ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಪ್ರೊಡಕ್ಷನ್ ನಂ.15 ಹೆಸರಿನಡಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋದು ಗೊತ್ತಿರುವ ವಿಚಾರ. ಇದೀಗ ಯುವ ನಟ ಕಿರೀಟಿ ಇಂಟ್ರೂಡಕ್ಷನ್ ಟೀಸರ್ ಯೂಟ್ಯೂಬ್ನಲ್ಲಿ ಧೂಳ್ ಎಬ್ಬಿಸುತ್ತಿದೆ. ಕಿರೀಟಿ ಸ್ಟಂಟ್ಸ್, ಡ್ಯಾನ್ಸ್, ಆ್ಯಕ್ಷನ್ ಸೀನ್ಸ್ ಕಂಡು ವೀಕ್ಷಕರು ಹುಬ್ಬೇರಿಸಿದ್ದಾರೆ. ಸ್ವತಃ ಚಿತ್ರ ಬ್ರಹ್ಮ ರಾಜಮೌಳಿಯೇ ಕಿರೀಟಿ ಆ್ಯಕ್ಟಿಂಗ್, ಸ್ಟಂಟ್ಸ್ಗೆ ಬಹುಪರಾಕ್ ಎಂದು ಬೆನ್ನು ತಟ್ಟಿದ್ದರು. ಇಷ್ಟೆಲ್ಲ ಮೆಚ್ಚುಗೆ ಪಡೆದಿರುವ ಕಿರೀಟಿ ಸಾಹಸದ ಹಿಂದಿನ ಪರಿಶ್ರಮದ ಮೇಕಿಂಗ್ ವಿಡಿಯೋ ಅನಾವರಣಗೊಂಡಿದೆ.
ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಇಂಟ್ರೂಡಕ್ಷನ್ ಬಿಟಿಎಸ್ ಅಂದ್ರೆ ಟೀಸರ್ ಹಿಂದಿನ ಪರಿಶ್ರಮದ ಸಣ್ಣದೊಂದು ಝಲಕ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಆ ವಿಡಿಯೋ ತುಣುಕಿನಲ್ಲಿ ಕಿರೀಟಿ ಪರಿಶ್ರಮ ಎದ್ದು ಕಾಣುತ್ತಿದೆ. ಬಿದ್ದು, ಎದ್ದು, ಪೆಟ್ಟು ಮಾಡಿಕೊಂಡರೂ ಛಲ ಬಿಡದೇ ಕಿರೀಟಿ ಸ್ಟಂಟ್ಸ್‌ಗಳನ್ನು ಅದ್ಭುತವಾಗಿ ಮಾಡಿದ್ದಾರೆ. ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸ್ಟಂಟ್ಸ್ ಸಖತ್ತಾಗಿವೆ.
ಇದನ್ನೂ ಓದಿ: 'ಕಾಣೆಯಾದವರ ಬಗ್ಗೆ ಪ್ರಕಟಣೆ' ಟ್ರೇಲರ್ ಬಿಡುಗಡೆ: ದುನಿಯಾ ವಿಜಯ್, ಡಾಲಿ ಧನಂಜಯ್ ಸಾಥ್
ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮ್ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ನಲ್ಲಿ ತಯಾರಾಗ್ತಿರುವ ಸಿನಿಮಾ ಇದಾಗಿದೆ. ಮಾಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಓಂಕಾರ ಹಾಕಿರುವ, ಬಾಹುಬಲಿ ಛಾಯಾಗ್ರಾಹಕ ಕೆಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈಚಳಕವಿರುವ, ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಹಾಗೂ ರವೀಂದರ್ ಕಲಾ ನಿರ್ದೇಶನದ ಸಿನಿಮಾ ಇದಾಗಿದೆ. ಕಿರೀಟಿ ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಣ್ಣ ಹಚ್ಚಿದ್ದು, ಶ್ರೀಲೀಲಾ, ಜೆನಿಲಿಯಾ ಸೇರಿದಂತೆ ದೊಡ್ಡ ತಾರಾ ಬಳಗ ಈ ಸಿನಿಮಾದಲ್ಲಿದೆ.