ಸ್ಯಾಂಡಲ್ವುಡ್ನಲ್ಲಿ ಕಳೆದ ಒಂದೆರಡು ತಿಂಗಳಿಂದ ಚಿತ್ರಗಳ ಬಿಡುಗಡೆ ಕೊಂಚ ಕಡಿಮೆ ಆಗಿತ್ತು. ವಾರಕ್ಕೆ ಮೂರೋ ಅಥವಾ ನಾಲ್ಕೋ ಚಿತ್ರಗಳು ಬಿಡುಗಡೆ ಆದರೆ ಅದೇ ಹೆಚ್ಚು ಎನ್ನುವಂತಿತ್ತು. ಆದರೆ, ಈ ವಾರ ಯಾವುದೇ ಸ್ಟಾರ್ ಸಿನಿಮಾಗಳಿಲ್ಲದೇ ಬೆಳ್ಳಿ ತೆರೆಯಲ್ಲಿ ಹೊಸ ಪ್ರತಿಭೆಗಳ ಚಿತ್ರಗಳ ಬಿಡುಗಡೆ ಸಂಖ್ಯೆ ಹೆಚ್ಚಾಗಿದೆ. ಹಾಗಾದ್ರೆ ಈ ಶುಕ್ರವಾರ ಎಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿವೆ ಎಂಬುದರ ಮಾಹಿತಿ ಇಲ್ಲಿದೆ.

ಶುಕ್ರವಾರ ಬಂತು ಅಂದ್ರೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹಬ್ಬದ ಸಂಭ್ರಮ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸಿನಿಮಾ ಪ್ರಿಯರಲ್ಲಿ ಆ ಜೋಶ್ ಇಲ್ಲ. ಅದಕ್ಕೆ ಕಾರಣ ಒಂದೇ ದಿನ 5 ರಿಂದ 10 ಸಿನಿಮಾಗಳು ಬಿಡುಗಡೆ ಆಗುತ್ತಿರೋದು. ಈ ವಾರ ಕೂಡ ಹೊಸ ಪ್ರತಿಭೆಗಳ ಚಿತ್ರಗಳು ನಾ ಮುಂದು, ತಾ ಮುಂದು ಅಂತಾ ರಿಲೀಸ್ ಆಗುತ್ತಿವೆ.

ಈ ವಾರ ದ್ವಂದ್ವ, ಆರಾರಿ ರಾರೋ, ಹನಿಮೂನ್ ಇನ್ ಬ್ಯಾಂಕಾಕ್, ಪರಿಶುದ್ಧಂ, ಬನ್ ಟೀ, ಒಲವೇ ಮಂದಾರ 2, ದಿಗ್ವಿಜಯ ಸೇರಿದಂತೆ ಬರೋಬ್ಬರಿ 7 ಸಿನಿಮಾಗಳು ಅದೃಷ್ಟ ಪರೀಕ್ಷೆಗೆ ಇಳಿದಿವೆ. ಇದರಲ್ಲಿ ತಿಲಕ್, ಅನಿತಾ ಭಟ್‍ರಂತ ಅಭಿನಯದ ದ್ವಂದ್ವ ಚಿತ್ರ ಬಿಟ್ಟರೆ, ಮಿಕ್ಕಂತೆ ಎಲ್ಲ ಚಿತ್ರಗಳಲ್ಲೂ ಹೊಸ ನಟ, ನಟಿಯರೇ ತುಂಬಿದ್ದಾರೆ. ಇನ್ನು ಈ ವಾರ ನಾಲ್ಕು ಹೊಸ ನಿರ್ದೇಶಕರು ಮತ್ತು ಏಳು ಹೊಸ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಫೋಟೋಗ್ರಾಫಿಕ್ ಮೆಮೋರಿ ಎಂಬ ವಿಚಿತ್ರ ಸಮಸ್ಯೆಯ ಕುರಿತಾದ ‘ದ್ವಂದ್ವ’ ಚಿತ್ರವನ್ನು ಕಾಮನ್ ಮ್ಯಾನ್ ಪ್ರೊಡಕ್ಷನ್ನಡಿ ಪ್ರದೀಪ್ ಕೌದಳ್ಳಿ ನಿರ್ಮಿಸಿ, ಭರತ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ತಿಲಕ್, ಆಸಿಯಾ ಫಿರ್ದೌಸ್, ಅನಿತಾ ಭಟ್, ದಿನೇಶ್ ಮಂಗಳೂರು, ಶೋಭರಾಜ್ ಮುಂತಾದವರು ನಟಿಸಿದ್ದಾರೆ.

ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ದಿಗ್ವಿಜಯ ಚಿತ್ರದಲ್ಲಿ ಪರಿಹಾರವನ್ನು ಹುಡುಕುವ ಪ್ರಯತ್ನವನ್ನು ಇಲ್ಲಿ ನಿರ್ದೇಶಕ ದುರ್ಗಾ ಪಿ. ಎಸ್ ಮಾಡಿದ್ದಾರೆ. ಈ ಚಿತ್ರವನ್ನು ಜೆ ಪಿ ಎಂಟರ್ ಟೈನ್ಮೆಂಟ್ ಸಂಸ್ಥೆಯಡಿ ಜಯಪ್ರಭು ಆರ್ ಲಿಂಗಾಯತ್ ನಿರ್ಮಿಸಿದ್ದು, ದುರ್ಗಾ ಪಿ ಎಸ್ ಹಾಗೂ ಹೊನ್ನವಳ್ಳಿ ಶ್ರೀಕಾಂತ್ ಸೇರಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಸಂಕಲನದ ಜೊತೆ ನಿರ್ದೇಶನ ಮಾಡಿದ್ದಾರೆ.

'ಒಲವೇ ಮಂದಾರ 2' ಚಿತ್ರವನ್ನು ರಮೇಶ್ ಮರಗೋಳ ಹಾಗೂ ಬಿ ಎಂ ಸತೀಶ್ ನಿರ್ಮಿಸಿದ್ದು, ಸನತ್, ಪ್ರಜ್ಞಾ ಭಟ್, ಅನುಪಾ ಸತೀಶ್, ಭವ್ಯ, ಡಿಂಗ್ರಿ ನಾಗರಾಜ, ಮಡೆನೂರ ಮನು, ಶಿವಾನಂದ ಸಿಂದಗಿ ಸೇರಿದಂತೆ ಹಲವರು ನಟಿಸಿದ್ದಾರೆ. ಡಾ. ಕಿರಣ್ ತೋಟಂಬೈಲ್ ಸಂಗೀತ ಈ ಚಿತ್ರಕ್ಕಿದೆ. ಪ್ರೀತಿ ಮಾಡುವುದು ಕ್ರೈಮ್ ಅಲ್ಲ ಎಂದು ಸಾರುವ ಈ ಚಿತ್ರವನ್ನು ಎಸ್ ಎಸ್ ಪಾಟೀಲ್ ನಿರ್ದೇಶನ ಮಾಡಿದ್ದಾರೆ.

'ಬನ್ ಟೀ' ಚಿತ್ರಕ್ಕೆ ಉದಯ್ ಕುಮಾರ್ ನಿರ್ದೇಶನವಿದ್ದು, ಕೇಶವ್ ಎನ್ನುವವರು ನಿರ್ಮಿಸಿದ್ದಾರೆ. ಉದಯ್ ಕುಮಾರ್ ತಮ್ಮ ಸ್ನೇಹಿತನ ಜೀವನದಲ್ಲಿ ನಡೆದ ಕಥೆಯನ್ನೇ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಎಂಬ ಕಾನ್ಸೆಪ್ಟ್ ಇಲ್ಲವಂತೆ. ಶಿಕ್ಷಣ ಕ್ಷೇತ್ರ ಎಷ್ಟು ಕಮರ್ಷಿಯಲ್ ಆಗುತ್ತಿದೆ ಎಂದು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ.

ಇನ್ನು ಹನಿಮೂನ್ ಇನ್ ಬ್ಯಾಂಕಾಕ್ ಒಂದು ಕಾಮಿಡಿ ಚಿತ್ರವಾದರೆ, ಪರಿಶುದ್ಧಂ ಒಂದು ಥ್ರಿಲ್ಲರ್ ಸಿನಿಮಾ ಆಗಿದೆ. ಒಟ್ಟಾರೆ ಈ ಏಳು ಸಿನಿಮಾಗಳು ಒಂದೊಂದು ಜಾನರ್ಗೆ ಸೇರಿದಂತಹ ಚಿತ್ರವಾಗಿವೆ. ಈ ಚಿತ್ರಗಳ ಪೈಕಿ ಯಾವ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕು.
ಇದನ್ನೂ ಓದಿ: ಸದ್ದು ಮಾಡ್ತಿದೆ ಎಸ್ತರ್ ನರೋನ್ಹಾ ನಿರ್ದೇಶನದ ಚೊಚ್ಚಲ ಸಿನಿಮಾ 'ದಿ ವೆಕೆಂಟ್ ಹೌಸ್'