ಬೆಂಗಳೂರಿನ ಮೋದಿ ಆಸ್ಪತ್ರೆ ಬಳಿ ಇರುವ ವರಸಿದ್ಧಿ ವಿನಾಯಕ ದೇವಸ್ಥಾನವು ಕನ್ನಡ ಚಿತ್ರರಂಗಕ್ಕೆ ಲಕ್ಕಿ ದೇವಸ್ಥಾನ. ಇಂದು ದಿಲ್ ಖುಷ್ ಎಂಬ ಹೊಸ ಚಿತ್ರವೂ ಇದೇ ಸನ್ನಿಧಿಯಲ್ಲಿ ಸೆಟ್ಟೇರಿತು. ಈಗಾಗಲೇ ಮುಂಗಾರು ಮಳೆ, ಮುಕಂದ ಮುರಾರಿ, ರನ್ನ ಹೀಗೆ... ಸಾಕಷ್ಟು ಸಿನಿಮಾಗಳು ಈ ದೇವಸ್ಥಾನದಲ್ಲಿ ಪೂಜೆ ಆಗುವ ಮೂಲಕ ಬಳಿಕ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿವೆ. ಹೀಗಾಗಿ ದಿಲ್ ಖುಷ್ ಸಿನಿಮಾ ತಂಡವೂ ಅದೇ ಮಾರ್ಗವನ್ನು ಅನುಸರಿಸಿತು.
ಈ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಸಿನಿಮಾದ ಪೂಜೆ ನೆರವೇರಿದೆ. ಈ ಚಿತ್ರಕ್ಕೆ ದಿಲ್ ಖುಷ್ ಅಂತಾ ಟೈಟಲ್ ಇಡಲಾಗಿದೆ. ಚಿತ್ರಕ್ಕೆ ಯುವ ನಿರ್ದೇಶಕ ಪ್ರಮೋದ್ ಜಯ ನಿರ್ದೇಶನವಿದೆ. ಯುವ ನಟ ರಂಜಿತ್ ಹಾಗೂ ಯುವ ನಟಿ ಸ್ಪಂದನ ಸೋಮಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರತಂಡದ ಸಮ್ಮುಖದಲ್ಲಿ ಸಿನಿಮಾ ಪತ್ರಿಕಾ ಸಂಪರ್ಕದವರಾದ ಸುಧೀಂದ್ರ ವೆಂಕಟೇಶ್ ಫಸ್ಟ್ ಲುಕ್ ಬಿಡುಗಡೆ ಮಾಡಿದರು.
ನಿರ್ದೇಶಕ ಪ್ರಮೋದ್ ಜಯ ಮಾತನಾಡಿ, ನಾನು ಸಿಂಪಲ್ ಸುನಿ ಅವರ ಬಳಿ ಕೆಲಸ ಮಾಡಿದ್ದೀನಿ. ಬಜಾರ್ ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದೇನೆ. ದಿಲ್ ಖುಷ್ ನನ್ನ ಪ್ರಥಮ ನಿರ್ದೇಶನದ ಚಿತ್ರ. ಇದೊಂದು ರೊಮ್ಯಾಂಟಿಕ್ ಕಾಮಿಡಿ. ನನ್ನ ಜೀವನದ ಕೆಲವು ಅನುಭವಗಳೊಂದಿಗೆ ಮತ್ತು ನಾನು ಕಂಡ ಕೆಲವು ಘಟನೆಗಳನ್ನು ಆಧರಿಸಿ ಈ ಚಿತ್ರ ನಿರ್ದೇಶಿಸುತ್ತಿದ್ದೇನೆ. ತೊಂಬತ್ತರಷ್ಟು ಭಾಗ ಮನೋರಂಜನೆ ಇದ್ದರೆ, ಹತ್ತು ಭಾಗದಷ್ಟು ಭಾವನಾತ್ಮಕ ಸನ್ನಿವೇಶಗಳಿವೆ ಎಂದರು.
ಯುವ ನಟ ರಂಜಿತ್ ಮಾತನಾಡಿ, ನಾಟಕ, ಧಾರಾವಾಹಿ, ಕಿರುಚಿತ್ರ ಹಾಗೂ ಹಿರಿತೆರೆಯ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಸದಾ ಲವಲವಿಕೆಯಿಂದಿರುವ ಹುಡುಗನ ಪಾತ್ರ ನನ್ನದು ಎಂದರು.
ಧಾರಾವಾಹಿಯಲ್ಲಿ ನಟಿಸಿದ್ದ ಸ್ಪಂದನ ಸೋಮಣ್ಣ ಅವರಿಗೂ ಇದು ಮೊದಲ ಸಿನಿಮಾ. ಈಗಿನ ಕಾಲದ ಹುಡುಗಿಯರು ಹೇಗಿರುತ್ತಾರೋ, ಅದೇ ರೀತಿಯಿರುವ ಹುಡುಗಿಯ ಪಾತ್ರ ನನ್ನದು. ಚಿತ್ರದ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದೇನೆ ಎಂದು ತಮ್ಮ ಸಿನಿ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡರು.
ರೊಮ್ಯಾಂಟಿಕ್ ಸನ್ನಿವೇಶಗಳಿಗೆ ನಾಯಕ-ನಾಯಕಿ ಇದ್ದಾರೆ. ಕಾಮಿಡಿ ಮಾಡಲು ನಾನು, ರಂಗಾಯಣ ರಘು ಹಾಗೂ ರಘು ರಮಣಕೊಪ್ಪ ಇದ್ದೇವೆ ಎಂದು ನಟ ಧರ್ಮಣ್ಣ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಯಜಮಾನ, ಅವನೇ ಶ್ರೀಮನ್ನಾರಾಯಣ ಸಿನಿಮಾ ಮೂಲಕ ಗಮನ ಸೆಳೆದಿರುವ ಸೂರ್ಯ ಪ್ರವೀಣ್ ಒಂದೊಳ್ಳೆ ಪಾತ್ರ ಮಾಡಿದ್ದೀನಿ ಅಂದರು.
ದಿಲ್ ಖುಷ್ ಚಿತ್ರಕ್ಕೆ ಪ್ರಸಾದ್ ಶೆಟ್ಟಿ ಸಂಗೀತವಿದ್ದು, ನಿವಾಸ್ ನಾರಾಯಣ್ ಛಾಯಾಗ್ರಾಹಣವಿದೆ. ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭಾ ಶೇಖರ್ ನಿರ್ಮಿಸುತ್ತಿದ್ದಾರೆ. ಇದೇ ತಿಂಗಳು 15ರಿಂದ ಬೆಂಗಳೂರು, ಶನಿವಾರ ಸಂತೆಯಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.