ಕಂಟೆಂಟ್, ಟ್ರೇಲರ್ ಹಾಗೂ ಹಾಡುಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಕ್ರೇಜ್ ಕ್ರಿಯೇಟ್ ಮಾಡಿರೋ ಸಿನಿಮಾ ''ಗರಡಿ''. ವಿಕಟಕವಿ ಯೋಗರಾಜ್ ಭಟ್ ಬಹಳ ವರ್ಷಗಳ ನಂತರ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಗರಡಿ ಚಿತ್ರನ್ನು ಕನ್ನಡ ಚಿತ್ರರಂಗದ ತಾರೆಯರು, ಸಿನಿಪ್ರೇಮಿಗಳು ನೋಡಿ ಮೆಚ್ಚಿಕೊಂಡಿದ್ದಾರೆ.
ಗರಡಿ ಸ್ಪೆಷಲ್ ಶೋ: ಇತ್ತೀಚೆಗೆ ಕನ್ನಡ ಚಿತ್ರರಂಗದ ತಾರೆಯರಿಗಾಗಿ ಚಿತ್ರತಂಡ ಸ್ಪೆಷಲ್ ಶೋ ಹಮ್ಮಿಕೊಂಡಿತ್ತು. ಗರಡಿ ಸಿನಿಮಾವನ್ನು ರಮೇಶ್ ಅರವಿಂದ್, ಅಭಿಷೇಕ್ ಅಂಬರೀಶ್, ವಿನೋದ್ ಪ್ರಭಾಕರ್, ಶರಣ್, ಡಾರ್ಲಿಂಗ್ ಕೃಷ್ಣ, ಪ್ರಥಮ್, ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವರು ಗರಡಿ ಚಿತ್ರತಂಡ ಮತ್ತು ಅಭಿಮಾನಿಗಳ ಜೊತೆ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ. ಜೊತೆಗೆ, ದೇಸಿ ಕ್ರೀಡೆ ಕುಸ್ತಿ ಕುರಿತ ಕಥೆ ಬಗ್ಗೆ ಮೆಚ್ಚಿ ಕೊಂಡಾಡಿದ್ದಾರೆ.
ಕೌರವ ಖ್ಯಾತಿಯ ಬಿ.ಸಿ ಪಾಟೀಲ್, ಯಶಸ್ ಸೂರ್ಯ ಹಾಗೂ ಅತಿಥಿ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುವ 'ಗರಡಿ' ಚಿತ್ರ ನಿಜಕ್ಕೂ ಈ ವರ್ಷದ ಹಿಟ್ ಸಿನಿಮಾಗಳಲ್ಲಿ ಒಂದು ಎಂದು ಈಗಾಗಲೇ ಸಿನಿಮಾ ವೀಕ್ಷಿಸಿದವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಅವರು ಗರಡಿ ಅಂದ್ರೆ ಏನು?, ದಶಕಗಳ ಹಿಂದೆ ಹಳ್ಳಿಗಳಲ್ಲಿ ಗರಡಿ ಮನೆಗೆ ಇದ್ದ ಗೌರವ ಏನು?, ಆ ಕುಸ್ತಿಪಟುಗಳು ಊರಲ್ಲಿ ಇದ್ದರೆ ಪೊಲೀಸ್ನವರು ಇದ್ದಂತೆ ಎಂಬ ನಂಬಿಕೆ ಏಕಿತ್ತು? ಎಂಬ ವಿಷಯಗಳ ಜೊತೆಗೆ ಮುದ್ದಾದ ಲವ್ ಸ್ಟೋರಿಯನ್ನು ಅಚ್ಚುಕಟ್ಟಾಗಿ ರವಾನಿಸುವ ಮೂಲಕ ಭಟ್ರು ನಾನು ಮಾಸ್ ನಿರ್ದೇಶಕ ಕೂಡ ಹೌದು ಅನ್ನೋದನ್ನು ಸಾಬೀತುಪಡಿಸಿದ್ದಾರೆ.
ಮಾಸ್ ಚಿತ್ರಕ್ಕೂ ಸೈ... ಈ ಹಿಂದೆ ಮಣಿ ಹಾಗೂ ರಂಗ ಎಸ್.ಎಸ್.ಎಲ್.ಸಿ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಈ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಹೆಸರು ತಂದು ಕೊಟ್ಟಿರಲಿಲ್ಲ. ಆದರೆ, ಗರಡಿ ಸಿನಿಮಾ ನೋಡಿದ್ಮಲೇ ಭಟ್ರು ಬರೀ ಲವ್ ಸ್ಟೋರಿ ಚಿತ್ರಗಳ ಮಾಸ್ಟರ್ ಅಲ್ಲದೇ ಮಾಸ್ ಚಿತ್ರಕ್ಕೂ ಸೈ ಅನ್ನೋ ಭಾವನೆ ಚಿತ್ರ ವೀಕ್ಷಿಸಿದ ಹಲವರಿಗೆ ಬಂದಿದೆ.
ಗರಡಿ ಕಥೆಯೇನು? ಗರಡಿ ಸಿನಿಮಾದಲ್ಲಿ ಕುಸ್ತಿಯಲ್ಲಿ ಸೋಲದೇ ಇರುವಂತಹ ಒಂದು ಮನೆತನ ಇರುತ್ತದೆ. ಅದೇ ರವಿಶಂಕರ್ ರಾಣೇ ಮನೆತನ. ಈ ಊರಲ್ಲಿ ಬಿ.ಸಿ ಪಾಟೀಲ್ ಪೈಲ್ವಾನ್‌ಗಳ ಗುರು. ಚಿತ್ರದಲ್ಲಿ ನಟ ರವಿಶಂಕರ್ ಅಣ್ಣನಿಗೆ ಪೈಲ್ವಾನ್ ಒಬ್ಬ ಹೊಡೆದು ಸಾಯಿಸಿಬಿಡುತ್ತಾನೆ. ಆ ಸಿಟ್ಟಿಗೆ ರವಿಶಂಕರ್ ಆ ಪೈಲ್ವಾನ್ ಅನ್ನೇ ಸಾಯಿಸುತ್ತಾನೆ. ಅವರಿಗೆ ಇಬ್ಬರು ಮಕ್ಕಳಿರುತ್ತಾರೆ. ಅವರೇ ದರ್ಶನ್ ಮತ್ತು ಯಶಸ್ ಸೂರ್ಯ, ಅಲ್ಲಿಂದ ಕಥೆ ಶುರುವಾಗುತ್ತದೆ. ಹಾಗಂತ ತಂದೆಯನ್ನು ಸಾಯಿಸಿದ್ದಕ್ಕೆ ರಿವೇಂಜ್ ತೆಗೆದುಕೊಳ್ಳುವ ಸ್ಟೋರಿ ಇಲ್ಲಿಲ್ಲ. ಇಲ್ಲಿ ರಿವೇಂಜ್ ಬೇರೇನೇ ಇದೆ. ಅದೇನು ಅಂತ ತಿಳಿಯಲು ನೀವು ಸಿನಿಮಾ ವೀಕ್ಷಿಸಬೇಕು.
ಇದನ್ನೂ ಓದಿ: ಸಲ್ಮಾನ್ ಕತ್ರಿನಾ ಆಕರ್ಷಕ ಫೋಟೋ ಶೇರ್: ಜೊತೆಯಾಗಿ ದೀಪಾವಳಿ ಹಬ್ಬಕ್ಕೆ ಶುಭಕೋರಿದ ಸ್ಟಾರ್ಸ್
ಗರಡಿ ಚಿತ್ರದ ಮೂಲಕ ನಟ ಯಶಸ್ ಸೂರ್ಯ ಅವರಿಗೆ ಮತ್ತಷ್ಟು ಒಳ್ಳೆ ಸಿನಿಮಾಗಳ ಅವಕಾಶಗಳು ಒಲಿದು ಬರಲಿವೆ ಎಂಬ ವಿಶ್ವಾಸವಿದೆ. ಕುಸ್ತಿ ಮನೆಯ ಯಜಮಾನನ ಪಾತ್ರದಲ್ಲಿ ಬಿ.ಸಿ ಪಾಟೀಲ್ ಖಡಕ್ ನಟನೆ ಉತ್ತಮವಾಗಿದೆ. ಸೋನಾಲ್ ಟಿಕ್ ಟಾಕ್ ಸ್ಟಾರ್ ಪಾತ್ರದಲ್ಲಿ ಪಡ್ಡೆಹುಡುಗರಿಗೆ ಇಷ್ಟ ಆಗ್ತಾರೆ. ಆರ್ಮುಗಂ ರವಿಶಂಕರ್ ಕಣ್ಣು ಮಿಟುಕಿಸುವ ರಾಣೇ ಮನೆತನದ ನಾಯಕನಾಗಿ ಮಿಂಚಿದ್ದಾರೆ. ಜೊತೆಗೆ, ಬಿ.ಸಿ ಪಾಟೀಲ್ ಅಳಿಯ ಸುಜಯ್ ಬೇಲೂರು ನೆಗೆಟಿವ್ ಶೇಡ್ನಲ್ಲಿ ಗಮನ ಸೆಳೆಯುತ್ತಾರೆ. ಧರ್ಮಣ್ಣ ಸೂರ್ಯನ ಗೆಳಯನಾಗಿ ಇಷ್ಟ ಆಗ್ತಾರೆ. ನಿಶ್ವಿಕಾ ನಾಯ್ಡು ಸ್ಪೆಷಲ್ ಸಾಂಗ್ನಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ. ಇದೆಲ್ಲದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ, ಪಂಚಿಂಗ್ ಡೈಲಾಗ್ಗಳು ಚಿತ್ರಮಂದಿರಗಳಲ್ಲಿ ಅವರ ಅಭಿಮಾನಗಳಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತವೆ.
ಇದನ್ನೂ ಓದಿ: 'ಕಾಫಿ ವಿತ್ ಕರಣ್ ಸೀಸನ್ 8' ಫೈನಲ್ ಎಪಿಸೋಡ್ಗೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್?
ಗರಡಿ ಚಿತ್ರಕ್ಕೆ, ನಿರಂಜನ್ ಬಾಬು ಕ್ಯಾಮರಾ ವರ್ಕ್ ಮತ್ತು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರ ಸಂಗೀತ ಮೆರುಗು ನೀಡಿದೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸೌಮ್ಯ ಫಿಲಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ಅವರು ನಮ್ಮ ದೇಸಿ ಕ್ರೀಡೆ ಕುರಿತ ಸಿನಿಮಾ ನಿರ್ಮಾಣ ಮಾಡಿರೋ ಖುಷಿಯಲ್ಲಿದ್ದಾರೆ. ಒಟ್ಟಿನಲ್ಲಿ ಗರಡಿ ಚಿತ್ರ ಫ್ಯಾಮಿಲಿ ಸಮೇತ ನೋಡುಬಹುದಾದ ಸಿನಿಮಾ.