ಕನ್ನಡ ಚಿತ್ರರಂಗದಿಂದ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ಸ್ಯಾಂಡಲ್ವುಡ್ ಹಿರಿಯ ನಿರ್ದೇಶಕ ಸಿ ವಿ ಶಿವಶಂಕರ್ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
"ಶಿವಶಂಕರ್ ಅವರಿಗೆ ಈವರೆಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಇಂದು ಮಧ್ಯಾಹ್ನ ಪೂಜೆ ಮುಗಿಸಿ, ಊಟ ಮಾಡಿ, ಸ್ವಲ್ಪ ಹೊತ್ತು ಕುಳಿತಿದ್ದರು. ಆಗ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದೆವು. ಅಷ್ಟರಲ್ಲಿ ಅಪ್ಪಾಜಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದರು" ಎಂದು ಶಿವಶಂಕರ್ ಅವರ ಹಿರಿಯ ಮಗ ವೆಂಕಟ್ ಭಾರದ್ವಾಜ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ರಂಗಭೂಮಿಯಿಂದ ಚಿತ್ರರಂಗಕ್ಕೆ ಎಂಟ್ರಿ: ಸಿ ವಿ ಶಿವಶಂಕರ್ ಅವರು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಬಾಲನಟನಾಗಿಯೇ ರಂಗಭೂಮಿ ಪ್ರವೇಶಿಸಿದ್ದ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಬಳಿಕ 'ರತ್ನಮಂಜರಿ' ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದಾದ ಮೇಲೆ 'ಸ್ಕೂಲ್ ಮಾಸ್ಟರ್', 'ಕೃಷ್ಣ ಗಾರುಡಿ', 'ರತ್ನಗಿರಿ ರಹಸ್ಯ' 'ಸಂತ ತುಕಾರಾಂ', 'ಭಕ್ತ ಕನಕದಾಸ', 'ಆಶಾಸುಂದರಿ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ನಂತರದಲ್ಲಿ 'ನಮ್ಮ ಊರು' ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಭಡ್ತಿ ಪಡೆದಿದ್ದರು.
ಇದನ್ನೂ ಓದಿ: Jr. NTR fan death: ಕೊಳೆತ ಸ್ಥಿತಿಯಲ್ಲಿ ಜೂ. ಎನ್ಟಿಆರ್ ಕಟ್ಟಾ ಅಭಿಮಾನಿ ಶವ ಪತ್ತೆ.. ಸಾವಿನ ಸುತ್ತ ಅನುಮಾನಗಳ ಹುತ್ತ
ಗೀತ ರಚನೆಕಾರರಾಗಿಯೂ ಜನಪ್ರಿಯ: ಸಿ ವಿ ಶಿವಶಂಕರ್ ಅವರು 'ಪದವೀಧರ', 'ಮಹಡಿಯ ಮನೆ', 'ಹೊಯ್ಸಳ', 'ಮಹಾ ತಪಸ್ವಿ', 'ಕನ್ನಡ ಕುವರ', 'ವೀರ ಮಹಾದೇವ' ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಗೀತ ರಚನೆಕಾರರಾಗಿಯೂ ಗುರುತಿಸಿಕೊಂಡಿದ್ದರು. 'ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ..' ಹಾಡನ್ನು ಬರೆಯುವ ಮೂಲಕ ಅವರು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು.
ಸಿ ವಿ ಶಿವಶಂಕರ್ ಅವರ ಸಿನಿ ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಅವರನ್ನರಸಿ ಬಂದಿವೆ. 1991 ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1994 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸಿಂಗನಲ್ಲೂರು ಪುಟ್ಟಸ್ವಾಮಯ್ಯ ರಾಜ್ಕುಮಾರ್ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ.
ಇವರು ಪತ್ನಿ ರಾಧ, ಮಕ್ಕಳಾದ ವೆಂಕಟ್ ಭಾರದ್ವಾಜ್ ಹಾಗೂ ಲಕ್ಷ್ಮಣ್ ಭಾರದ್ವಾಜ್ರನ್ನು ಅಗಲಿದ್ದಾರೆ. ಸಿ ವಿ ಶಿವಶಂಕರ್ ಅವರ ಅಂತ್ಯ ಸಂಸ್ಕಾರವನ್ನು ನಾಳೆ ಬೆಳಗ್ಗೆ ಬನಶಂಕರಿ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಸಿ ವಿ ಶಿವಶಂಕರ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಸಿ ವಿ ಶಿವಶಂಕರ್ ಕೇವಲ ಚಿತ್ರ ಸಾಹಿತಿ, ನಿರ್ದೇಶಕ ಮಾತ್ರವಲ್ಲ, ಕನ್ನಡ ಚಿತ್ರರಂಗದ ಸಂಪೂರ್ಣ ಚೌಕಟ್ಟನ್ನು ಬಲ್ಲವರಾಗಿದ್ದರು. ಅವರ ಅಗಲಿಕೆ ಚಿತ್ರರಂಗಕ್ಕೆ ನಿಜಕ್ಕೂ ತುಂಬಲಾರದ ನಷ್ಟ ಎಂದೇ ಹೇಳಬಹುದು.
ಇದನ್ನೂ ಓದಿ: ತಿಂಗಳಾಂತ್ಯ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ.. ರೋಮ್ಯಾನ್ಸ್ ನಿಂದ ಹಿಡಿದು ಆ್ಯಕ್ಷನ್ವರೆಗಿನ ಸಿನಿಮಾ, ವೆಬ್ ಸರಣಿ ತೆರೆಗೆ