ಹೊಂಬಾಳೆ ಫಿಲಂಸ್ ನಿರ್ಮಾಣ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾದ ಪೂರ್ವ ಭಾಗವಾಗಿರುವ 'ಕಾಂತಾರ ಒಂದು ದಂತಕಥೆ ಅಧ್ಯಾಯ-1' ದ ಫಸ್ಟ್ ಲುಕ್ ಮತ್ತು ಟೀಸರ್ ಸೋಮವಾರ ಬಿಡುಗಡೆಯಾಗಿತ್ತು. ಇದೇ ಸಂದರ್ಭದಲ್ಲಿ 'ಕಾಂತಾರ' ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಗೋವಾದಲ್ಲಿ ಮುಕ್ತಾಯವಾದ 54ನೇ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಕಾಂತಾರ'ಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಶಸ್ತಿಗೆ ಭಾಜನವಾಗಿದೆ.
ಅಂತರರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಕಣದಲ್ಲಿದ್ದವು. ಭಾರತದಿಂದ 'ಕಾಂತಾರ' ಸೇರಿದಂತೆ ಒಟ್ಟು ಮೂರು ಚಿತ್ರಗಳಿದ್ದವು. ಈ ವಿಭಾಗದಲ್ಲಿ 'ಕಾಂತಾರ'ಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ. ನಗದನ್ನು ಪ್ರಶಸ್ತಿ ಒಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ರಿಷಭ್ ಶೆಟ್ಟಿ, "ಕಳೆದ ವರ್ಷ ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದೆವು. ಈ ಬಾರಿ ನಮ್ಮ ಚಿತ್ರ ತೀರ್ಪುಗಾರರ ವಿಶೇಷ ಪ್ರಶಸ್ತಿ ಗೆದ್ದಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ" ಎಂದು ಸಂತೋಷ ಹಂಚಿಕೊಂಡರು.
'ಕಾಂತಾರ' ಕಳೆದ ವರ್ಷ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಪಡೆಯುವುದರೊಂದಿಗೆ, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿ ಹಲವು ಭಾಷೆಗಳಿಗೆ ಡಬ್ ಆಗಿತ್ತು. ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣ ನೀಡಿದ್ದರು.
ಕಾಂತಾರ ಚಾಪ್ಟರ್-1 ಫಸ್ಟ್ ಲುಕ್, ಟೀಸರ್ ಬಿಡುಗಡೆ: 'ಕಾಂತಾರ ಚಾಪ್ಟರ್-1' ಕಳೆದ ವರ್ಷದ ಬ್ಲಾಕ್ ಬಸ್ಟರ್ ಹಿಟ್ 'ಕಾಂತಾರ'ದ ಪ್ರೀಕ್ವೆಲ್ ಆಗಿದೆ. ಮೊದಲ ಭಾಗದಲ್ಲಿ ನೋಡಿದ ಕಥೆಗೂ ಮೊದಲು ಏನಾಯ್ತು? ಎಂಬುದನ್ನು 'ಕಾಂತಾರ ಚಾಪ್ಟರ್ 1' ತೋರಿಸಲಿದೆ. ನವೆಂಬರ್ 27ರ ಸೋಮವಾರ ಕಾಂತಾರ ಚಾಪ್ಟರ್-1 ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.