ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ 'ಬಿಗ್ ಬಾಸ್' ಕೂಡ ಒಂದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈವರೆಗೆ ಒಂಬತ್ತು ಸೀಸನ್ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ಇದೀಗ ಮತ್ತೆ ಬಂದಿದೆ. ಬಿಗ್ ಬಾಸ್ 10ನೇ ಸೀಸನ್ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ.
ಈ ಹಿಂದಿನ ಎಲ್ಲಾ ಸೀಸನ್ಗಿಂತ ಈ ಬಾರಿಯ ಬಿಗ್ ಬಾಸ್ ಸಂಥಿಂಗ್ ಸ್ಪೆಷಲ್ ಆಗಿರಲಿದೆ. ಸದ್ಯ ಪ್ರೋಮೋದಿಂದಲೇ ಕುತೂಹಲ ಹೆಚ್ಚಿಸಿರುವ ಶೋನ ವಿಶೇಷತೆ ಬಗ್ಗೆ ಕಿಚ್ಚ ಸುದೀಪ್, ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥ ಪ್ರಶಾಂತ್ ನಾಯಕ್ ಹಾಗೂ ಬಿಗ್ ಬಾಸ್ ಶೋ ನಿರ್ದೇಶಕ ಪ್ರಕಾಶ್ ಮಾಧ್ಯಮದವರ ಮುಂದೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮೊದಲು ಮಾತು ಶುರುಮಾಡಿದ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥ ಪ್ರಶಾಂತ್ ನಾಯಕ್, "ಕಿಚ್ಚ ಸುದೀಪ್ ಈ ಬಾರಿ ಹೊಸ ರೂಪದಲ್ಲಿ ಬಿಗ್ ಬಾಸ್ನಲ್ಲಿ ಮಿಂಚಲಿದ್ದಾರೆ. ಚಾರ್ಲಿ 777 ಸಿನಿಮಾದ 'ಚಾರ್ಲಿ' ಶ್ವಾನ ಸೇರಿದಂತೆ 17 ಸ್ಪರ್ಧಿಗಳಿರುವ ಬಿಗ್ ಬಾಸ್ ಸೀಸನ್ 10 ಹ್ಯಾಪಿ ಬಿಗ್ ಬಾಸ್ ಥೀಮ್ನಲ್ಲಿ ಅಕ್ಟೋಬರ್ 8ಕ್ಕೆ ಗ್ರಾಂಡ್ ಲಾಂಚ್ ಆಗಲಿದೆ. ಈ ಬಾರಿಯ ಬಿಗ್‌ಬಾಸ್ 12 ಸಾವಿರ ಚದರ್ ಅಡಿ ಮಹಾಮನೆಯಲ್ಲಿ ನಡೆಯಲಿದೆ. ಇದಕ್ಕಾಗಿ 4 ತಿಂಗಳಿಂದ ಹೊಸಮನೆಯ ವಿನ್ಯಾಸ ನಡೆದಿದೆ" ಎಂದು ತಿಳಿಸಿದರು.
ಬಳಿಕ ಕಿಚ್ಚ ಸುದೀಪ್ ಮಾತನಾಡಿ, "ಪ್ರತಿ ಬಾರಿಯೂ ಬಿಗ್ ಬಾಸ್ಗೆ ಸೆಲೆಕ್ಟ್ ಆಗುವ ಸ್ಪರ್ಧಿಗಳ ಬಗ್ಗೆ ನನಗೆ ಮೊದಲೇ ಹೇಳಲೇಬೇಡಿ ಅಂತ ನಾನು ಶೋನ ನಿರ್ದೇಶಕರಿಗೆ ತಿಸಿರುತ್ತೇನೆ. ಲಾಂಚ್ ದಿನಾನೇ ಸರ್ ಬಂದು ಈ ಕಂಟೆಸ್ಟಂಟ್ ಅನ್ನು ಒಳಗೆ ಕಳುಹಿಸಿ ಎಂದು ಹೇಳುತ್ತಾರೆ. ಮುಂದಿನ ಸ್ಪರ್ಧಿ ಹೆಸರು, ಅವರ ಪರಿಚಯ ಎಲ್ಲವೂ ನನಗೆ ಅಲ್ಲೇ ಗೊತ್ತಾಗುವುದು. ಏಕೆಂದರೆ, ಎಲ್ಲೋ ಅಪ್ಪಿತಪ್ಪಿ ನನಗೆ ಎಲ್ಲಾ ಲಿಸ್ಟ್ ಗೊತ್ತಿದ್ದು ಅವರ ಜೊತೆ ಮೊದಲೇ ಎಲ್ಲಾದರೂ ಮಾತನಾಡಿದ್ರೆ, ಅಂತಹ ಸನ್ನಿವೇಶಗಳು ಬೇಡ. ಅಲ್ಲದೇ ನನಗೆ ಎಲಿಮಿನೇಟ್ ಆಗುವ ಕಂಟೆಸ್ಟೆಂಟ್ ಬಗ್ಗೆಯೂ ಮುಂಚೆಯೇ ಗೊತ್ತಿರುವುದಿಲ್ಲ" ಎಂದು ಹೇಳಿದರು.
"ಬಿಗ್ ಬಾಸ್ ಶೋ ಸ್ಕ್ರಿಪ್ಡೆಡ್ ಅಲ್ಲ. ಸ್ಪರ್ಧಿಗಳಿಗೆ ಕೊಡುವ ಟಾಸ್ಕ್ ಮಾತ್ರ ನಮ್ಮ ಪ್ಲಾನ್. ಒಂದು ವೇಳೆ ಸ್ಕ್ರಿಪ್ಡೆಡ್ ಆಗಿದ್ರೆ, ನಾವು ಕೊಟ್ಟಿರುವ ಟಾಸ್ಕ್ನಲ್ಲಿ ಗೆಲ್ಲೋರು ಯಾರು ಅನ್ನೋದನ್ನು ನಾವೇ ಹೇಳ್ತಾ ಇದ್ದೆವು. ಸ್ಪರ್ಧಿಗಳು ಮನೆಯ ಒಳಗಡೆ ಆಡೋ ಎಲ್ಲಾ ಆಟಗಳು ಅವರ ವೈಯಕ್ತಿಕವಾಗಿರುತ್ತವೆ. ಯಾರೂ ಹೇಳಿ ಕೊಟ್ಟಿರುವುದಿಲ್ಲ. ಒಂದು ವೇಳೆ ಮನೆಯ ಒಳಗಡೆ ಹೋಗುವಾಗ ಹೀಗಿರಿ, ಹಾಗಿರಿ ಎಂದು ಹೇಳಿದರೂ 100 ದಿನ ನಾವು ಹೇಳಿದಂತೆಯೇ ಇರಲು ಸಾಧ್ಯವೇ? ವಾರಾಂತ್ಯದಲ್ಲಿ ನಾನು ಹೇಳುವ ಕೆಲವೊಂದು ಪ್ರಾರಂಭದ ಲೈನ್ಸ್ ಸ್ಕ್ರಿಪ್ಡೆಡ್ ಆಗಿರುತ್ತದೆ. ಹಾಗಂತ ಎಲ್ಲವೂ ಅಲ್ಲ. ಸ್ಪರ್ಧಿಗಳಿಗೆ ಕೇಳಬೇಕಾದ ಕೆಲವು ಪ್ರಶ್ನೆಗಳನ್ನು ನಾವು ಮೊದಲೇ ರೆಡಿ ಮಾಡಬಹುದು. ಹಾಗಂತ ಅವರ ಜೊತೆ ಮಾತನಾಡುವ ಎಲ್ಲವೂ ಸ್ಕ್ರಿಪ್ಡೆಡ್ ಅಲ್ಲ" ಎಂದು ಬಿಗ್ ಬಾಸ್ ಸ್ಕ್ರಿಪ್ಡೆಡ್ ಎಂಬ ವಿಚಾರವಾಗಿ ಸುದೀಪ್ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿದ ಕರಾವಳಿಯ ಪ್ರತಿಭೆ ರೂಪೇಶ್ ಶೆಟ್ಟಿ