ಸ್ಯಾಂಡಲ್ವುಡ್ನಲ್ಲಿ ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ಸ್ಟೋರಿ ಅಂತಹ ಅದ್ಭುತ ಪ್ರೇಮಕಥೆಯುಳ್ಳ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಶಶಾಂಕ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ತಾಯಿಗೆ ತಕ್ಕ ಮಗ ಸಿನಿಮಾ ಬಳಿಕ ಸ್ವಲ್ಪ ಗ್ಯಾಪ್ ತಗೆದುಕೊಂಡಿದ್ದ ನಿರ್ದೇಶಕ ಶಶಾಂಕ್, ಈಗ ಹೊಸ ಪ್ರತಿಭೆಗಳ ಜೊತೆ ಕ್ಯೂಟ್ ಲವ್ ಸ್ಟೋರಿ ಹೇಳೋದಿಕ್ಕೆ ಬರ್ತಾ ಇದ್ದಾರೆ. ಈ ಚಿತ್ರಕ್ಕೆ ಲವ್ 360 ಅಂತಾ ಟೈಟಲ್ ಇಟ್ಟಿದ್ದು, ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಕೂಡ ಬಿಡುಗಡೆ ಮಾಡಲಾಗಿತ್ತು.
![Director Shashank has come back with new talents](https://etvbharatimages.akamaized.net/etvbharat/prod-images/kn-bng-02-hosabhara-lovestory-jothiege-bandha-director-shashank-7204735_10052022190354_1005f_1652189634_511.jpg)
ಮೂರು ವರ್ಷಗಳ ಬಳಿಕ ಮತ್ತೆ ಡೈರೆಕ್ಷನ್.. ತಮ್ಮ ಸಿನಿಮಾ ಕುರಿತು ಮೊದಲಿಗೆ ಮಾತಿಗಳಿದ ನಿರ್ದೇಶಕ ಶಶಾಂಕ್, "ತಾಯಿಗೆ ತಕ್ಕ ಮಗ" ಚಿತ್ರದ ನಂತರ ಮೂರು ವರ್ಷಗಳ ಬಳಿಕ ನಾನು ನಿರ್ದೇಶಿಸಿರುವ ಚಿತ್ರವಿದು. ಲಾಕ್ಡೌನ್ ಸಮಯದಲ್ಲಿ ಸಿದ್ಧವಾಗಿದೆ. ನಾನು ಉಪೇಂದ್ರ ಅವರ ಚಿತ್ರ ನಿರ್ದೇಶಿಸಬೇಕಿತ್ತು. ಅದು ದೊಡ್ಡಮಟ್ಟದ ಚಿತ್ರ. ಚಿತ್ರೀಕರಣಕ್ಕೆ ಕೊರೊನಾ ನಿಯಮಾವಳಿಗಳು ಸಹಕಾರಿಯಾಗುವಂತೆ ಕಾಣಲಿಲ್ಲ. ಹಾಗಾಗಿ ಆ ಚಿತ್ರ ಮುಂದೂಡಿ, ಈ ಚಿತ್ರವನ್ನು ಆರಂಭಿಸಿದೆ. ಅದರಲ್ಲೂ ಹೊಸಬರೊಂದಿಗೆ ನಾನು ಕೆಲಸ ಮಾಡಿ ಸುಮಾರು ವರ್ಷಗಳೇ ಆಗಿತ್ತು.
ಈ ಚಿತ್ರದ ಮೂಲಕ ಪ್ರವೀಣ್ ಎಂಬ ನೂತನ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ಪ್ರವೀಣ್ ಸೇರಿದಂತೆ ಅವರ ಕುಟುಂಬದರೆಲ್ಲಾ ವೈದ್ಯರು. ಹೊಸಪೇಟೆ ಬಳಿಯ ಮರಿಯಮ್ಮನಹಳ್ಳಿಯಲ್ಲಿ ಇವರ ಆಸ್ಪತ್ರೆ ಇದೆ. ಸಾವಿರಾರು ಜನಕ್ಕೆ ಉಚಿತ ಚಿಕಿತ್ಸೆ ನೀಡಿ ಪ್ರವೀಣ್ ತಂದೆ ಆ ಊರಿನ ಸುತ್ತ ಹೆಸರುವಾಸಿಯಾಗಿದ್ದರು. ಎಂಬಿಬಿಎಸ್ ಓದಿರುವ ಪ್ರವೀಣ್ಗೆ ನಟನೆಯಲ್ಲಿ ಆಸಕ್ತಿ. ಈ ಕುರಿತು ಅವರ ತಾಯಿ ನನ್ನ ಬಳಿ ಹೇಳಿದ್ದರು. ನಿರ್ಮಾಣವನ್ನೂ ಮಾಡುವುದಾಗಿ ಹೇಳಿದ್ದರು. ಆದರೆ, ಅವರ ಬಳಿ ಈ ಚಿತ್ರಕ್ಕೆ ಬೇಕಾದಷ್ಟು ಹಣವಿಲ್ಲದ ಕಾರಣ ನಮ್ಮ ಸಂಸ್ಥೆ ಸಹ ನಿರ್ಮಾಣಕ್ಕೆ ಕೈ ಜೋಡಿಸಿತ್ತು.
![Director Shashank has come back with new talents](https://etvbharatimages.akamaized.net/etvbharat/prod-images/kn-bng-02-hosabhara-lovestory-jothiege-bandha-director-shashank-7204735_10052022190354_1005f_1652189634_754.jpg)
ಪ್ರವೀಣ್ಗೆ ನಟನೆಗೆ ಬೇಕಾದ ಎಲ್ಲ ತಯಾರಿ ನೀಡಲಾಗಿದೆ. ರಚನಾ ಇಂದರ್ ಈ ಚಿತ್ರದ ನಾಯಕಿ. ಗೋಪಾಲ್ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಭಿಷೇಕ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಿದ್ ಶ್ರೀರಾಮ್ ಹಾಗೂ ಸಂಚಿತ್ ಹೆಗಡೆ ಹಾಡಿರುವ ಹಾಡುಗಳು ಕೇಳುಗರ ಮನ ಗೆದ್ದಿದೆ ಅಂದರು.
ಡಾಕ್ಟರ್ ಆಗಬೇಕಿತ್ತು, ಈಗ ಆ್ಯಕ್ಟರ್ ಆಗಿದ್ದೀನಿ: ಈ ಚಿತ್ರದ ಮೂಲಕ, ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಯುವ ನಟ ಪ್ರವೀಣ್ ಮಾತನಾಡಿ ನಾನು ಎಂಬಿಬಿಎಸ್ ವಿದ್ಯಾರ್ಥಿಯಾಗಿದಾಗಿನಿಂದಲೂ ನಟನೆಯಲ್ಲಿ ಆಸಕ್ತಿ. ತಿಂಗಳಲ್ಲಿ ಮೂರು ದಿನ ಆದರ್ಶ ಫಿಲಂ ಸಂಸ್ಥೆಗೆ ಬಂದು ಅಭಿನಯ ಕಲಿಯುತ್ತಿದೆ. ಅಪ್ಪನಿಗೆ ವಿಷಯ ತಿಳಿದು ಬಯ್ಯುತ್ತಿದ್ದರು. ಈಗ ಅಪ್ಪ ಇಲ್ಲ. ಅಮ್ಮನ ಮುಂದೆ ನನ್ನ ಆಸೆ ಹೇಳಿಕೊಂಡೆ.
ಅಮ್ಮ ನನ್ನ ಆಸೆಗೆ ಆಸರೆಯಾದರು. ಆ ನಂತರ ಶಶಾಂಕ್ ಸರ್ ಪರಿಚಯವಾಯಿತು. ಶಶಾಂಕ್ ಅವರು ಸಾಕಷ್ಟು ವರ್ಕ್ ಶಾಪ್ ನಡೆಸಿ ನನಗೆ ಅಭಿನಯ ಕಲಿಸಿದರು. ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದೀನಿ. ಈ ಚಿತ್ರದಲ್ಲಿ ಬೋಟ್ ಮೆಕ್ಯಾನಿಕ್ ಪಾತ್ರ ಮಾಡಿದ್ದೀನಿ. ಡಾಕ್ಟರ್ ಆಗಬೇಕಿತ್ತು. ಈಗ ಆ್ಯಕ್ಟರ್ ಆಗಿದ್ದೀನಿ ಅಂದರು.
![Director Shashank has come back with new talents](https://etvbharatimages.akamaized.net/etvbharat/prod-images/kn-bng-02-hosabhara-lovestory-jothiege-bandha-director-shashank-7204735_10052022190354_1005f_1652189634_114.jpg)
ಲವ್ ಮಾಕ್ಟೇಲ್ ಸಿನಿಮಾ ನಂತರ, ಲವ್ 360 ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ರಚನಾ ಇಂದರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಆಡಿಷನ್ ಇದಾಗ ಅಮ್ಮ ಜಡೆ ಹಾಕಿ, ಜುಮಕಿ ಹಾಕಿಸಿಕೊಂಡು ಕರೆದುಕೊಂಡು ಹೋಗಿದ್ದರು. ನಾನು ಬೇಡ ಅಂದೆ. ಅಮ್ಮ ಇರಲಿ ಅಂದರು. ಶಶಾಂಕ್ ಅವರಿಗೆ ನಾನು ಹೋಗಿದ್ದ ರೀತಿ ಇಷ್ಟವಾಯಿತಂತೆ. ಆನಂತರ ನಾನು ಸೆಲೆಕ್ಟ್ ಆದೆ. ನಂತರ ನಿರ್ದೇಶಕರು ವರ್ಕ್ ಶಾಪ್ ಮೂಲಕ ಅಭಿನಯ ಹೇಳಿಕೊಟ್ಟರು. ಪಾತ್ರ ತುಂಬಾ ಚೆನ್ನಾಗಿದೆ ಅಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.
ಇದರ ಜೊತೆಗೆ ಗೋಪಾಲ್ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಹಾಗೂ ಕಾವ್ಯ ಶಾಸ್ತ್ರಿ ಸೇರಿದಂತೆ ಸಾಕಷ್ಟು ಜನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅಭಿಷೇಕ್ ಕಲ್ಲತ್ತಿ ಕ್ಯಾಮರಾ ಕೈಚಳಕವಿದ್ದು, ಮಾಸ್ ಮಾದ ಈ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ಧವಾಗಲಿದ್ದು, ಸೆನ್ಸಾರ್ ಮಂಡಳಿ ವೀಕ್ಷಿಸಿದ ನಂತರ ಬಿಡುಗಡೆಗೆ ಪ್ಲಾನ್ ಮಾಡಲಾಗಿದೆ.