ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಶುಕ್ರವಾರ ವಿಧಿವಶರಾದ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಲೀಲಾವತಿ ಅವರ ಅಂತ್ಯಕ್ರಿಯೆ ಇಂದು ಸಂಜೆ ನೆಲಮಂಗಲ ಸಮೀಪವಿರುವ ಸೋಲದೇವನಹಳ್ಳಿ ಗ್ರಾಮದ ಅವರ ತೋಟದ ಮನೆಯಲ್ಲಿ ಬಂಟರ ಸಮುದಾಯದ ಪ್ರಕಾರ ನಡೆಯಿತು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿತು. ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅಂತಿಮ ವಿಧಿ- ವಿಧಾನಗಳನ್ನು ನೆರವೇರಿಸಿದರು.
![kannada-veteran-actress-leelavati-funeral](https://etvbharatimages.akamaized.net/etvbharat/prod-images/09-12-2023/kn-bng-06-lilavati-av-ka10057_09122023172243_0912f_1702122763_129.jpg)
ಕರ್ನಾಟಕ ಸರ್ಕಾರದ ಪರವಾಗಿ ಮೂರು ಸುತ್ತು ಕುಶಾಲು ತೋಪು ಸಿಡಿಸಿ ಸಕಲ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಸೇರಿದಂತೆ ಹಲವು ನಾಯಕರು, ಚಿತ್ರರಂಗದ ಗಣ್ಯರು, ಕುಟುಂಬಸ್ಥರು ಹಿರಿಯ ನಟಿಗೆ ಅಂತಿಮ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಅನುರಾಧ ಕೆ.ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶಿಲ್ದಾರ್ ಅರುಂಧತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅಂತಿಮ ದರ್ಶನ ಪಡೆದ ಗಣ್ಯರು: ಇಂದು ಬೆಳಗ್ಗೆ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಲೀಲಾವತಿಯವರ ಕಲಾಸೇವೆಯನ್ನು ಗೌರವಿಸುವ ಉದ್ದೇಶದಿಂದ ಅಂಬೇಡ್ಕರ್ ಮೈದಾನದಿಂದ ಲೀಲಾವತಿ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
![kannada-veteran-actress-leelavati-funeral](https://etvbharatimages.akamaized.net/etvbharat/prod-images/09-12-2023/kn-bng-06-lilavati-av-ka10057_09122023172243_0912f_1702122763_817.jpg)
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ನಟಿಯರಾದ ಸುಧಾರಾಣಿ, ಮಾಳವಿಕಾ ಅವಿನಾಶ್, ತಾರಾ, ರಮೇಶ್ ಅರವಿಂದ್, ಟಿ ಎಸ್ ನಾಗಾಭರಣ, ಸಾಧು ಕೋಕಿಲ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಯುವ ನಟ ನವೀನ್ ಶಂಕರ್, ಭವ್ಯ, ಶ್ರುತಿ, ಉಮಾಶ್ರೀ, ಪೋಷಕ ನಟ ಹೊನ್ನವಳ್ಳಿ ಕೃಷ್ಣ, ಶ್ರೀನಿವಾಸ್ ಮೂರ್ತಿ, ರಮೇಶ್ ಭಟ್, ನಿರ್ದೇಶಕ ನಾಗಣ್ಣ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಬ್ರಹ್ಮಾಂಡ ಗೂರೂಜಿ, ಪೋಷಕ ನಟರಾದ ಶಿವಕುಮಾರ್, ರಕ್ಷಾ, ಅಭಿನಯ, ಶೈಲಶ್ರೀ ಸೇರಿದಂತೆ ಸಾಕಷ್ಟು ಕಲಾವಿದರು, ಸಾರ್ವಜನಿಕರು, ಅಭಿಮಾನಿಗಳು ಲೀಲಾವತಿಯವರ ದರ್ಶನ ಪಡೆದಿದ್ದರು.
ನಾಲ್ಕುವರೆ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚಿದ್ದ ಹಿರಿಯ ನಟಿ ಲೀಲಾವತಿ ಅವರು ಬರೋಬ್ಬರಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಅಮೋಘ ಅಭಿನಯಕ್ಕೆ ಅಪಾರ ಸಂಖ್ಯೆಯ ಸಿನಿಪ್ರೇಮಿಗಳು ಮನಸೋತಿದ್ದರು. ಆದರೆ ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಇತ್ತೀಚೆಗೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಲೀಲಾವತಿ ಅವರ ನಿವಾಸಕ್ಕೆ ಆಗಮಿಸಿ, ಆರೋಗ್ಯ ವಿಚಾರಿಸಿದ್ದರು. ಆದರೆ ಶುಕ್ರವಾರ ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ: ಸದ್ದಿಲ್ಲದೇ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದ ಲೀಲಾವತಿ: ಕಲಾವಿದರಿಗೆ ತಪ್ಪದೇ ಮಾಸಾಶನ ನೀಡುತ್ತಿದ್ದ ನಟಿ