ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಸೆಪ್ಟೆಂಬರ್ 16 ರಂದು ಆಚರಿಸಲು ಯೋಜಿಸಲಾಗಿದ್ದ ರಾಷ್ಟ್ರೀಯ ಸಿನಿಮಾ ದಿನವನ್ನು ಸೆಪ್ಟೆಂಬರ್ 23ರಂದು ನಡೆಸಲಾಗುವುದು ಎಂದು ತಿಳಿಸಿದೆ. ಸೆ.16ಕ್ಕೆ ರಾಷ್ಟ್ರೀಯ ಸಿನಿಮಾ ದಿನ ಆಚರಿಸಲು ಎಂಎಐ ನಿರ್ಧರಿಸಿತ್ತು. ಅಂದು ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ 75 ರೂಪಾಯಿ ಇರಲಿದೆ ಎಂದು ಬಂಪರ್ ಆಫರ್ ಘೋಷಿಸಿತ್ತು. ಆದರೆ, ಇದೀಗ ಕಾರ್ಯಕ್ರಮವನ್ನು ಸೆ.23ಕ್ಕೆ ಮುಂದೂಡಲಾಗಿದೆ.
PVR, INOX, Cinepolis, Carnival, Delite ಸೇರಿದಂತೆ ದೇಶಾದ್ಯಂತದ ಮಲ್ಟಿಪ್ಲೆಕ್ಸ್‌ಗಳ 4,000ಕ್ಕೂ ಹೆಚ್ಚು ಪರದೆಗಳಲ್ಲಿ ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲು ನಿರ್ಧರಿಸಲಾಗಿತ್ತು. ಅಂದು ಟಿಕೆಟ್‌ಗಳ ಬೆಲೆ ಕೇವಲ 75 ರೂಪಾಯಿ ಇರಲಿದೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತಿಳಿಸಿತ್ತು. ಆದರೀಗ ವಿವಿಧ ಮಧ್ಯಸ್ಥಗಾರರ(stakeholders) ಕೋರಿಕೆಯ ಮೇರೆಗೆ ಮತ್ತು ಭಾಗವಹಿಸುವಿಕೆ ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಸಿನಿಮಾ ದಿನಾಚರಣೆ ಮುಂದೂಡಲಾಗಿದೆ ಎಂದು MAI ತಿಳಿಸಿದೆ.
ಕೋವಿಡ್ ವೇಳೆ ಚಿತ್ರಮಂದಿರಗಳು ಬಂದ್ ಆಗಿದ್ದವು. ಕೋವಿಡ್ ನಿಯಮ, ಲಾಕ್ಡೌನ್ ತೆರವಿನ ಬಳಿಕ ಮಲ್ಟಿಪ್ಲೆಕ್ಸ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆ ಜನರಿಗೆ ಧನ್ಯವಾದ ತಿಳಿಸಲು ಜೊತೆಗೆ ಎಲ್ಲ ವರ್ಗದವರು ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡಿ ಆನಂದಿಸಲು ಈ ಒಂದು ದಿನದ ರಿಯಾಯಿತಿ ನೀಡಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 9: ದೊಡ್ಮನೆಗೆ ನಟ ಅನಿರುದ್ಧ್ ಜತ್ಕರ್ ಎಂಟ್ರಿ?
ಆಲಿಯಾ ಭಟ್, ರಣ್ಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಸೌತ್ ಸಿನಿಮಾ ಅಬ್ಬರಕ್ಕೆ, ಬಾಯ್ಕಾಟ್ ಬಿಸಿಗೆ ನಲುಗಿದ್ದ ಬಾಲಿವುಡ್ಗೆ ಬ್ರಹ್ಮಾಸ್ತ್ರ ಬೂಸ್ಟರ್ ಡೋಸ್ನಂತೆ ಕೆಲಸ ಮಾಡುತ್ತಿದೆ. ಉತ್ತಮ ಕಲೆಕ್ಷನ್ ಆಗುವ ಈ ಸಂದರ್ಭದಲ್ಲಿ 75 ರೂ. ಟಿಕೆಟ್ ಇಟ್ಟರೆ ದೊಡ್ಡ ನಷ್ಟ ಉಂಟಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಬ್ರಹ್ಮಾಸ್ತ್ರ ಚಿತ್ರದ ಕಲೆಕ್ಷನ್ ಏರಿಕೆ ಆಗುವುದು ತುಂಬಾನೆ ಮುಖ್ಯವಾಗಿದೆ. ಈ ಎಲ್ಲ ಕಾರಣದಿಂದ ರಾಷ್ಟ್ರೀಯ ಸಿನಿಮಾ ದಿನದ ದಿನಾಂಕವನ್ನು ಪೋಸ್ಟ್ಪೋನ್ ಮಾಡಲಾಗಿದೆ ಎನ್ನಲಾಗುತ್ತಿದೆ.