ಕರ್ನಾಟಕದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ನಿನ್ನೆ ಕರ್ನಾಟಕ ಬಂದ್ ಮಾಡಲಾಗಿತ್ತು. ಚಿತ್ರನಟರು ಕೂಡ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ರಸ್ತೆಗಿಳಿದು ಹೋರಾಟ ಮಾಡಿದ್ದರು. ಶಿವ ರಾಜ್ಕುಮಾರ್ ನೇತೃತ್ವದಲ್ಲಿ ನಡೆದ ಬಂದ್ಗೆ ನಟರಾದ ಧ್ರುವ ಸರ್ಜಾ, ದರ್ಶನ್, ಶ್ರೀಮುರಳಿ, ದುನಿಯಾ ವಿಜಯ್, ವಿಜಯರಾಘವೇಂದ್ರ, ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಸೇರಿದಂತೆ ಅನೇಕರು ಸಾಥ್ ನೀಡಿದ್ದರು.
ಆದರೆ ಈ ಬಂದ್ನಲ್ಲಿ ನವರಸ ನಾಯಕ ಜಗ್ಗೇಶ್ ಅವರು ಭಾಗವಹಿಸಿರಲಿಲ್ಲ. ಅನಾರೋಗ್ಯದ ನಿಮಿತ್ತ ನಟ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಈ ಬಗ್ಗೆ ತಮ್ಮ ಮಲ್ಲೇಶ್ವರಂನ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೊದಲಿಗೆ ಕಾವೇರಿ ಹೋರಾಟದಲ್ಲಿ ಭಾಗಿಯಾಗದೇ ಇರುವುದಕ್ಕೆ ಕ್ಷಮೆಯಾಚಿಸಿದರು. ಬಳಿಕ ಕಾವೇರಿ ನೀರಿನ ಸಮಸ್ಯೆ ಎಷ್ಟು ವರ್ಷಗಳಿಂದ ಇದೆ ಎಂಬುದರ ಕುರಿತು ಮಾಹಿತಿ ಹಂಚಿಕೊಂಡರು.
ಜಗ್ಗೇಶ್ ಹೇಳಿದ್ದಿಷ್ಟು.. ನಿನ್ನೆ ಕಾವೇರಿ ಪ್ರತಿಭಟನೆಗೆ ಬಾರದೇ ಇರೋದಕ್ಕೆ ಕ್ಷಮೆ ಇರಲಿ ಎಂದು ಮಾತು ಶುರು ಮಾಡಿದ ಜಗ್ಗೇಶ್, "ಕಾವೇರಿ ವಿಚಾರವಾಗಿ ಹೋರಾಟಕ್ಕೆ ಬಂದಿಲ್ಲ ಅಂದ್ರೆ ಸ್ವಾಭಿಮಾನಿ ಅಲ್ಲ ಅಂತಲ್ಲ. ಮೊದಲು ಅದರ ಇತಿಹಾಸ ಎಲ್ಲರೂ ಅರಿಯಬೇಕು. ಮಹಾರಾಜರ ಕಾಲದಲ್ಲಿ ಆಗ ನದಿಗೆ ಅಡ್ಡಲಾಗಿ ಚೆಕ್ ಪಾಯಿಂಟ್ಸ್ ಕಟ್ಟಿದ್ರು. ಕೊನೆಗೆ ಡ್ಯಾಮ್ ಕಟ್ಟಲು ಬಂದಾಗ ಸ್ಟಾಪ್ ಮಾಡಲು ಬಂದಿದ್ದರು. ಮೆಟ್ಟೂರು ಡ್ಯಾಂನ 6 ವರ್ಷದಲ್ಲಿ ಕಟ್ಟಿಕೊಂಡರು. ನಮಗೆ 20 ವರ್ಷ ಬೇಕಾಯಿತು."
"ಕಾವೇರಿ ಹುಟ್ಟೋದು ಕರ್ನಾಟಕದಲ್ಲಿ. ಹರಿಯೋದು ಕರ್ನಾಟಕದಲ್ಲಿ. ಬಳಕೆ ಮಾತ್ರ ಅವರದ್ದು. ದೇವೇಗೌಡರು ಒಂದೊಳ್ಳೆ ಮಾತು ಹೇಳಿದ್ರು. ನೀರೇ ಇಲ್ಲ ಅಂದಾಗ ಬಿಡೋಕೆ ಆಗಲ್ಲ ಅನ್ನೋದಲ್ಲ, ಅದನ್ನು ಕಾನೂನು ಪ್ರಕಾರವಾಗಿ ಮಾಡಿಸಬೇಕು. ಇದು ಹೋರಾಟದಿಂದ ಬಗೆಹರಿಯುವ ವಿಚಾರವಲ್ಲ. ನಮಗೆ ಅನ್ನ ಇಲ್ಲ ಅಂದ್ರೂ, ಭಿಕ್ಷೆ ಎತ್ತಿ ಅವರಿಗೆ ನೀಡುವ ಪರಿಸ್ಥಿತಿ ಬಂದಿದೆ."
"1991ರಿಂದ ಶುರುವಾಗಿರೋದಿದು. ಮಳೆ ಇಲ್ಲ ಅಂದ್ರೆ ಸಮಸ್ಯೆ ಹೀಗೇ ಇರುತ್ತೆ.ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆಯಬೇಕಿತ್ತು. ಭಾಷಣಗಳಿಂದ ನೀರು ಬಿಡೋದು ತಪ್ಪಲ್ಲ. ಕೇಳಿದಾಕ್ಷಣ ನೀರು ಬಿಟ್ಟರು. ಈಗ ಇಲ್ಲ ಅಂದ್ರೆ ಹೇಗೆ? ಎಲ್ಲರಿಗೂ ಬದ್ಧತೆ ಇದೆ. ಪ್ರಧಾನಿ ಮಂತ್ರಿ ಹೇಗೆ ಮುಂದಾಳತ್ವ ವಹಿಸುತ್ತಾರೆ? ಬಂದಿಲ್ಲ ಅಂದ್ರೆ ಸಿನಿಮಾ ನಟರಿಗೆ ಬೈಯ್ಯೋದು ಸರಿಯಲ್ಲ. ಈ ವಿಷಯದಲ್ಲಿ ಕಲಾವಿದರನ್ನು ದಯವಿಟ್ಟು ತರಬೇಡಿ."
"ನೀವೆಲ್ಲಾ ಕಾವೇರಿ ನೀರು ಕುಡಿಯುತ್ತಿಲ್ಲವೇ? ನೀವೆಲ್ಲಾ ಯಾಕೆ ಬರಲ್ಲ? ಇಂತಹ ಮಾತುಗಳಿಂದ ಕಲಾವಿದರನ್ನು ದೂಷಿಸುವುದು ಯಾಕೆ? ಇನ್ನು ಕರ್ನಾಟಕದಲ್ಲಿ ಪರ ಭಾಷೆಯ ಸಿನಿಮಾಗಳು ಕೋಟಿಗಟ್ಟಲೆ ಬ್ಯುಸಿನೆಸ್ ಮಾಡುತ್ತಿದೆ. ಕಾವೇರಿ ಕಾನೂನಿನ ಕ್ರಿಯೆ. ಕಲಾವಿದರಿಂದ ಆಗೋದಲ್ಲ" ಎಂದು ಸ್ಪಷ್ಟವಾಗಿ ಹೇಳಿದರು.
ಬಳಿಕ ತಮ್ಮ ತೋತಾಪುರಿ 2 ಸಿನಿಮಾ ಯಶಸ್ಸಿನ ಕುರಿತು ಮಾತನಾಡಿದ ಅವರು, "ತೋತಾಪುರಿ 2 ಸಿನಿಮಾ ಬಹಳ ಚೆನ್ನಾಗಿ ಓಪನಿಂಗ್ ಪಡೆದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ಬಿಡುಗಡೆ ಸಮಯದಲ್ಲಿ ನಾನು ಇರಲಿಲ್ಲ. ನನಗೆ ಆರೋಗ್ಯ ಸರಿಯಿಲ್ಲ. ನಿರ್ಮಾಪಕ ಸುರೇಶ್ಗೋಸ್ಕರ ನಾನು ಸಿನಿಮಾ ಬಗ್ಗೆ ಮಾತನಾಡುವುದಕ್ಕೆ ಬಂದಿದ್ದೇನೆ. ಈ ಸಿನಿಮಾದಿಂದ ನಿರ್ಮಾಪಕನಿಗೆ ಒಳ್ಳೆಯದು ಆಗಬೇಕು. ತೋತಾಪುರಿ 2 ಚಿತ್ರವನ್ನು ಪ್ರೇಕ್ಷಕರು ಮೆಚ್ಚಿದ್ದರಿಂದ ಸಿನಿಮಾ ಪ್ರೇಮಿಗಳಿಗೆ ನನ್ನ ಧನ್ಯವಾದ" ಎಂದು ಹೇಳಿದರು.
"ಕೇದಾರನಾಥ ಯಾತ್ರೆಯಲ್ಲಿ ಚಪ್ಪಲಿ ಇಲ್ಲದೇ ಬೆಟ್ಟ ಹತ್ತೋದು ಕಷ್ಟವಾಗಿತ್ತು. ನಾನು ಬೇಕಾದ ತಯಾರಿ ಮಾಡಿಕೊಂಡಿರಲಿಲ್ಲ. ಅದು ನನಗೆ ತೊಂದರೆ ಆಯಿತು. ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಎರಡು ವಾರ ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದಾರೆ" ಎಂದು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ನಟ ಜಗ್ಗೇಶ್ಗೆ ಅನಾರೋಗ್ಯ; ದೆಹಲಿಯಲ್ಲಿ ಚಿಕಿತ್ಸೆ, ಎರಡು ವಾರ ವಿಶ್ರಾಂತಿಗೆ ವೈದ್ಯರ ಸಲಹೆ