ಶಿವಮೊಗ್ಗ : ದಸರಾ ಹಬ್ಬದ ಹಿನ್ನೆಲೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ದಸರಾ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಕಾಫಿನಾಡು ಚಂದು ಚಾಲನೆ ನೀಡಿದರು. ನಗರದ ಗೋಪಿ ವೃತ್ತದಿಂದ ಪ್ರಾರಂಭವಾದ ನಡಿಗೆ ಫ್ರೀಡಂ ಪಾರ್ಕ್ವರೆಗೆ ಸಾಗಿತು. ಸ್ವಾತಂತ್ರ್ಯ ನಡಿಗೆಯಲ್ಲಿ ವಿವಿಧ ವೇಷಭೂಷಣಗಳಲ್ಲಿ ಮಹಿಳೆಯರು ಮಿಂಚುತ್ತಿದ್ದರು. ಇನ್ನೂ ಡೊಳ್ಳು ಕುಣಿತಕ್ಕೆ ಮಹಿಳೆಯರು ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಕಾಫಿನಾಡು ಚಂದು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದ ಘಟನೆಯೂ ನಡೆಯಿತು.
ನಂತರ ನಗರದ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ಹಾಗೂ ಅಭಿಮಾನಿಗಳನ್ನು ರಂಜಿಸಿದರು. ನಂತರ ತಾವೇ ಬರೆದು ಹಾಡಿರುವ ಹಾಡಿಗೆ ಸಖತ್ ಸ್ಟೆಪ್ ಹಾಕಿದರು. ಈ ವೇಳೆ, ನೂರಾರು ಸಂಖ್ಯೆಯಲ್ಲಿ ಸೇರಿದ್ದ ಯುವಕರು ಸಿಳ್ಳೆ ಹೊಡೆದು ಪ್ರೋತ್ಸಾಹಿಸಿದರು.
ಸೆಲ್ಫಿಗಾಗಿ ಕಾರಿಗೆ ಮುತ್ತಿಗೆ: ಕಾಫಿನಾಡು ಚಂದು ಜೊತೆ ಸೆಲ್ಫಿಗೆ ಮುಗಿಬಿದ್ದ ಜನರನ್ನು ಪೊಲೀಸರು ನಿಯಂತ್ರಿಸಿದರೂ ನಿಲ್ಲದ ಜನರು ಬಳಿಕ ಅವರ ಕಾರಿನ ಬಳಿ ಮುಗಿಬಿದ್ದರು. ನಂತರ ಪೊಲೀಸರು ಹಾಗೂ ಸಂಘಟಕರು ಸೇರಿ ಕಾಫಿ ನಾಡು ಚಂದು ಅವರನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟರು. ಒಟ್ಟಾರೆ ಕಾಫಿನಾಡು ಚಂದು ಅವರ ಡ್ಯಾನ್ಸ್, ಡೈಲಾಗ್, ಹಾಡಿಗೆ ಅಲ್ಲಿ ಸೇರಿದ್ದ ಸಾವಿರಾರು ಜನರು ಸಖತ್ ಎಂಜಾಯ್ ಮಾಡಿದರು.
ಇದನ್ನೂ ಓದಿ: ಮಹಿಳಾ ದಸರಾ ಸ್ವಾತಂತ್ರ್ಯ ನಡಿಗೆಗೆ ಚಾಲನೆ ನೀಡಿದ ಕಾಫಿನಾಡು ಚಂದು