ದುನಿಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ನಟ ಲೂಸ್ ಮಾದ ಯೋಗಿ. ಚಿತ್ರರಂಗದಲ್ಲಿ ಒಂದು ದಶಕವನ್ನ ಪೂರೈಯಿಸಿರುವ ಇವರು ಲಂಕೆ ಹಾಗೂ ಒಂಬತ್ತನೇ ದಿಕ್ಕು ಸಿನಿಮಾಗಳ ಬಳಿಕ ಈಗ ಮತ್ತೊಂದು ಮಾಸ್ ಲುಕ್ನಲ್ಲಿ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನ ಮಾಡ್ತಾ ಇರುವ ಲೂಸ್ ಮಾದ ಯೋಗಿ ಈಗ 'ಕಿರಿಕ್ ಶಂಕರ್' ಸಿನಿಮಾ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದೊಂದು ನಗರ ಪ್ರದೇಶದಲ್ಲಿ ನಡೆಯುವ ಕಥೆ. ನಾಯಕನಿಗೆ ಇಬ್ಬರು ತಂಗಿಯರು. ತುಂಬು ಕುಟುಂಬ. ಸಂಸಾರದ ಜವಾಬ್ದಾರಿ ಹೆಗಲ ಮೇಲಿದ್ದರೂ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪಾತ್ರದಲ್ಲಿ ಲೂಸ್ ಮಾದ ಯೋಗಿ ಕಾಣಿಸಿಕೊಂಡಿದ್ದಾರೆ. ಯೋಗಿ ಅವರಿಗೆ ಜೋಡಿಯಾಗಿ ಅದ್ವಿಕಾ ಎಂಬ ಯುವ ನಟಿ ಜೊತೆಯಾಗಿದ್ದಾರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಅದ್ವಿಕಾಗೆ ಇದು ಮೊದಲ ಸಿನಿಮಾ. ಈ ಚಿತ್ರದಲ್ಲಿ ಕಿರಿಕ್ ಶಂಕರ್ ಎಂಬಾತನ ಎದುರು ಮಾತನಾಡುವ ಪಾತ್ರ ಮಾಡಿದ್ದಾರೆ. ರಿತೇಶ್, ನಾಗೇಂದ್ರ ಅರಸ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ.
ಕಲ್ಪನಾ ಸಿನಿಮಾ ಬಳಿಕ ನಿರ್ದೇಶಕ ಆರ್. ಅನಂತರಾಜು ಈ 'ಕಿರಿಕ್ ಶಂಕರ್' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಕಮರ್ಷಿಯಲ್ ಚಿತ್ರಕ್ಕೆ ಬೇಕಾಗುವ ಎಲ್ಲಾ ಎಲಿಮೆಂಟ್ಸ್ ಈ ಚಿತ್ರದಲ್ಲಿದೆ. ಹಿರಿಯ ನಿರ್ದೇಶಕ ಯೋಗಿ ಹುಣಸೂರು, ಈ ಸಿನಿಮಾಗೆ ಕಥೆ ಹಾಗೂ ಸಂಭಾಷಣೆಯನ್ನ ಬರೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಎಂ. ಎನ್ ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಈ ಚಿತ್ರಕ್ಕೆ ಗೀತರಚನೆಕಾರ ಕಿನ್ನಾಳ್ ರಾಜ್ ಬರೆದಿರುವ ಸಾಹಿತ್ಯಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದು, ಹಿರಿಯ ಕ್ಯಾಮರಾಮ್ಯಾನ್ ಜೆ. ಜೆ. ಕೃಷ್ಣ ಅವರ ಛಾಯಾಗ್ರಹಣವಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಕಿರಿಕ್ ಶಂಕರ ಸಿನಿಮಾ ಇದೇ 27ಕ್ಕೆ ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಆದರೂ ಲೂಸ್ ಮಾದ ಯೋಗಿಗೆ ಒಳ್ಳೆ ಹೆಸರು ತಂದುಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಓದಿ: ಪಠ್ಯಪುಸ್ತಕ ಪರಿಷ್ಕರಣೆ ಹಿಂಪಡೆದು, ಹಿಂದಿನ ಪುಸ್ತಕಗಳನ್ನೇ ಆದಷ್ಟು ಬೇಗ ನೀಡಿ: ಪೋಷಕರು, ಶಿಕ್ಷಣ ತಜ್ಞರ ಆಗ್ರಹ