ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ ನಟರಾದ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ 'ವಾರ್ 2' ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಬಾಡಿ ಡಬಲ್ಸ್ ಬಳಸದೇ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲು ಜೂ.ಎನ್‌ಟಿಆರ್ ಸಜ್ಜಾಗುತ್ತಿದ್ದಾರೆ. ನಿರ್ದೇಶಕ ಅಯನ್ ಮುಖರ್ಜಿ ಅವರು ಸ್ಪೇನ್ನಲ್ಲಿ 'ವಾರ್ 2' ಚಿತ್ರೀಕರಣವನ್ನು ನಡೆಸುತ್ತಿದ್ದಾರೆ. ಜೂ.ಎನ್‌ಟಿಆರ್ 'ದೇವರ: ಭಾಗ 1' ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ ನಂತರ ಜನವರಿಯಲ್ಲಿ 'ವಾರ್ 2' ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
'ವಾರ್ 2' ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ನ ಭಾಗ ಆಗಿದ್ದು, ಮೆಗಾಸ್ಟಾರ್‌ಗಳನ್ನು ಒಟ್ಟಿಗೆ ಸೇರಿಸಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರವಿದು. ಆಕ್ಷನ್ ದೃಶ್ಯಗಳನ್ನು ಸರಾಗವಾಗಿ ನಿಭಾಯಿಸುವಲ್ಲಿ ಜೂನಿಯರ್ ಎನ್‌ಟಿಆರ್ ಹೆಸರುವಾಸಿಯಾಗಿದ್ದಾರೆ. ವರದಿಗಳ ಪ್ರಕಾರ, ವಾರ್ 2ನಲ್ಲಿ ಕೆಲವೊಂದು ಸಾಹಸ ದೃಶ್ಯಗಳಲ್ಲಿ ಮಾತ್ರ ತಾರಕ್ ಬಾಡಿ ಡಬಲ್ಸ್ ಬಳಸಲಿದ್ದಾರೆ. ಆದರೆ ಹೆಚ್ಚಿನ ಎಲ್ಲಾ ಆಕ್ಷನ್ ಸೀನ್ಗಳಲ್ಲಿ, ವಿಶೇಷವಾಗಿ ಹೃತಿಕ್ ರೋಷನ್ ಜೊತೆ ಮುಖಾಮುಖಿಯಾಗುವ ದೃಶ್ಯಗಳಲ್ಲಿ ಅವರು ಬಾಡಿ ಡಬಲ್ಸ್ ಬಳಸುವುದಿಲ್ಲ.
ಜೂನಿಯರ್ ಎನ್‌ಟಿಆರ್ ಅವರು ಜನವರಿ ತಿಂಗಳಲ್ಲಿ 'ವಾರ್ 2' ಚಿತ್ರತಂಡದೊಂದಿಗೆ ಸೇರಿಕೊಂಡು, ಏಪ್ರಿಲ್ಗೂ ಮೊದಲು ತಮ್ಮ ಶೂಟಿಂಗ್ ಮುಗಿಸಲಿದ್ದಾರೆ. ಆ ಬಳಿಕ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಸದ್ಯಕ್ಕೆ ಈ ಚಿತ್ರಕ್ಕೆ NTR 31 ಎಂದು ಶೀರ್ಷಿಕೆ ಇಡಲಾಗಿದೆ. ಈಗಾಗಲೇ ಈ ಸಿನಿಮಾ ಘೋಷಣೆಯಾಗಿದೆ. ಇನ್ನೂ ವಾರ್ 2ನಲ್ಲಿ ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ನಟಿಸುವ ಸಾಧ್ಯತೆ ಇದೆ. ಆದರೆ, ಆಲಿಯಾ ಭಟ್ ಮಾತ್ರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: 'ದೇವರ' ಚಿತ್ರದ ಶೂಟಿಂಗ್ಗಾಗಿ ಗೋವಾಗೆ ತೆರಳಲಿರುವ ಜೂ.ಎನ್‌ಟಿಆರ್, ಜಾನ್ವಿ ಕಪೂರ್
ಅಲ್ಲದೇ, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕೂಡ ವಾರ್ 2ನಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚುವರಿಯಾಗಿ, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಮೂಲವೊಂದು ತಿಳಿಸಿದೆ. 2019 ರ ವಾರ್ ಸಿನಿಮಾದ ಸೀಕ್ವೆಲ್‌ನಲ್ಲಿ ಹೃತಿಕ್ ರೋಷನ್ ಕಬೀರ್ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಜೂನಿಯರ್ ಎನ್‌ಟಿಆರ್ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ.
'ವಾರ್ 2' ಸೆಟ್‌ನ ವಿಡಿಯೋ ವೈರಲ್: ಕೆಲವು ದಿನಗಳ ಹಿಂದೆ 'ವಾರ್ 2' ಶೂಟಿಂಗ್ ಸೆಟ್‌ನ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದವು. ಸೆಟ್‌ನ ಫೋಟೋ, ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದವು. ವೈರಲ್ ಆಗಿರುವ ಫೋಟೋಗಳ ಪೈಕಿ, ನಿರ್ದೇಶಕ ಅಯಾನ್ ಮುಖರ್ಜಿ ತಮ್ಮ ತಂಡದೊಂದಿಗೆ ಸೆಟ್ ಕಡೆಗೆ ಹೋಗುತ್ತಿರುವುದು ಕಾಣಿಸಿಕೊಂಡಿತ್ತು. ಇವು ಸಿನಿಮಾ ಸುತ್ತಲಿನ ನಿರೀಕ್ಷೆ, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.
ಇದನ್ನೂ ಓದಿ: ಸೂಪರ್ ಸ್ಟಾರ್ಗಳೊಂದಿಗೆ ನಟನೆ: ಬಾಲಿವುಡ್ಗೆ ಆರ್ಆರ್ಆರ್ ನಟ ಜೂ. ಎನ್‌ಟಿಆರ್ ಎಂಟ್ರಿ!