ಬೆಂಗಳೂರು: ಕ್ರೆಡಿಟ್ ಕಾರ್ಡ್ ಮರುಪಾವತಿ ವಿಳಂಬವಾಗಿದ್ದಕ್ಕೆ, ಏಜೆಂಟ್ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಸ್ಯಾಂಡಲ್ ವುಡ್ ಸಹನಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಶುಭಂ ಶರ್ಮಾ ಪೊಲೀಸರ ಮೊರೆ ಹೋಗಿರುವ ನಟ. ಸಿನಿಮಾ ಹಾಗೂ ಕಿರುತೆರೆಯ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿರುವ ಶುಭಂ ಶರ್ಮಾ, ಹಲವು ವರ್ಷಗಳಿಂದ ಖಾಸಗಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರು.
![ಸಹ ನಟ ಶುಭಂ ಶರ್ಮಾ](https://etvbharatimages.akamaized.net/etvbharat/prod-images/15453053_bin.jpg)
ಸರಿಯಾದ ಟೈಮ್ನಲ್ಲಿ ಹಣವನ್ನು ಪಾವತಿ ಕೂಡ ಮಾಡಿದ್ದರಂತೆ. ಅದರೆ ಕೊರೊನಾ ಸಂದರ್ಭದಲ್ಲಿ ಫಿಲ್ಮ್ ಇಂಡಸ್ಟ್ರಿ ಕೂಡ ಸಂಪೂರ್ಣ ಬಂದ್ ಆಗಿದ್ದರಿಂದ ಎರಡು ಲಕ್ಷ ಹಣವನ್ನು ಸರಿಯಾದ ಸಂದರ್ಭದಲ್ಲಿ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಬ್ಯಾಂಕ್ ಅಧಿಕಾರಿಗಳನ್ನು ಭೇಟಿಯಾಗಿ ಹಣ ಪಾವತಿಗೆ ಕಾಲಾವಕಾಶವನ್ನ ಸಹ ಶುಭಂ ಪಡೆದಿದ್ದರಂತೆ. ಆದರೆ ಕ್ರೆಡಿಟ್ ಕಾರ್ಡ್ ರಿಕವರಿ ಏಜೆಂಟ್ ಕಿರಣ್ ಹಿಲ್ಲೂರ್ ಎಂಬಾತ ಪದೇ ಪದೇ ಮನೆಗೆ ಬಂದು ಪೂರ್ತಿ ಹಣ ನೀಡುವಂತೆ ಕಿರುಕುಳ ನೀಡ್ತಿದ್ದಾನೆ ಎಂದು ಶುಭಂ ಆರೋಪಿಸಿದ್ದಾರೆ.
![ಸಹ ನಟ ಶುಭಂ ಶರ್ಮಾ](https://etvbharatimages.akamaized.net/etvbharat/prod-images/kn-bng-03-credit-card-case-kac10035_02062022142752_0206f_1654160272_754.jpg)
ಆರ್ಬಿಐನ ದೂರು ಪ್ರಾಧಿಕಾರಕ್ಕೆ ಸಹ ಶುಭಂ ದೂರು ನೀಡಿದ್ದು, 'ಗ್ರಾಹಕನ ಮನೆಗೆ ಹೋಗಿ ತೊಂದರೆ ಕೊಡಬಾರದು, ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನ ಮಾಡಬೇಕು' ಎಂದು ದೂರು ಪ್ರಾಧಿಕಾರ ಸೂಚಿಸಿದೆ. ಆದರೂ ಸಹ ರಿಕವರಿ ಏಜೆಂಟ್ ಕಿರಣ್ ಹಿಲ್ಲೂರ್ ನಟ ಮನೆಯಲ್ಲಿರದಿದ್ದಾಗ ಸುಬ್ರಹ್ಮಣ್ಯಪುರದಲ್ಲಿರುವ ಅವರ ಅಪಾರ್ಟ್ಮೆಂಟಿಗೆ ನುಗ್ಗಿ ಅವರ ತಾಯಿ ಹಾಗೂ ಅತ್ತಿಗೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
![ಸಹ ನಟ ಶುಭಂ ಶರ್ಮಾ](https://etvbharatimages.akamaized.net/etvbharat/prod-images/kn-bng-03-credit-card-case-kac10035_02062022142752_0206f_1654160272_887.jpg)
ಇದನ್ನೂ ಓದಿ: ಹಿಜಾಬ್ ವಿವಾದ.. 16 ವಿದ್ಯಾರ್ಥಿನಿಯರಿಗೆ ಕಾಲೇಜ್ ಪ್ರವೇಶ ನಿರಾಕರಣೆ, 6 ವಿದ್ಯಾರ್ಥಿನಿಯರು ಅಮಾನತು!