ಬೆಂಗಳೂರು: ಕನ್ನಡ ಚಿತ್ರರಂಗದ ಐಕಾನ್ ಹಾಗೂ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಎಂದು ಕರೆಸಿಕೊಂಡಿರುವ ಏಕೈಕ ನಟ ಡಾ.ರಾಜ್ಕುಮಾರ್. ಚಿಕ್ಕವರು ಇರಲಿ, ದೊಡ್ಡವರು ಇರಲಿ ಎಲ್ಲರನ್ನು ತುಂಬಾ ಗೌರವದಿಂದ ಕಾಣುತ್ತಿದ್ದವರು. ಇದರ ಜೊತೆಗೆ ಸಿನಿಮಾಗಳ ಮೂಲಕ ಸಮಾಜದ ಬದಲಾವಣೆಗೆ ಸಾಕ್ಷಿಯಾದವರು. ಈ ಸರಸ್ವತಿ ಪುತ್ರ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.
ಡಾ.ರಾಜ್ ಕುಮಾರ್ ಅಭಿನಯಿಸಿರೋ ಒಂದಕ್ಕಿಂತ ಒಂದು ಸಿನಿಮಾಗಳು ಸೂಪರ್ ಹಿಟ್. ಅಣ್ಣಾವ್ರು ನಟನೆಯ ಪ್ರತಿ ಸಿನಿಮಾದಲ್ಲಿಯೂ ಸಮಾಜಕ್ಕೊಂದು ಉತ್ತಮ ಸಂದೇಶ ಇದ್ದೇ ಇರುತ್ತಿತ್ತು. ಆ ಕಾರಣಕ್ಕಾಗಿ ಡಾ.ರಾಜ್ಕುಮಾರ್ ಇವತ್ತಿಗೂ ಕನ್ನಡಿಗರ ಪಾಲಿಗೆ ಆದರ್ಶ ವ್ಯಕ್ತಿ ಆಗಿದ್ದಾರೆ. ಯಾಕೆಂದರೆ ಡಾ ರಾಜ್ ನಟಿಸಿರೋ ಸಿನಿಮಾಗಳಲ್ಲಿ ತಂದೆ, ತಾಯಿ ಸಂಬಂಧ, ಅಣ್ಣ ತಂಗಿ ಬಾಂಧವ್ಯ, ಸಮಾಜಕ್ಕೆ ಸಂದೇಶ ಇರುವ ಚಿತ್ರಗಳನ್ನ ಮಾಡಿರೋದು ಹೆಚ್ಚು. ಅಷ್ಟು ಮೌಲ್ಯಯುತವಾದ ಸಿನಿಮಾಗಳನ್ನ ಕರುನಾಡಿಗೆ ನೀಡಿದ್ದಾರೆ. ಆ ಪೈಕಿ ಬಂಗಾರದ ಮನುಷ್ಯ ಸಿನಿಮಾವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಭಾರತೀಯ ಚಿತ್ರರಂಗದ ಬೆಸ್ಟ್ ಸಿನಿಮಾಗಲ್ಲಿ ಡಾ.ರಾಜ್ ಕುಮಾರ್ ಅಭಿನಯಿಸಿದ ಎವರ್ ಗ್ರೀನ್ ಸಿನಿಮಾ ಬಂಗಾರದ ಮನುಷ್ಯ ಚಿತ್ರಕೂಡ ಒಂದು. ಈ ಸಿನಿಮಾ ತೆರೆಕಂಡು ಇಂದಿಗೆ 50 ವರ್ಷ ಪೂರೈಸಿದೆ. 1972 ಮಾರ್ಚ್ 31ರಂದು ಬಂಗಾರ ಮನುಷ್ಯ ಬಿಡುಗಡೆ ಆಗಿತ್ತು. ಐದು ದಶಕಗಳನ್ನ ಪೂರೈಯಿಸಿರುವ ಸಿನಿಮಾದ ಚಾರ್ಮ್ ಮಾತ್ರ ಕಡಿಮೆ ಆಗಿಲ್ಲ. ಇವತ್ತಿಗೂ ಕನ್ನಡ ಸಿನಿಮಾ ಪ್ರಿಯರಲ್ಲಿ ಬಂಗಾರದ ಮನುಷ್ಯ ಅಚ್ಚಳಿಯದೇ ಉಳಿದಿದೆ.
ಇನ್ನು ಅಂದಿನ ಪ್ರಖ್ಯಾತ ನಿರ್ದೇಶಕ ಎಸ್.ಸಿದ್ದಲಿಂಗಯ್ಯ ಬಂಗಾರದ ಮನುಷ್ಯ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಮೂಲಕ ನಿರ್ದೇಶಕ ಸಿದ್ದಲಿಂಗಯ್ಯ ಕನ್ನಡ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಟಿ.ಕೆ.ರಾಮ ರಾವ್ ಬರೆದ ಬಂಗಾರದ ಮನುಷ್ಯ ಕಾದಂಬರಿ ಆಧರಿಸಿ ಬಂದ ಈ ಸಿನಿಮಾ ಆ ಕಾಲದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದು, ಸುಳ್ಳಲ್ಲ. ಡಾ ರಾಜ್ ಕುಮಾರ್, ಭಾರತಿ, ಬಾಲಕೃಷ್ಣ, ಎಂ ಪಿ ಶಂಕರ್, ಲೋಕನಾಥ್, ದ್ವಾರಕೀಶ್, ವಜ್ರಮುನಿ, ಶ್ರೀನಾಥ್ ಹೀಗೆ ದೊಡ್ಡ ತಾರಬಳಗ ಈ ಚಿತ್ರದಲ್ಲಿತ್ತು.
ಬಂಗಾರ ಮನುಷ್ಯ ಸಿನಿಮಾ ಬಿಡುಗಡೆ ಆದ ಸಮಯದಲ್ಲಿ ಚಿತ್ರ ನೋಡಿದ ಸಾಕಷ್ಟು ಯುವಕರು, ನಗರವನ್ನು ಬಿಟ್ಟು ತಮ್ಮ ಹಳ್ಳಿಗಳಿಗೆ ಬಂದು ಕೃಷಿಯನ್ನ ಮಾಡುವ ಹಾಗೇ ಪ್ರಭಾವ ಬೀರಿತ್ತು. ಇನ್ನು ಈ ಚಿತ್ರದ ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..ಹಾಡನ್ನು ಕೇಳಿದರೆ ಎಂಥವರಿಗಾದರೂ ಸ್ಫೂರ್ತಿ ಉಕ್ಕಿ, ಮನದಲ್ಲಿ ಜೀವನೋತ್ಸಾವ ತುಂಬುತ್ತದೆ.
ಕನ್ನಡ ಚಿತ್ರರಂಗದಲ್ಲಿ ಈವರೆಗೂ ಈ ಹಾಡಿನ ತೂಕ ಕಡಿಮೆ ಆಗಿಲ್ಲ. ಬಂಗಾರದ ಮನುಷ್ಯ ಚಿತ್ರಕ್ಕೆ ಜಿ.ಕೆ. ವೆಂಕಟೇಶ್ ಸಂಗೀತ ನೀಡಿದರು. ಚಿತ್ರದ ಎಲ್ಲ ಹಾಡುಗಳಿಗೆ ಪಿ.ಬಿ.ಶ್ರೀನಿವಾಸ್, ಪಿ. ಸುಶೀಲ ಹಾಡಿದ್ದರು. ನಗು ನಗುತಾ ನಲಿ, ಬಾಳ ಬಂಗಾರ ನೀನು.. ಹೀಗೆ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದವು.
ಇನ್ನು ಆ ಕಾಲದಲ್ಲಿ ಬಂಗಾರದ ಮನುಷ್ಯ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನ ಮಾಡಿದೆ. ಆ ಕಾಲಕ್ಕೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಎಂಬ ಖ್ಯಾತಿಯನ್ನು ಬಂಗಾರದ ಮನುಷ್ಯ ಪಡೆದುಕೊಂಡಿತು. ಇನ್ನು 1988ರಲ್ಲಿ ಮರು ಬಿಡುಗಡೆ ಆದಾಗಲೂ ಈ ಚಿತ್ರ ಬರೋಬ್ಬರಿ 25 ವಾರಗಳ ಕಾಲ ಪ್ರದರ್ಶನ ಕಂಡಿತು. ಹಾಗೇ ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಸತತ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡ ಮೊಟ್ಟ ಮೊದಲ ಸಿನಿಮಾ ಇದು.
ಇನ್ನು ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ 60 ವಾರಗಳ ಕಾಲ ಪ್ರದರ್ಶನ ಕಂಡಿತು. ಸಾಕಷ್ಟು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಒಂದು ವರ್ಷ ಕಾಲ ಯಶಸ್ವಿಯಾಗಿ ಪ್ರದರ್ಶನವಾಯಿತು. ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸಿದರು. ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುವಲ್ಲಿಯೂ ಚಿತ್ರ ಮೈಲಿಗಲ್ಲು ಸ್ಥಾಪಿಸಿತು.
ಹೀಗೆ ಹಲವಾರು ದಾಖಲೆಗಳನ್ನು ಬರೆದ ಬಂಗಾರದ ಮನುಷ್ಯ ಸಿನಿಮಾ ಬಿಡುಗಡೆ ಆಗಿ ಇಂದಿಗೆ ಸರಿಯಾಗಿ 50 ವರ್ಷ ಪೂರೈಸಿದೆ. ಇವತ್ತಿಗೂ ಟಿವಿಯಲ್ಲಿ ಬಂಗಾರದ ಮನುಷ್ಯ ಸಿನಿಮಾ ಪ್ರಸಾರವಾದರೆ ಕುಟುಂಬ ಸಮೇತರಾಗಿ ಪ್ರೇಕ್ಷಕರು ಇದ್ದಾರೆ ಅನ್ನೋದು ವಿಶೇಷ.
ಇದನ್ನೂ ಓದಿ: 'ಹೋಂ ಮಿನಿಸ್ಟರ್' ಚಿತ್ರಕ್ಕಾಗಿ ರಿಯಲ್ ಸ್ಟಾರ್ ಮಾಡಿದ್ದೇನು ಗೊತ್ತೇ? ನೋಡಿ