ಬೆಂಗಳೂರು: ನಟ ನಂದಮೂರಿ ತಾರಕರತ್ನ ಅವರಿಗೆ ಹೃದಯಾಘಾತದ ಸಂಭವಿಸಿರುವ ಹಿನ್ನೆಲೆ ಬೆಂಗಳುರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ನಟ ಜ್ಯೂ.ಎನ್ಟಿಆರ್, ಕಲ್ಯಾಣ್ ರಾಮ್, ಶಿವ ರಾಜ್ಕುಮಾರ್, ಸಚಿವ ಸುಧಾಕರ್, ನಂದಮೂರಿ ಬಾಲಕೃಷ್ಣ ಅವರು ಇಂದು ಭೇಟಿಯಾಗಿ ನಂದಮೂರಿ ತಾರಕರತ್ನ ಅವರ ಆರೋಗ್ಯ ವಿಚಾರಿಸಿದ್ದಾರೆ.
ಡಾ.ಕೆ ಸುಧಾಕರ್ ಮಾಹಿ: ವೈದ್ಯರ ಭೇಟಿ ಬಳಿಕ ರಾಜ್ಯ ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದು, ತೀವ್ರ ಹೃದಯಾಘಾತದಿಂದ ಅಸ್ವಸ್ಥರಾದ ತಾರಕರತ್ನ ಅವರಿಗೆ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಗ್ರೀನ್ ಕಾರಿಡಾರ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ನಾರಾಯಣ ಹೃದಯಾಲದಲ್ಲಿ ನ್ಯೂರಾಲಜಿ, ಕಾರ್ಡಿಯಾಲಜಿ ಸೇರಿದಂತೆ ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ನಿಮಾನ್ಸ್ ಆಸ್ಪತ್ರೆ ಮೆದುಳಿನ ತಜ್ಞ ವೈದ್ಯರ ತಂಡದಿಂದಲೂ ಸಹ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ಪಡೆಯಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ ಅಪಾಯದಿಂದ ಸಂಪೂರ್ಣ ಹೊರ ಬಂದಿಲ್ಲ. ಆದರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ತಾರಕರತ್ನ ಅವರು ಆದಷ್ಟು ಶೀಘ್ರ ಗುಣರಾಗಲಿ ಎಂದು ಆಶಿಸೋಣ ಎಂದು ತಿಳಿಸಿದರು.
ನಟ ಜೂನಿಯರ್ ಎನ್ಟಿಆರ್ ಮಾಹಿತಿ: ತೆಲುಗು ನಟ ಜೂನಿಯರ್ ಎನ್ಟಿಆರ್ ಮಾತನಾಡಿ, ತಾರಕರತ್ನರಿಗೆ ನಾರಾಯಣ ಹೃದಯಾಲಯದ ವೈದ್ಯರಿಂದ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯ ಬಲದ ಜೊತೆ ಆತ್ಮ ಬಲದಿಂದ ಹೋರಾಡಬೇಕಿದೆ. ತಾರಕರಿಗೆ ಅಸಂಖ್ಯಾತ ಅಭಿಮಾನಿಗಳ ಹಾರೈಕೆ ಇದೆ. ಅತಿ ಶೀಘ್ರದಲ್ಲಿ ವಿಷಮ ಸ್ಥಿತಿಯಿಂದ ಪಾರಾಗುವ ವಿಶ್ವಾಸ ನಮಗಿದೆ. ನಮ್ಮೆಲ್ಲರ ಜೊತೆ ಆನಂದದಿಂದ ಇನ್ನಷ್ಟು ದಿನ ಇರಲಿ ಎಂದು ಭಗವಂತನಲ್ಲಿ ಬೇಡುವೆ. ಸ್ಥಿರವಾಗಿದ್ದಾರೆ. ಆದ್ರೆ ಪ್ರಾಣಾಪಾಯದಿಂದ ಪಾರಾಗಿಲ್ಲ. ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಭಿಮಾನಿಗಳ ಹಾರೈಕೆ ಇಂದ ಎಲ್ಲವೂ ಒಳ್ಳೆದಾಗುತ್ತದೆ. ಡಾ. ಸುಧಾಕರ್ ಅವರಿಗೂ ಧನ್ಯವಾದ ತಿಳಿಸುತ್ತೇನೆ. ಅವರು ನಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡ್ತಾ ಇದ್ದಾರೆ ಎಂದು ತಿಳಿಸಿದರು.
ನಟ ನಂದಮೂರಿ ಬಾಲಕೃಷ್ಣ ಮಾಹಿತಿ: ನಟ ನಂದಮೂರಿ ಬಾಲಕೃಷ್ಣ ಮಾತನಾಡಿ, ತಾರಕರತ್ನ ಕುಸಿದು ಬಿದ್ದು ಪ್ರಜ್ಞಾಹೀನರಾದಾಗ ಅಚ್ಚರಿ ನಡೆದಿತ್ತು. ತೀವ್ರ ಹೃದಯಾಘಾತದ ಬಳಿಕ ಹೃದಯ ಸ್ತಂಭನವಾಗಿತ್ತು. ವೈದ್ಯರ ಪರಿಶೀಲನೆ ವೇಳೆ ಹೃದಯ ಬಡಿತ ಸ್ತಬ್ಧವಾಗಿತ್ತು. ಬಳಿಕ ಅಚ್ಚರಿಯೆಂಬಂತೆ ಹೃದಯ ಬಡಿತ ಮರಳಿತ್ತು. ಆಂಧ್ರ ವೈದ್ಯರ ಶಿಫಾರಸ್ಸಿನಂತೆ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಸದ್ಯ ವೈದ್ಯರು ಬಹಳ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ತಾರಕರತ್ನ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕೆಲವೊಮ್ಮೆ ಕಣ್ಣು ಮಿಟುಕಿಸುವುದು, ದೇಹ ಅಲುಗಾಡುವುದು ಕಂಡು ಬರುತ್ತಿದೆ. ಔಷಧ ಉಪಚಾರಕ್ಕೆ ಸಮಯ ತೆಗೆದುಕೊಳ್ಳುತ್ತದೆ. ತಾರಕರತ್ನ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಎನ್ಟಿಆರ್ ಮತ್ತು ರಾಜ್ಕುಮಾರ್ ಅಭಿಮಾನಿಗಳ ಹಾರೈಕೆಗೆ ಚಿರಋಣಿ ಎಂದರು.
ಇನ್ನು, ತಾರಕರತ್ನ ಆರೋಗ್ಯ ವಿಚಾರಿಸಲು ನಟ ಶಿವ ರಾಜ್ಕುಮಾರ್ ಆಗಮಿಸಿದ್ದಾರೆ. ರಾಜ್ಕುಮಾರ್ ಮತ್ತು ನಮ್ಮ ಕುಟುಂಬದ ನಡುವೆ ಉತ್ತಮ ಬಾಂಧವ್ಯ ಇದೆ. ಸಹೋದರ ಪುನೀತ್ ಅಗಲಿಕೆ ಬಗ್ಗೆ ಬೇಸರ ಇದೆ ಎಂದು ಬಾಲಕೃಷ್ಣ ಅವರು ಭಾವುಕರಾದರು.
ಇದನ್ನೂ ಓದಿ: ನಟ ತಾರಕರತ್ನಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಆಸ್ಪತ್ರೆಗೆ ಜ್ಯೂ.ಎನ್ಟಿಆರ್, ಕುಟುಂಬಸ್ಥರ ಭೇಟಿ
ನಟ ಶಿವ ರಾಜ್ಕುಮಾರ್ ಮಾಹಿತಿ: ನಟ ಶಿವ ರಾಜ್ಕುಮಾರ್ ಮಾತನಾಡಿ, ತಾರಕರತ್ನ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಆದರೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ವೈದ್ಯರು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಚಿಕಿತ್ಸೆಗೆ ತಾರಕರತ್ನ ಸ್ಪಂದಿಸುತ್ತಿದ್ದಾರೆ. ಆದಷ್ಟು ಬೇಗ ಆರೋಗ್ಯದಲ್ಲಿ ಚೇತರಿಕೆ ಕಾಣುವ ಭರವಸೆ ಇದೆ. ಕುಟುಂಬಸ್ಥನಂತೆ ನಾನು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.