ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್, ನಟಿ ಆಲಿಯಾ ಭಟ್ ಮೊದಲ ಬಾರಿಗೆ ಜೊತೆಯಾಗಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆ ಆಗಲಿದೆ. ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದ್ದು, ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರ ಕಾರ್ಯಕ್ರಮಗಳು ದೇಶದ ಪ್ರಮುಖ ನಗರಗಳಲ್ಲಿ ಜೋರಾಗಿ ನಡೆಯುತ್ತಿವೆ.
ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ನಿನ್ನೆ (ಸೆ.2) ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ನಿಗದಿಯಾಗಿತ್ತು. ಆರ್ಆರ್ಆರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಮುಖ್ಯ ಅಥಿತಿಯಾಗಿ ಬರುವವರಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ಕ್ಯಾನ್ಸಲ್ ಆಗಿ ಅಭಿಮಾನಿಗಳು ಹಿಂತಿರುಗುವಂತಾಯಿತು.
ಬಳಿಕ ನಟ ಜೂನಿಯರ್ ಎನ್‌ಟಿಆರ್, ನಟಿ ಆಲಿಯಾ ಭಟ್, ನಟ ರಣ್ಬೀರ್ ಕಪೂರ್, ನಟ ನಾಗಾರ್ಜುನ್, ನಟಿ ಮೌನಿರಾಯ್, ನಿರ್ದೇಶಕ ರಾಜಮೌಳಿ, ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಚಿತ್ರತಂಡ Park Hyatt ಹೋಟೆಲ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಕಾರ್ಯಕ್ರಮ ರದ್ದಾಗಿದ್ದರ ಬಗ್ಗೆ ಮತ್ತು ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.
ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ಕ್ಯಾನ್ಸಲ್: ನಿನ್ನೆ ಸಂಜೆ ನಡೆಯಬೇಕಿದ್ದ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ರದ್ದು ಆಗಿರುವ ಬಗ್ಗೆ ನಟ ಜೂನಿಯರ್ ಎನ್‌ಟಿಆರ್ ಮಾತನಾಡಿ, ಹೆಚ್ಚಿನ ಭದ್ರತಾ ವ್ಯವಸ್ಥೆ ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿತು. ಗಣೇಶೋತ್ಸವ, ಗಣೇಶ ನಿಮಜ್ಜನ, ರಾಜಕೀಯ ಕಾರ್ಯಕ್ರಮವೊಂದರ ಸಲುವಾಗಿ ಭದ್ರತೆಗೆ ಪೊಲೀಸರು ನಿಯೋಜನೆಗೊಂಡಿದ್ದರು. ಹಾಗಾಗಿ ನಮಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಪೂರೈಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ನಾವು ಅವರಿಗೆ ಸಹಕಾರ ನೀಡಿದ್ದೇವೆ. ಈ ಹಿನ್ನೆಲೆ ಈ ಸಣ್ಣ ವೇದಿಕೆಯಿಂದ ನಿಮ್ಮೊಂದಿಗೆ ಮಾತನಾಡುತ್ತಿದ್ದೇವೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರೋದ್ಯಮ ಒತ್ತಡದಲ್ಲಿದೆ. ಅನೇಕ ಸವಾಲುಗಳೂ ಇವೆ. ಪ್ರೇಕ್ಷಕರು ಹೊಸದನ್ನು ಬಯಸುತ್ತಾರೆ. ಒತ್ತಡದಲ್ಲಿಯೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆಂದು ನಾನು ನಂಬಿದ್ದೇನೆ. ಒಳ್ಳೆಯ ಕಥೆಗಳನ್ನು ಪ್ರೇಕ್ಷಕರಿಗೆ ನೀಡಲು ಪ್ರಯತ್ನಿಸೋಣ. ಇನ್ನಷ್ಟು ಉತ್ತಮ ಚಿತ್ರಗಳನ್ನು ಮಾಡೋಣ' ಎಂದು ಹೇಳಿದರು.
ಇದನ್ನೂ ಓದಿ: ಸೋನಾಲಿ ಫೋಗಟ್ ಕೊಲೆ ಪ್ರಕರಣ: ಹರಿಯಾಣದಲ್ಲಿ 3 ಡೈರಿ ವಶಕ್ಕೆ ಪಡೆದ ಗೋವಾ ಪೊಲೀಸ್
ತೆಲುಗಿನಲ್ಲಿ ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿರುವ ನಿರ್ದೇಶಕ ರಾಜಮೌಳಿ ಮಾತನಾಡಿ, ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಮಾಡಿದ್ದರು. ತಂಡವು ತುಂಬಾ ಶ್ರಮಿಸಿತ್ತು. ಆದರೆ ಅದು ಅಂದುಕೊಂಡಂತೆ ಆಗಲಿಲ್ಲ. ಕರಣ್ ಜೋಹರ್ ಸರಿಯಾಗಿ ಗಣೇಶ ಪೂಜೆ ಮಾಡುತ್ತಿಲ್ಲ, ಹಾಗಾಗಿ ಹೀಗಾಯಿತೇನೋ ಎಂದು ಹಾಸ್ಯಚಟಾಕಿ ಹಾರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ಮೂರ್ತಿ ನಿಮಜ್ಜನ ನಡೆಯುತ್ತಿರುವುದರಿಂದ ಪೊಲೀಸ್ ವ್ಯವಸ್ಥೆ ಸಿಗಲಿಲ್ಲ. ಸಿನಿಮಾದಲ್ಲಿ ರಣಬೀರ್ ಅದ್ಭುತ ಶಕ್ತಿ ಹೊಂದಿರುತ್ತಾರೆ. ಅದರ ಪ್ರಕಾರ ಎನ್‌ಟಿಆರ್ ಸಮಾರಂಭದಲ್ಲಿ ಪಾಲ್ಗೊಂಡರೆ ಅದು ಗ್ರ್ಯಾಂಡ್ ಈವೆಂಟ್ ಆಗುತ್ತದೆ ಎಂದು ನಾವು ಯೋಜಿಸಿದ್ದೆವು ಎಂದು ತಿಳಿಸಿದರು.
ಇದನ್ನೂ ಓದಿ: ರಾಮೋಜಿ ಫಿಲಂ ಸಿಟಿಯಲ್ಲಿ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್.. ಜೂ. ಎನ್‌ಟಿಆರ್ ಮುಖ್ಯ ಅಥಿತಿ
'ಬ್ರಹ್ಮಾಸ್ತ್ರ ಭಾಗ 1 ಶಿವ' ಭಾರತೀಯ ಪುರಾಣಗಳಲ್ಲಿ ಆಳವಾಗಿ ಬೇರೂರಿರುವ ಪರಿಕಲ್ಪನೆಗಳು, ಕಥೆಗಳಿಂದ ಸ್ಫೂರ್ತಿ ಪಡೆದ ಸಿನಿಮಾ. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರವನ್ನು ಎಸ್.ಎಸ್ ರಾಜಮೌಳಿ ತಮಿಳು, ತೆಲುಗು, ಕನ್ನಡ, ಮಲಯಾಳಂನಲ್ಲಿ ನಿರ್ಮಿಸಿ ಪ್ರಸ್ತುತಪಡಿಸಲಿದ್ದಾರೆ. ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 9ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು, ಈ ಚಿತ್ರಕ್ಕೆ ಬಾಯ್ಕಾಟ್ ಬಿಸಿ ಕೂಡ ತಾಗಿದ್ದು, ಸಿನಿಮಾ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು.