ಹಾಲಿವುಡ್ ನಟ ಮಾರ್ಕ್ ಮಾರ್ಗೋಲಿಸ್ ಅವರು ವಯೋಸಹಜ ಕಾಯಿಲೆಯಿಂದ ಗುರುವಾರ ನ್ಯೂಯಾರ್ಕ್ ನಗರದ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ನಟ 'ಬ್ರೇಕಿಂಗ್ ಬ್ಯಾಡ್' ಮತ್ತು 'ಬೆಟರ್ ಕಾಲ್ ಸಾಲ್' ಶೋನ ಹೆಕ್ಟರ್ ಸಲಾಮಾಂಕಾ ಪಾತ್ರಕ್ಕೆ ಹೆಸರು ವಾಸಿಯಾಗಿದ್ದಾರೆ. ಮಾರ್ಕ್ ಮಾರ್ಗೋಲಿಸ್ ನಿಧನದ ಸುದ್ದಿಯನ್ನು ಅವರ ಮಗ ಮಾರ್ಗನ್ ಮಾರ್ಗೋಲಿಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಾರ್ಕ್ ಮಾರ್ಗೋಲಿಸ್ ಫೇಮಸ್ ನಟ: ಹಾಲಿವುಡ್ ಚಿತ್ರರಂಗಕ್ಕೆ ಮಾರ್ಕ್ ಮಾರ್ಗೋಲಿಸ್ ಕೊಡುಗೆ ಅಪಾರ. ಸಾಕಷ್ಟು ಅದ್ಭುತ ಚಿತ್ರಗಳನ್ನು ನೀಡಿದ್ದಾರೆ. 2012 ರಲ್ಲಿ ಅವರು 'ಬ್ರೇಕಿಂಗ್ ಬ್ಯಾಡ್' ಚಿತ್ರಕ್ಕಾಗಿ ಎಮ್ಮಿಗೆ ನಾಮ ನಿರ್ದೇಶನಗೊಂಡಿದ್ದರು. ಮಾರ್ಕ್ ಮಾರ್ಗೋಲಿಸ್ ಅವರು 1939 ರಲ್ಲಿ ಫಿಲಡೆಲ್ಫಿಯಾದಲ್ಲಿ ಜನಿಸಿದರು. ನಟನೆಯಲ್ಲಿ ಮುಂದುವರೆಯಲು ಆಸಕ್ತಿ ಹೊಂದಿದ್ದ ಅವರು, ಚಿಕ್ಕ ವಯಸ್ಸಿನಲ್ಲಿಯೇ ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿದರು.
ಮೊದಲಿಗೆ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 'ಇನ್ಫಿಡೆಲ್ ಸೀಸರ್'ನಂತಹ ಮ್ಯೂಸಿಕಲ್ಸ್ನಲ್ಲಿ ಪಾತ್ರಗಳನ್ನು ಪಡೆದರು. ಬಳಿಕ 'ಅಂಕಲ್ ಸ್ಯಾಮ್' ಮತ್ತು 'ದಿ ಗೊಲೆಮ್' ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಆಫ್ ಬ್ರಾಡ್ವೇ ನಿರ್ಮಾಣಗಳಲ್ಲಿ ಕಾಣಿಸಿಕೊಂಡರು. 'ಬ್ರೇಕಿಂಗ್ ಬ್ಯಾಡ್' ಮತ್ತು 'ಬೆಟರ್ ಕಾಲ್ ಸಾಲ್' ಶೋಗಾಗಿ ಮಾರ್ಕ್ ಮಾರ್ಗೋಲಿಸ್ ಹೆಚ್ಚು ಫೇಮಸ್ ಆಗಿದ್ದಾರೆ.
ಇದನ್ನೂ ಓದಿ: Singer Surinder Shinda: ಜನಪ್ರಿಯ ಪಂಜಾಬಿ ಗಾಯಕ ಸುರಿಂದರ್ ಶಿಂದಾ ಇನ್ನಿಲ್ಲ
ಬ್ರಿಯಾನ್ ಕಾನ್ಸ್ಟನ್ ಸಂತಾಪ: 'ಬ್ರೇಕಿಂಗ್ ಬ್ಯಾಡ್' ಚಿತ್ರದ ಪ್ರಮುಖ ನಟ ಬ್ರಿಯಾನ್ ಕಾನ್ಸ್ಟನ್ ಅವರು ಮಾರ್ಕ್ ಮಾರ್ಗೋಲಿಸ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇನ್ಸ್ಟಾದಲ್ಲಿ ಫೋಟೋ ಹಂಚಿಕೊಂಡಿರುವ ಅವರು, "ಗೆಳೆಯನ ಅಗಲಿಕೆಯ ಸುದ್ದಿ ತಿಳಿದು ಬಹಳ ನೋವಾಗಿದೆ. ಮಾರ್ಕ್ ಮಾರ್ಗೋಲಿಸ್ ಒಬ್ಬ ಅದ್ಭುತ ನಟ ಹಾಗೂ ತುಂಬಾ ಒಳ್ಳೆಯ ಮನುಷ್ಯ. ಬ್ರೇಕಿಂಗ್ ಬ್ಯಾಡ್ ಮತ್ತು ಯುವರ್ ಓನರ್ ಸೆಟ್ನಲ್ಲಿ ಅವನು ಮಾಡುತ್ತಿದ್ದ ಮೋಜು, ಹಾಸ್ಯ ತುಂಬಾ ಚೆನ್ನಾಗಿತ್ತು. ಹಾಸ್ಯದ ಮೂಲಕ ಇತರರಿಗೆ ನಗುವನ್ನು ಉಣಬಡಿಸುತ್ತಿದ್ದನು. ನಾನು ಈಗಾಗಲೇ ಅವನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ." ಎಂದು ಬರೆದುಕೊಂಡಿದ್ದಾರೆ.
ಮಾರ್ಕ್ ಮಾರ್ಗೋಲಿಸ್ 'ಬ್ರೇಕಿಂಗ್ ಬ್ಯಾಡ್' ಮತ್ತು 'ಬೆಟರ್ ಕಾಲ್ ಸಾಲ್' ಮಾತ್ರವಲ್ಲದೇ, 'ದಿ ಈಕ್ವಲೈಜರ್', 'ಓಜ್', 'ಕಿಂಗ್ಸ್' ಮತ್ತು 'ಅಮೆರಿಕನ್ ಹಾರರ್ ಸ್ಟೋರಿ: ಅಸಿಲಮ್' ಸೇರಿದಂತೆ ಅನೇಕ ದೂರದರ್ಶನ ಸರಣಿಗಳಲ್ಲಿ (ಧಾರಾವಾಹಿ) ಅಭಿನಯಿಸಿದ್ದಾರೆ. ಜೊತೆಗೆ 'ಕ್ಯಾಪಿಫೋರ್ನಿಕೇಷನ್', 'ಗೋಥಮ್', 'ಕ್ರಾಸಿಂಗ್ ಜೋರ್ಡಾನ್' ಮತ್ತು 'ದಿ ಅಫೇರ್'ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ಜೊತೆ ನಟಿಸಿದ್ದ ಹಾಸ್ಯ ನಟ ಬೀದಿಯಲ್ಲಿ ಶವವಾಗಿ ಪತ್ತೆ!