ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣಾ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಸೆಪ್ಟಂಬರ್ 23ರಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಪ್ರತಿ ಬಾರಿಯೂ ಪೈಪೋಟಿ ಜೋರಾಗಿ ಇರುತ್ತದೆ. ಈ ಬಾರಿ ಕೂಡ ಇದಕ್ಕೆ ಹೊರತಾಗಿಲ್ಲ. ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ನಿರ್ಮಾಪಕ ಎನ್.ಎಮ್ ಸುರೇಶ್ ಕೂಡ ಇದ್ದಾರೆ.
ಹೌದು, ಈ ಬಾರಿಯ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಎನ್.ಎಮ್ ಸುರೇಶ್ ಸ್ಪರ್ಧೆ ಮಾಡುತ್ತಿದ್ದು, ನಿನ್ನೆ (ಸೆಪ್ಟಂಬರ್ 8ಕ್ಕೆ) ನಾಮಪತ್ರ ಸಲ್ಲಿಸಿದ್ದಾರೆ. ಫಿಲ್ಮ್ ಚೇಂಬರ್‌ಗೆ ಆಗಮಿಸಿದ ಎನ್.ಎಮ್ ಸುರೇಶ್, ಡಾ. ರಾಜ್ಕುಮಾರ್ ಪ್ರತಿಮೆಗೆ ಹಾರ ಹಾಕಿ ನಮಸ್ಕರಿಸಿ ಫಿಲ್ಮ್ ಚೇಂಬರ್‌ಗೆ ಎಂಟ್ರಿ ಕೊಟ್ಟರು. ಸಾರಾ ಗೋವಿಂದ್ ಬಣ ಸೇರಿದಂತೆ ಅನೇಕ ವಿತರಕರು, ನಿರ್ಮಾಪರು ದೊಡ್ಡ ಮಟ್ಟದಲ್ಲಿ ಸೇರಿ ಎನ್.ಎಮ್ ಸುರೇಶ್ ಅವರಿಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಎನ್.ಎಮ್ ಸುರೇಶ್, "ಸಾರಾ ಗೋವಿಂದ್ ನನ್ನ ಮೇಲಿನ ಪ್ರೀತಿಗಾಗಿ ಬಂದಿದ್ದಾರೆ. ನನಗೆ ಇವತ್ತು ಈ ಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ. ಒಳ್ಳೆಯ ಅಭ್ಯರ್ಥಿಗಳನ್ನು ಗೆಲ್ಲಿಸಿ. ಈಗಲೇ ಅದು ಮಾಡುತ್ತೇನೆ, ಇದು ಮಾಡುತ್ತೇನೆ ಅಂತ ಹೇಳಲ್ಲ. ಆದರೆ ಇಲ್ಲಿ ಕೆಲವು ದೊಡ್ಡ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸುವ ಕೆಲಸ ಖಂಡಿತ ಮಾಡುತ್ತೇನೆ. ಅವಕಾಶ ಕೊಡಿ" ಎಂದು ಕೇಳಿಕೊಂಡರು.
ಬಳಿಕ ಸಾರಾ ಗೋವಿಂದ್ ಮಾತನಾಡಿ, "ಬಹಳ ದಿನಗಳ ನಂತರ ಸಿಕ್ತಾ ಇದ್ದೇನೆ. ಈ ಬಾರಿಯ ಚುನಾವಣೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಪೈಪೋಟಿಯಲ್ಲಿ ನಡೆಯುತ್ತಿರುವುದು ಖುಷಿ ಆಗುತ್ತಿದೆ. ಎನ್.ಎಮ್ ಕುಮಾರ್ ಎಲ್ಲರ ಪ್ರೀತಿ, ಬೆಂಬಲದಿಂದ ನಾಮಪತ್ರ ಸಲ್ಲಿಸಿದ್ದಾರೆ. ಎನ್.ಎಮ್ ಸುರೇಶ್ ಅವರಿಗೆ ಬೆಂಬಲ ನೀಡುತ್ತಿದ್ದೇನೆ. ಅವರವರ ಯೋಗ್ಯತೆ ನೋಡಿಕೊಂಡು ಗೆಲ್ಲಿಸಿ" ಎಂದು ಹೇಳಿದರು.
2003ರಲ್ಲಿ ರಿಲೀಸ್ ಆದ 'ಎಕ್ಸ್‌ಕ್ಯೂಸ್ ಮೀ' ಸಿನಿಮಾಗೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡ ಎನ್.ಎಮ್ ಸುರೇಶ್ ಬಳಿಕ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕಳೆದ ಬಾರಿ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಆಗಿದ್ದ ಸುರೇಶ್ ಇದೀಗ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಅಂದಹಾಗೆ, ಈ ಬಾರಿಯ ಚುನಾವಣೆ ವಿಳಂಬವಾಗಿದೆ. ಅಂದುಕೊಂಡಂತೆ ಆಗಿದ್ದರೆ ಮೇ ತಿಂಗಳಲ್ಲೇ ಚುನಾವಣೆ ನಡೆದು ಫಲಿತಾಂಶ ಕೂಡ ಹೊರ ಬೀಳಬೇಕಿತ್ತು. ಆದರೆ ಈ ಬಾರಿ ತಡವಾಗಿದ್ದು, ಚುನಾವಣೆ ಸೆಪ್ಟಂಬರ್‌ನಲ್ಲಿ ನಡೆಯುತ್ತಿದೆ.
ಇನ್ನು ಕಳೆದ ಬಾರಿ 2022ರಲ್ಲಿ ನಡೆದ ಚುನಾವಣೆಯಲ್ಲಿ ಭಾ.ಮ. ಹರೀಶ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅವರ ಅಧಿಕಾರದ ಅವಧಿ 2023ರ ಮೇ 28ಕ್ಕೆ ಅಂತ್ಯವಾಗಿದೆ. ಹಾಗಿದ್ದರೂ ಕೂಡ ಚುನಾವಣೆ ನಡೆಸಿರಲಿಲ್ಲ. ಇದೀಗ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಎಮ್.ಎನ್ ಸುರೇಶ್ ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಗೆದ್ದು, ಯಾರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಭಾ.ಮಾ ಹರೀಶ್ಗೆ ಒಲಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನ