ಬೆಂಗಳೂರು: ಕನ್ನಡ ಚಿತ್ರರಂಗದ ಸ್ಟಾರ್ ನಟ ಸುದೀಪ್ ಮತ್ತು ನಿರ್ಮಾಪಕ ಎನ್. ಕುಮಾರ್ ನಡುವೆ ಮನಸ್ತಾಪ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಸ್ವತಃ ಸುದೀಪ್ ಆಪ್ತ ಜಾಕ್ ಮಂಜು ಕೆಲ ವಿಚಾರಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.
ಜಯನಗರದ ತಮ್ಮ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಿರ್ಮಾಪಕ ಎನ್. ಕುಮಾರ್ ಜೊತೆ ಯಾವುದೇ ರೀತಿಯ ಸಂಧಾನದ ಮಾತುಕತೆ ಇಲ್ಲ, ಕಾನೂನಾತ್ಮಕವಾಗಿಯೇ ಸಮಸ್ಯೆ ಪರಿಹರಿಸಿಕೊಳ್ಳಲು ನಿರ್ಧಾರ ಮಾಡಿದ್ದೇವೆ. ನ್ಯಾಯಾಲಯದಲ್ಲೇ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತೇವೆ. ಸಿನಿಮಾ ಮಾಡಿಕೊಡುವುದಾಗಿ ಹೇಳಿ ಒಂದೇ ಒಂದು ರೂಪಾಯಿಯನ್ನೂ ಮುಂಗಡವಾಗಿ ನಿರ್ಮಾಪಕ ಎನ್. ಕುಮಾರ್ ಅವರಿಂದ ಸುದೀಪ್ ಪಡೆದುಕೊಂಡಿಲ್ಲ. ಕಷ್ಟ ಎಂದು ಸಹಾಯ ಕೇಳಿಕೊಂಡು ಬಂದಿದ್ದ ನಿರ್ಮಾಪಕ ಕುಮಾರ್ ಅವರೀಗ ನಡೆದುಕೊಳ್ಳುತ್ತಿರುವ ರೀತಿಗೆ ಸ್ವಲ್ಪ ಬೇಸರವಾಗಿದೆ. ಹಾಗಾಗಿ ಕಾನೂನಾತ್ಮಕವಾಗಿಯೇ ಸಮಸ್ಯೆ ಬಗೆಹರಿಸಿಕೊಳ್ಳಲು ಸುದೀಪ್ ಮುಂದಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದೀಪ್ ನಟ ಅಷ್ಟೇ ಅಲ್ಲ, ನಿರ್ಮಾಪಕ, ಇದನ್ನು ಯಾರೂ ಪರಿಗಣಿಸುತ್ತಲೇ ಇಲ್ಲ. ಸಂಧಾನ ಎಂದರೆ ಕುಮಾರ್ ಕಷ್ಟದಲ್ಲಿದ್ದಾರೆ. ಹಣ ಕೊಡಿ ಎನ್ನುವುದೇ ಫೈನಲ್ ಆಗುತ್ತದೆ. ಆದರೆ ಅವರು ಸಮಾಜದಲ್ಲಿ ಹತ್ತಾರು ಜನರ ಮುಂದೆ ಆಪಾದನೆ ಮಾಡಿದ್ದಾರೆ. ಇಂದು ಹಣ ಕೊಟ್ಟರೆ ನಾನು ತಪ್ಪು ಮಾಡಿದ್ದೇನೆ, ಅದಕ್ಕೆ ಹಣ ಕೊಟ್ಟೆ ಎಂದಾಗುತ್ತದೆ. ಇದು ಆಗಬಾರದು, ಕಳಂಕ ಬರಬಾರದು. ಸಹಾಯ ಎಂದು ಬಂದಿದ್ದಾರೆ, ಕಷ್ಟ ಎಂದು ಬಂದಿದ್ದಾರೆ, ಅದು ಅದೇ ರೀತಿಯಲ್ಲಿರಬೇಕು. ಒಂದು ವೇಳೆ ನಾನು ಹಣ ಕೊಡಬೇಕಿರುವುದು ನಿಜವಾದಲ್ಲಿ ಕಾನೂನಾತ್ಮಕವಾಗಿ ನ್ಯಾಯಾಲಯದ ಮೂಲಕ ಕೊಡಲು ಸಿದ್ಧನಿದ್ದೇನೆ. ನಾಳೆ ಕೋರ್ಟ್ 10-20 ಕೋಟಿ ರೂ. ಕೊಡಿ ಎಂದರೆ ಕೊಡುತ್ತೇವೆ. ಈಗ ಸುಮ್ಮನೆ ಇಲ್ಲಿ ಕುಳಿತು ಮಾತನಾಡಿ ಕೊಡಿ ಎಂದರೆ ಕೊಡಲ್ಲ. ಕಾನೂನಾತ್ಮಕವಾಗಿ ಹೋಗೋಣ ಎಂದು ನಿರ್ಧರಿಸಿದ್ದೇವೆ. ಇದರಲ್ಲಿ ವಾಣಿಜ್ಯ ಮಂಡಳಿಗಾಗಲಿ, ಕುಮಾರ್ ಅವರಿಗಾಗಲಿ ನೋವು ಮಾಡಬೇಕು ಎನ್ನುವ ಉದ್ದೇಶವಿಲ್ಲ - ಇದು ಸುದೀಪ್ ಅವರ ನಿಲುವು ಎಂದು ಜಾಕ್ ಮಂಜು ಸ್ಪಷ್ಟಪಡಿಸಿದರು.
ಕುಮಾರ್ ತಮ್ಮ ಕಷ್ಟವನ್ನು ಸುದೀಪ್ ಅವರ ಮನೆಗೆ ಬಂದು ಹೇಳಿಕೊಂಡಿದ್ದರು. ಆಗ ಅದೆಷ್ಟೋ ಮಂದಿಗೆ ಸಹಾಯ ಮಾಡುತ್ತೇವೆ, ಆದರೆ ಸಾಕಷ್ಟು ಸಿನಿಮಾ ಒಟ್ಟಿಗೆ ಮಾಡಿರುವ ಕುಮಾರ್ ಅವರಿಗೆ ಸಹಾಯ ಮಾಡದಿದ್ದರೆ ಹೇಗೆ ಎಂದು ಸಹಾಯ ಮಾಡಲು ಒಪ್ಪಿಕೊಂಡಿದ್ದರು. 5 ಕೋಟಿ ರೂ. ಕೊಡಲು ಸುದೀಪ್ ನಿರ್ಧರಿಸಿದ್ದರು. ಆದ್ರೀಗ ಕಷ್ಟ ಎಂದು ಸಹಾಯ ಕೇಳಿಕೊಂಡು ಬಂದಿದ್ದ ನಿರ್ಮಾಪಕ ಕುಮಾರ್ ಅವರು ನಡೆದುಕೊಳ್ಳುತ್ತಿರುವ ರೀತಿಗೆ ಹರ್ಟ್ ಆಗಿ ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಸುದೀಪ್ ಮುಂದಾಗಿದ್ದಾರೆ. ಸಾಕಷ್ಟು ಬಾರಿ ಕುಳಿತು ಮಾತುಕತೆ ನಡೆಸಲಾಗಿದೆ. ಆದರೆ ಯಾವುದೂ ಫಲಪ್ರದವಾಗಿಲ್ಲ. ವಿಷಯ ಬಾಗಿಲು ಒಳಗೆ ಇದ್ದರೆ ವಿಶ್ವಾಸ, ಬಾಗಿಲು ಹೊರಗೆ ಹೋದ ನಂತರ ಅದು ವಿಶ್ವಾಸವಲ್ಲ. ಅದನ್ನು ಕಾನೂನಿನ ಮೂಲಕವೇ ಪರಿಹರಿಸಿಕೊಳ್ಳುತ್ತೇವೆ ಎಂದರು.
ಸಿನಿಮಾದ ಸಂಭಾವನೆ ಎಂದು ಒಂದು ರೂಪಾಯಿ ಕೂಡ ಕುಮಾರ್ ಸುದೀಪ್ ಅವರಿಗೆ ಕೊಟ್ಟಿಲ್ಲ. ಸಿನಿಮಾಗಳಿಂದ ನಷ್ಟವಾಗಿರುವುದಕ್ಕೆ ಸಹಾಯ ಮಾಡಿ ಎಂದಿದ್ದರು. ಅದಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದರು. ಮತ್ತೊಂದು ಸಿನಿಮಾ ಮಾಡೋಣ, ಸಂಭಾವನೆಯಲ್ಲಿ ಕಡಿಮೆ ಮಾಡಿಕೊಳ್ಳುತ್ತೇನೆ ಎಂದಿದ್ದರು ಅಷ್ಟೇ. ಅದನ್ನು ಬಿಟ್ಟು ಅವರಿಂದ ಹಣ ಪಡೆದಿಲ್ಲ. ಸಹಾಯ ಮಾಡಲು ನಿರ್ಧರಿಸಿದ ಇವರಿಂದ ತೊಂದರೆಯಾಯಿತು ಎಂದರೆ ಹೇಗೆ? ಸಹಾಯ ಎಂದುಕೊಂಡು ಬಂದು ಈಗ ನೀವು ಹಣ ವಾಪಸ್ ಕೊಡಬೇಕಿದೆ ಎಂದರೆ ಹೇಗೆ?. ಐದು ವರ್ಷದಲ್ಲಿ ನೂರಾರು ಸಭೆಗಳಾಗಿವೆ. ಶೂಟಿಂಗ್ ವೇಳೆಯಲ್ಲಿಯೂ ಹೈದರಾಬಾದ್, ಬ್ಯಾಂಕಾಕ್ನಲ್ಲಿದ್ದಾಗಲೂ ಸಭೆ ನಡೆದಿದೆ. ಆದರೂ ಇದು ಬಗೆಹರಿದಿಲ್ಲ. ನಾವು ನ್ಯಾಯಾಲಯಕ್ಕೆ ಹೋಗಿದ್ದೇವೆ. ಅವರು ದಾಖಲೆಗಳನ್ನು ಕೋರ್ಟ್ ಗೆ ಕೊಡಲಿ, ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಜಾಕ್ ಮಂಜು ಹೇಳಿದರು.
ಆರ್.ಆರ್.ನಗರದ ಮನೆ ಖರೀದಿ ವೇಳೆ ಸಾಲ ಪಡೆದು ತೀರಿಸಿದ ಎಲ್ಲಾ ವಿವರವೂ ನಮ್ಮ ಬಳಿ ಇದೆ. ಕಿಚನ್ ನಿರ್ಮಾಣಕ್ಕೆ ಹಣ ಕೊಟ್ಟೆ ಎನ್ನುತ್ತಿದ್ದಾರೆ, ಇದನ್ನು ನಂಬಲು ಸಾಧ್ಯವೇ?. ಕಾನೂನಾತ್ಮಕವಾಗಿ ಪರಿಹರಿಸಿಕೊಂಡರೆ ಸತ್ಯ ಗೊತ್ತಾಗಲಿದೆ, ಇದು ಸುದೀಪ್ ಅವರ ನಿಲುವು. ಸಂಧಾನ ಎಂದರೆ ಕಪ್ಪು ಚುಕ್ಕೆ ಬರಲಿದೆ. ನಾಳೆ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆದಿರುವ ಮಾಹಿತಿ ನಮಗೆ ಇಲ್ಲ. ಒಂದು ವೇಳೆ ರವಿಚಂದ್ರನ್, ಶಿವರಾಜ್ ಕುಮಾರ್ ಸಂಧಾನಕ್ಕೆ ಬಂದರೆ ಆಗ ಸುದೀಪ್ ನಿರ್ಧಾರ ಮಾಡಲಿದ್ದಾರೆ. ಸತ್ಯವನ್ನು ಯಾರಿಂದಲೂ ತಿರುಚಲಾಗಲ್ಲ. ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಕಾನೂನು ಹೋರಾಟದಲ್ಲಿ ಸಾಬೀತಾಗಲಿದೆ ಎಂದು ತಿಳಿಸಿದರು.
ವಿವಾದದ ಸಮಗ್ರ ವಿವರ ನೀಡಿದ ಜಾಕ್ ಮಂಜು: ಮುಕುಂದ ಮುರಾರಿ ಸಿನಿಮಾಗೆ ಡಿಮಾನಿಟೈಸೇಷನ್ನಿಂದ ಸಮಸ್ಯೆಯಾಗಿದೆ. ರನ್ನ ಬಿಡುಗಡೆಗೆ ತೊಂದರೆಯಾಗಿದೆ, ಸಹಾಯ ಮಾಡಿ ಎಂದು ನಿರ್ಮಾಪಕ ಎನ್. ಕುಮಾರ್ ಅವರು ಸುದೀಪ್ ಅವರಿಗೆ ಕೆಳಿಕೊಂಡು ಬಂದಿದ್ದರು. ಅದಕ್ಕೆ ಒಂದು ಸಿನಿಮಾ ಮಾಡಿಕೊಡಲು ಸುದೀಪ್ ಒಪ್ಪಿದ್ದರು. ಕುಮಾರ್ ಅವರಿಗೆ ತೊಂದರೆ ಇದ್ದಿದ್ದು ನಿಜ. ಆದರೆ ಸಿನಿಮಾ ಮಾಡಲು ವಿಳಂಬವಾಗುವ ಹಿನ್ನೆಲೆ ಕುಮಾರ್ ಕುಪಿತರಾಗಿ ಮಾತನಾಡುವ ಶೈಲಿ ಬದಲಿಸಿಕೊಂಡರು. ಈ ಸಮಸ್ಯೆ ಪರಿಹರಿಸಬೇಕು ಎಂದು ಒಂದು ಕಥೆ ಅಂತಿಮಗೊಳಿಸಿ ಸುದೀಪ್ ನಿರ್ದೇಶಕರೊಬ್ಬರನ್ನು ಕುಮಾರ್ ಬಳಿ ಕಳುಹಿಸಿದ್ದರು. ಆದರೆ ಕುಮಾರ್ ನಿರ್ದೇಶಕರ ಸಂಭಾವನೆ ಹೆಚ್ಚು ಎನ್ನುವ ಕಾರಣಕ್ಕೆ ಸಿನಿಮಾ ಆಗಲಿಲ್ಲ. 2020ರ ಜನವರಿಯಲ್ಲಿ ವಿಕ್ರಾಂತ್ ರೋಣ ಆರಂಭಿಸಿದರು. ನಂತರ ಇಲ್ಲಿಯವರೆಗೂ ಯಾವುದೇ ಸಿನಿಮಾ ಮಾಡಿಲ್ಲ. ಕೋವಿಡ್ ನಂತರ ಸುದೀಪ್ ಆರೋಗ್ಯ ಸಮಸ್ಯೆ, ಸರ್ಜರಿ ಕೆಲಸದ ಒತ್ತಡ ಇತ್ಯಾದಿಗಳ ಕಾರಣಕ್ಕೆ ಸುದೀಪ್ ಕುಮಾರ್ ಅವರಿಗೆ ಸಿಕ್ಕಿಲ್ಲ. ನನಗೂ ಆರೋಗ್ಯ ಸಮಸ್ಯೆ, ಒತ್ತಡ ಇತ್ಯಾದಿ ಕಾರಣಕ್ಕೆ ಸಿಗಲಾಗಲಿಲ್ಲ. ಸಣ್ಣಪುಟ್ಟ ವ್ಯತ್ಯಾಸ ಇತ್ತು ಎಂದು ಕಮ್ಯುನಿಕೇಷನ್ ಗ್ಯಾಪ್ಗೆ ಸ್ಪಷ್ಟೀಕರಣ ನೀಡಿದರು.
ಸಿನಿಮಾ ಮಾಡಲಾಗುತ್ತಿಲ್ಲ ಎನ್ನುವ ಕಾರಣಕ್ಕೆ ಸುದೀಪ್ ಪತ್ನಿ ಪ್ರಿಯಾ ಅವರನ್ನು ಭೇಟಿಯಾಗಿ ಕುಮಾರ್ ಮಾತುಕತೆ ನಡೆಸಿದ್ದರು. ಈ ವಿಚಾರವನ್ನೇ ಸುದೀಪ್ ಮುಂದೆ ಪ್ರಿಯಾ ಮತ್ತು ನಾವು ಪ್ರಸ್ತಾಪ ಮಾಡಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದೆವು. ಸದ್ಯ ಕಷ್ಟದಲ್ಲಿರುವ ನಿರ್ಮಾಪಕ ಕುಮಾರ್ ಅವರಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ 5 ಕೋಟಿ ರೂ. ಕೊಡೋಣ. ನಂತರ ಒಳ್ಳೆ ಕಥೆ ಸಿಕ್ಕಾಗ ಸಿನಿಮಾ ಮಾಡೋಣ ಎನ್ನುವ ನಿರ್ಧಾರ ಮಾಡಿದೆವು. ಇದನ್ನೇ ಎನ್ ಕುಮಾರ್ ಅವರನ್ನು ಭೇಟಿಯಾಗಿ ಹೇಳಿದೆ. ಆದರೆ ನನಗೆ 5 ಕೋಟಿ ರೂ. ಭಿಕ್ಷೆ ಕೊಡುತ್ತೀರಾ? ಹಣ ಬೇಡ ಸಿನಿಮಾ ಮಾಡಿ ಎಂದಿದ್ದರು. ಇದನ್ನು ಸುದೀಪ್ ಅವರಿಗೆ ತಿಳಿಸಿದೆ. 8-9 ಕೋಟಿ ರೂ. ಕೊಡಲು ಹೇಳಿ ಎಂದಿದ್ದಾರೆ ಎಂದೆ. ಕೊಡಬೇಕು ಎಂದರೆ ಏನು? ನಾನೇನು ಅವರಿಂದ ಹಣ ಪಡೆದಿದ್ದೇನಾ, ರನ್ನ ರಿಲೀಸ್ಗೆ ತೊಂದರೆಯಾಗಿದೆ ಸಹಾಯ ಮಾಡಿ ಎಂದಿದ್ದರು. ಆದರೆ ಈಗ ನಾನು ಕೊಡಬೇಕು ಎನ್ನುವ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಇದು ಅರ್ಥವಾಗುತ್ತಿಲ್ಲ ಎಂದು ಸುದೀಪ್ ಬೇಸರಿಸಿಕೊಂಡರು. ಸುದೀಪ್ ನನಗೆ ಹಣ ಕೊಡಬೇಕು, ಕೊಟ್ಟ ನಂತರ ಕೊಡುತ್ತೇನೆ ಎಂದು ಸಾಲಗಾರರಿಗೆ ಹೇಳಿಕೊಂಡು ಕುಮಾರ್ ಅವರು ತಿರುಗಾಡಿದ್ದ ಮಾಹಿತಿಯೂ ಸುದೀಪ್ ಅವರಿಗೆ ಕಿರಿಕಿರಿ ಉಂಟು ಮಾಡಿದೆ ಎಂದು ವಿವಾದದ ಸಮಗ್ರ ವಿವರ ನೀಡಿದರು.
ಇದನ್ನೂ ಓದಿ: Kiccha Sudeep: ನಿರ್ಮಾಪಕ ಕುಮಾರ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ ಸುದೀಪ್
ಎನ್ ಕುಮಾರ್ ದೊಡ್ಡ ನಿರ್ಮಾಪಕ. ಸಾಕಷ್ಟು ಸಿನಿಮಾ ಮಾಡಿದ್ದಾರೆ. ಆದರೆ ನಷ್ಟವಾಗಿರುವ ಸಿನಿಮಾಗಳೆಲ್ಲಾ ಸುದೀಪ್ ಅವರಿಂದ ಆಗಿದೆ, ಅವರೇ ಹಣ ಕೊಡಬೇಕು ಎನ್ನುವ ಭಾವನೆ ಅವರಿಗೆ ಇದೆ. ಅವರಿವರ ಬಳಿ ಈ ರೀತಿ ಮಾತನಾಡಿಕೊಳ್ಳುತ್ತಿದ್ದರಿಂದ ಸುದೀಪ್ ಗಮನಕ್ಕೂ ಬಂದಿದೆ. ಸಹಾಯ ಎಂದು ಬಂದಿದ್ದು ಈಗ ಆಪಾದನೆಯಾಗುತ್ತಿದೆಯಲ್ಲ, ಇದು ಸರಿಯಲ್ಲ ಎಂದು ಸುದೀಪ್ ಬೇಸರಗೊಂಡರು. ನಂತರ ಒಂದು ಸಿನಿಮಾ ಮಾಡೋಣ, 5 ಕೋಟಿ ಬೇಡ ಸಿನಿಮಾ ಮಾಡೋಣ ಎಂದು ಕುಮಾರ್ ಹೇಳಿದರು. ಮತ್ತೊಬ್ಬ ನಿರ್ದೇಶಕನನ್ನು ಕಳುಹಿಸಿದರು. ಆದರೆ ಅದು 50-60 ಕೋಟಿ ರೂ. ಬಜೆಟ್ ಸಿನಿಮಾ ಎಂದಾಗ ಅಷ್ಟು ಬಜೆಟ್ ಆಗಲ್ಲ ಎಂದು ಚರ್ಚೆಯಾಯಿತು. ಆಗ ನಾನು ಮತ್ತು ಸುದೀಪ್ ಒಂದು ಕಂಪನಿ ಜೊತೆ ಮಾತುಕತೆ ನಡೆಸಿ ಕುಮಾರ್ ಅವರಿಗೆ ಸಹಾಯ ಮಾಡಲು ಚಿಂತನೆ ನಡೆಸಿದೆವು. ಅದರ ಪ್ರಕಾರ ಕುಮಾರ್ ಆಪ್ತರ ಮೂಲಕ ಕುಮಾರ್ ಅವರಿಗೆ ವಿಷಯ ತಿಳಿಸಿದೆವು. ಕಂಪನಿಯೇ ಸಂಪೂರ್ಣ ಹಣ ಹೂಡಿಕೆ ಮಾಡಲಿದೆ. 5 ಕೋಟಿ ಮೊದಲೇ ಕೊಡಲಿದ್ದಾರೆ. 55 ಕೋಟಿ ನಂತರ ಸಿಗಲಿದೆ. ಸಿನಿಮಾದಿಂದ ಆಗುವ ವ್ಯವಹಾರದಲ್ಲಿ ಶೇ.30 ರಷ್ಟು ಹಣ ಕುಮಾರ್ ಅವರಿಗೆ ಶೇ.70ರಷ್ಟು ಹಣ ಕಂಪನಿಗೆ ಎನ್ನುವ ಮಾಹಿತಿ ಕಳುಹಿಸಿದೆವು. ಇದನ್ನು ಒಪ್ಪಿಕೊಂಡಿದ್ದರು. ಆದರೆ ಕೆಲ ದಿನಗಳ ನಂತರ ನಮ್ಮ ಕಚೇರಿಗೆ ಬಂದಾಗ ನಾನು ದೊಡ್ಡ ದೊಡ್ಡ ಸಿನಿಮಾ ಮಾಡಿದ್ದೇನೆ. ಎಲ್ಲಿಂದಲಾದರೂ ನಾನೇ ತಂದು ಹಣ ಹಾಕುತ್ತೇನೆ. ಬೇರೆಯವರು ಹಾಕುವುದು ಬೇಡ, ನಾನೇ ಸಿನಿಮಾ ನಿರ್ಮಿಸುತ್ತೇನೆ ಎಂದು ಕೂಗಾಡಿ ಹೊರಟು ಹೋದರು. ನಂತರ ನಾವು ಈ ವಿಚಾರವನ್ನು ಅಲ್ಲಿಗೆ ಬಿಟ್ಟೆವು. ಸುದೀಪ್ ಅವರ ದಾರಿಯಲ್ಲಿ ಅವರು ಹೋಗುತ್ತಿದ್ದಾರೆ. ಇವರು ವಾಣಿಜ್ಯ ಮಂಡಳಿಗೆ ಹೋದರು, ಪತ್ರ ಕಳುಹಿಸಿದರು. ಅದಕ್ಕೆ ನಾವು ಉತ್ತರವನ್ನೂ ಕೊಟ್ಟಿದ್ದೇವೆ ಎಂದು ಜಾಕ್ ಮಂಜು ವಿವರಿಸಿದರು.
ಇದನ್ನೂ ಓದಿ: ’ನನಗೆ ನ್ಯಾಯ ಸಿಗದಿದ್ದರೆ ಸುದೀಪ್ ಮನೆ ಮುಂದೆ ಧರಣಿ ಮಾಡ್ತೇನಿ: ನಿರ್ಮಾಪಕ ಎನ್ ಎಂ ಕುಮಾರ್