ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ 'ಬೈರಾಗಿ' ಸಿನಿಮಾ ನಾಳೆ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅಭಿಮಾನಿ ಬಳಗದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ಟಾರ್ ಸಿನಿಮಾಗಳು ಅಂದಾಕ್ಷಣ ರಾತ್ರಿ 12 ಗಂಟೆಗೆ, ಮುಂಜಾನೆ 5 ಗಂಟೆಗೆ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋಗಳನ್ನು ಮಾಡಲಾಗುತ್ತದೆ. ಆದರೆ ಬೈರಾಗಿ ಸಿನಿಮಾ ರಾಜ್ಯಾದ್ಯಂತ ಮಾರ್ನಿಂಗ್ ಶೋ ಮೂಲಕವೇ ರಿಲೀಸ್ ಆಗುತ್ತಿದೆ.
ಶಿವ ಸೈನ್ಯ ಚಿಕ್ಕಬಳ್ಳಾಪುರದ ಸಂಘದ ವತಿಯಿಂದ ಬೆಂಗಳೂರಿನ ವಾಣಿ ಚಿತ್ರಮಂದಿರದಲ್ಲಿ 50 ಅಡಿ ಎತ್ತರದ ಶಿವರಾಜ್ಕುಮಾರ್ ಕಟೌಟ್ ನಿಲ್ಲಿಸಿ, ಹೂವಿನ ಹಾರ ಹಾಕಿ ಸಂಭ್ರಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ಬೆಂಗಳೂರಿನ ಮುಖ್ಯ ಚಿತ್ರಮಂದಿರ ತ್ರಿವೇಣಿಯಲ್ಲಿ ಹುಲಿ ಕುಣಿತ, ಡೊಳ್ಳು ಕುಣಿತವಿರಲಿದೆ. ಅಭಿಮಾನಿಗಳ ಜೊತೆ ಶಿವಣ್ಣ ಹಾಗು ಡಾಲಿ ಕುಳಿತು ಸಿನಿಮಾ ನೋಡಲಿದ್ದಾರೆ. ನಗರದ ನಾಲ್ಕು ಚಿತ್ರಮಂದಿರಗಳಿಗೆ ಶಿವರಾಜ್ ಕುಮಾರ್, ಧನಂಜಯ್ ಮತ್ತು ಬೈರಾಗಿ ಚಿತ್ರತಂಡ ಭೇಟಿ ನೀಡಲಿದೆ.
ಡಾ.ಶಿವು ಬ್ರಿಗೇಡ್ಸ್ ಸಂಘದ ವತಿಯಿಂದ ಕಮಲನಗರ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಮಧ್ಯಾಹ್ನ 1 ಗಂಟೆಗೆ ಶಿವಣ್ಣನ ಕಟೌಟ್ಗೆ ಹೂವಿನ ಹಾರ ಹಾಕಿ ಸಿಡಿಮದ್ದು ಸಿಡಿಸಿ ಸಂಭ್ರಮಿಸಲಾಗುವುದು. ಅದೇ ರೀತಿ ಶಿರಾ ತಾಲೂಕಿನಲ್ಲಿ ಕನ್ನಡ ರಾಜಭೂಷಣ ಸಂಘ, ಚಾಮರಾಜನಗರ ಸಂಘದ ವತಿಯಿಂದ ಭ್ರಮರಾಂಬ ಚಿತ್ರಮಂದಿರದಲ್ಲಿ ಶಿವಣ್ಣನವರ ಕಟೌಟ್ಗೆ ಹೂವಿನ ಹಾರ ಹಾಕಿ ಸಿಡಿಮದ್ದು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಗುವುದು. ದಾವಣಗೆರೆಯ ಅಶೋಕ ಚಿತ್ರಮಂದಿರದಲ್ಲಿ ಶಿವ ಸೈನ್ಯ ತಂಡದ ವತಿಯಿಂದ ಬೆಳಗ್ಗೆ 10 ಗಂಟೆಗೆ ಸಂಭ್ರಮಾಚರಣೆ ಮಾಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ಇದನ್ನೂ ಓದಿ: 'ಪಾಪ ಕೃತ್ಯಗಳು ಹೆಚ್ಚಾದಾಗ ಸಂಹಾರ, ಹರಹರ ಮಹದೇವ್..': ಉದ್ಧವ್ ವಿರುದ್ಧ ಕಂಗನಾ ಆಕ್ರೋಶ
ಶಿವಣ್ಣ-ಡಾಲಿ ಧನಂಜಯ್ ಇಬ್ಬರು ಒಟ್ಟಾಗಿ ತೆರೆ ಮೇಲೆ ಅಬ್ಬರಿಸೋದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ದಿಯಾ ಸಿನಿಮಾದ ಪೃಥ್ವಿ ಅಂಬರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹೂಡಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನವಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ದೀಪು ಎಸ್.ಕುಮಾರ್ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.