ಬಿತ್ತರವಾಗುತ್ತಿವೆ. ಇದು ನಿಜವಲ್ಲ, ಇಂತಹ ವದಂತಿಗಳನ್ನು ಹಬ್ಬಿಸಬೇಡಿ. ಸರಿಯಾದ ಸಾಕ್ಷಿಗಳಿಲ್ಲದೇ ತಮ್ಮ ವಿರುದ್ಧ ಯಾವುದೇ ಲೇಖನಗಳನ್ನು ಪ್ರಕಟಿಸಬೇಡಿ. ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತನಿಖೆಗಳನ್ನು ಎದುರಿಸಲು ತಾವು ಸಿದ್ಧ ಎಂದು ಅವರು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ಗೆ ಬೆದರಿಕೆ ಕರೆ, ₹1 ಕೋಟಿಗೆ ಬೇಡಿಕೆ; ಆರೋಪಿ ಬಂಧಿಸಿದ ಪೊಲೀಸರು