'ಲಕ್ಷ್ಮಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾಜಿ ಸಚಿವ ಎಚ್ ಎಂ ರೇವಣ್ಣ ಅವರ ಮಗ ಅನೂಪ್ 2017 ರಲ್ಲಿ ಬಿಡುಗಡೆಯಾದ 'ಪಂಟ' ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದರು. ಬಳಿಕ ಸುಮಾರು ಏಳು ವರ್ಷಗಳ ದೀರ್ಘ ಬ್ರೇಕ್ ತೆಗೆದುಕೊಂಡಿದ್ದ ಅವರು ಇದೀಗ ಆರ್ ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಮೂಲಕ ರೀ ಎಂಟ್ರಿ ಕೊಡುತ್ತಿದ್ದಾರೆ.
ಕಬ್ಜ ಚಿತ್ರದಲ್ಲಿ ಅನೂಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ರಿಯಲ್ ಸ್ಟಾರ್ ಉಪೇಂದ್ರ ಅವರ ಸ್ನೇಹಿತನ ಪಾತ್ರದಲ್ಲಿ ಅನೂಪ್ ನಟಿಸಿದ್ದು, ಇಡೀ ಚಿತ್ರದಲ್ಲಿ ಅವರ ಪಾತ್ರ ಸಾಗುತ್ತದೆ. ಕಬ್ಜ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಚಿತ್ರದಲ್ಲಿ ನಟಿಸಿದ ಅನುಭವ ಕುರಿತು ಮಾತನಾಡಿರುವ ಅವರು, ಉಪ್ಪಿ ಸರ್ ಬಲಗೈ ಬಂಟನಾಗಿ ಕಬ್ಜದಲ್ಲಿ ನಟಿಸಿದ್ದೇನೆ. ಉಪ್ಪಿ ಸರ್ ನಿರ್ದೇಶಕರಾಗಿ, ನಟರಾಗಿ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು ಮಾಡಿದ್ದಾರೆ. ಅವರ ಜೊತೆಗೆ ನಾಲ್ಕು ವರ್ಷ ಕಾಲ ಕಳೆಯುವ ಅವಕಾಶ ಸಿಕ್ಕಿತು ಎಂದು ತಮ್ಮ ಸಂತಸ ಹಂಚಿಕೊಂಡರು.
ಮುಂದುವರೆದು, ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದೇನೆ. ನಾಲ್ಕು ವರ್ಷ ಹೋಗಿದ್ದೇ ಗೊತ್ತಾಗಲಿಲ್ಲ. ಏಕೆಂದರೆ, ಚಿತ್ರದ ಕೆಲಸ ಅಷ್ಟಿತ್ತು. ಬರೀ ನಟನಾಗಿಯಷ್ಟೇ ಅಲ್ಲ, ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಈ ಚಿತ್ರದಿಂದ ತುಂಬಾ ಕಲಿತಿದ್ದೇನೆ. ಇಡೀ ತಂಡ ಬಹಳ ಕಷ್ಟಪಟ್ಟು ಕೆಲಸ ಮಾಡಿದೆ. ಹಾಗಾಗಿಯೇ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಎಲ್ಲರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದರು.
ಇದನ್ನೂ ಓದಿ: ಆಸ್ಕರ್ ಗೆದ್ದ ನಾಟು ನಾಟು: ಗೀತೆ ರಚನೆಕಾರ ಚಂದ್ರಬೋಸ್ ಎಕ್ಸ್ಕ್ಲೂಸಿವ್ ಸಂದರ್ಶನ ಇಲ್ಲಿದೆ
ಕಬ್ಜ ಸಿನಿಮಾದಲ್ಲಿ ಮಾತ್ರವಲ್ಲದೇ 'ಹೈಡ್ ಅಂಡ್ ಸೀಕ್' ಎಂಬ ಇನ್ನೊಂದು ಚಿತ್ರದಲ್ಲೂ ಅನೂಪ್ ನಟಿಸಿದ್ದಾರೆ. ಆ ಚಿತ್ರವೂ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆಯಂತೆ. 'ಹೈಡ್ ಅಂಡ್ ಸೀಕ್' ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಅನೂಪ್ ಕಾಣಿಸಿಕೊಂಡಿದ್ದಾರೆ. ಒಬ್ಬ ನಟನಾಗಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡುತ್ತಿರಬೇಕು, ಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು. ಅದಕ್ಕೆ ಸರಿಯಾಗಿ 'ಹೈಡ್ ಅಂಡ್ ಸೀಕ್' ಚಿತ್ರದಲ್ಲೊಂದು ವಿಭಿನ್ನ ಪಾತ್ರ ನನಗೆ ಸಿಕ್ಕಿದೆ. ಇದರಲ್ಲಿ ಕಿಡ್ನಾಪರ್ ಆಗಿ ಕಾಣಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಬೇರೆಬೇರೆ ತರಹದ ಪ್ರಯೋಗಗಳನ್ನು ಮಾಡುವ ಆಸೆ ಇದೆ ಎಂಬುದು ಅನೂಪ್ ಅವರ ಮನದಾಳದ ಮಾತು.
ಈ ಎರಡು ಚಿತ್ರಗಳಲ್ಲದೇ ಒಂದಿಷ್ಟು ಕಥೆಗಳನ್ನು ಕೇಳಿದ್ದಾರಂತೆ ಅನೂಪ್. ಆದರೆ ಅವರ ತಂದೆ ಎಚ್ ಎಂ ರೇವಣ್ಣ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಮತ್ತು ಅವರ ಪರವಾಗಿ ಪ್ರಚಾರ ಮಾಡಬೇಕಿರುವುದರಿಂದ, ಈ ಎರಡೂ ಚಿತ್ರಗಳ ಬಿಡುಗಡೆಯ ನಂತರ ಒಂದು ಚಿಕ್ಕ ಗ್ಯಾಪ್ ಪಡೆಯಲಿದ್ದಾರಂತೆ. ಆಮೇಲೆ ಪುನಃ ಇನ್ನಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ತನ್ನದೇ ಛಾಫು ಮೂಡಿಸಲು ಅನೂಪ್ ರೆಡಿಯಾಗಿದ್ದಾರೆ.
ಇದನ್ನೂ ಓದಿ: ಹೆಸರು ಬದಲಾಯಿಸಿದ 'ಹೊಯ್ಸಳ'.. 'ಗುರುದೇವ ಹೊಯ್ಸಳ'ನಾಗಿ ಬಿಡುಗಡೆ