ಸ್ಯಾಂಡಲ್ವುಡ್ನಲ್ಲಿ ಟೀಸರ್ ಮತ್ತು ಹಾಡುಗಳಿಂದಲೇ ಪ್ರೇಕ್ಷಕರ ಮನಗೆದ್ದಿರುವ ಹಾಗೂ ಗುಳ್ಟು ಸಿನಿಮಾ ಖ್ಯಾತಿಯ ನವೀನ್ ಶಂಕರ್ ಹಾಗೂ ಐಶಾನಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.
ಟೈಟಲ್ ಮೂಲಕವೇ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ 'ಧರಣಿ ಮಂಡಲ ಮಧ್ಯದೊಳಗೆ' ಶ್ರೀಧರ್ ಶಿಕಾರಿಪುರ ಅವರ ಕನಸಿನ ಮೊದಲ ಚಿತ್ರ. ಈ ಸಿನಿಮಾ ಮೂಲಕ ಶ್ರೀಧರ್ ಶಿಕಾರಿಪುರ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಅವರೊಂದಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಹೈಪರ್ ಲಿಂಕ್ ಶೈಲಿಯ ಕ್ರೈಂ, ಡ್ರಾಮಾ ಕಥಾಹಂದರ ಒಳಗೊಂಡ ಈ ಸಿನಿಮಾ, ಪ್ರೇಕ್ಷಕರಿಗೆ ಥ್ರಿಲ್ ನೀಡುವುದರ ಜೊತೆಗೆ ಪ್ರೀತಿ, ಸೆಂಟಿಮೆಂಟ್ ಎಳೆಗಳನ್ನು ಉಣಬಡಿಸಲಿದೆ.
ಇದನ್ನೂ ಓದಿ: ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಟೀಸರ್ ರಿಲೀಸ್.. ಬೋಲ್ಡ್ ಲುಕ್ನಲ್ಲಿ ಐಶಾನಿ ಶೆಟ್ಟಿ
ಬಾಕ್ಸಿಂಗ್ನಲ್ಲಿ ಆಸಕ್ತಿ ಇರುವ ಹುಡುಗನ ಸುತ್ತ ಹೆಣೆಯಲಾದ ಕಥೆ ಚಿತ್ರದಲ್ಲಿದೆ. ಬಾಕ್ಸಿಂಗ್ ಕನಸಿನ ಬೆನ್ನತ್ತಿದ ಹುಡುಗನ ಜೀವನದಲ್ಲಿ ನಡೆಯುವ ಘಟನೆ ಯಾವೆಲ್ಲಾ ತಿರುವು ಪಡೆಯುತ್ತದೆ ಅನ್ನೋದು ಚಿತ್ರದ ಒನ್ ಲೈನ್ ಕಹಾನಿ. ಚಿತ್ರದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಒಳಗೊಂಡಂತೆ ತಾರಾಗಣವಿದೆ.
ಇದನ್ನೂ ಓದಿ: ಖಡಕ್ ಪಾತ್ರದಲ್ಲಿ ಮಿಂಚು ಹರಿಸುತ್ತಿರುವ ಚಂದನವನದ ಮುದ್ದು ಮುಖದ ಹುಡುಗಿ ಐಶಾನಿ ಶೆಟ್ಟಿ
ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ನಡಿ ಓಂಕಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ವೀರೇಂದ್ರ ಕಾಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಪಕರಾಗಿದ್ದಾರೆ. ಕೀರ್ತನ್ ಪೂಜಾರಿ ಕ್ಯಾಮರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ. ವಿಜಯ್ ಪ್ರಕಾಶ್, ಶರಣ್ ಹಾಡಿರುವ ಹಾಡುಗಳು ಸೂಪರ್ ಹಿಟ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಡಿಸೆಂಬರ್ 2ರಂದು ಪ್ರೇಕ್ಷಕರ ಮನಗೆಲ್ಲಲು ಚಿತ್ರಮಂದಿರಕ್ಕೆ 'ಧರಣಿ ಮಂಡಲ ಮಧ್ಯದೊಳಗೆ' ಎಂಟ್ರಿ ಕೊಡುತ್ತಿದೆ.
ಇದನ್ನೂ ಓದಿ: 'ಧರಣಿ ಮಂಡಲ ಮಧ್ಯದೊಳಗೆ'..1983ರ ಚಿತ್ರದ ಹೆಸರಿನಲ್ಲಿ ಹೊಸ ಕಥೆ