ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಕೌರವ' ಖ್ಯಾತಿಯ ಬಿ.ಸಿ ಪಾಟೀಲ್ ಹಾಗೂ ಸೂರ್ಯ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಗರಡಿ'. ಇದೇ ನವೆಂಬರ್ 10ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಅದೇ ದಿನದಂದು ಮಾಸ್ಟರ್ ಆನಂದ್ ನಟನೆಯ 'ನಾ ಕೋಳಿಕೆ ರಂಗ' ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಗೊರವಾಲೆ ಮಹೇಶ್ ನಿರ್ದೇಶನದ ಈ ಸಿನಿಮಾ ಗ್ರಾಮೀಣ ಭಾಗದ ಸೊಗಡಿನ ಕಥೆ ಹೇಳುತ್ತದೆ. ಟ್ರೇಲರ್ ಕೂಡ ಕುತೂಹಲ ಹುಟ್ಟಿಸಿದೆ. ಇದೀಗ ಚಿತ್ರತಂಡ 'ನಾ ಕೋಳಿಕೆ ರಂಗ'ದ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮೊದಲಿಗೆ ಮಾತು ಶುರು ಮಾಡಿದ ನಟ ಆನಂದ್, "ಈ ಚಿತ್ರ ಮಾಡಿದ್ದು ಆಕಸ್ಮಿಕ. ಕೊರೊನಾ ಸಮಯದಲ್ಲಿ ಆರಂಭವಾದ ಸಿನಿಮಾ ಈಗ ಬಿಡುಗಡೆ ಕಾಣುತ್ತಿದೆ. ನಿರ್ಮಾಪಕರು ಸೇರಿದಂತೆ ತಂಡದ ಎಲ್ಲರೂ ಶ್ರಮಪಟ್ಟಿದ್ದಾರೆ. ನನ್ನ ಜೊತೆ ಕಾಮಿಡಿ ಕಿಲಾಡಿ ತಂಡವು ಪರಿಶ್ರಮ ಪಟ್ಟಿದೆ. ಹಾಗಾಗಿ ನಾನು ಎಲ್ಲರಿಗೂ ಕೃತಜ್ಞತೆ ಹೇಳಲು ಬಯಸುತ್ತೇನೆ" ಎಂದರು.
ನಂತರ ಹಿರಿಯ ನಟಿ ಭವ್ಯ ಮಾತನಾಡಿ, "ಒಂದು ಭಾವನಾತ್ಮಕ ವಿಷಯದ ಸುತ್ತ ಸಾಗುವ ಕಥೆಯಿದು. ಹಳ್ಳಿ ಜನರ ಭಾವನೆಗಳು, ತುಡಿತ ಹೇಗೆಲ್ಲಾ ಇರುತ್ತೆ ಎಂಬುದು ಇಲ್ಲಿನ ಹೈಲೆಟ್. ಕೋಳಿ ಮತ್ತು ಮಗನ ಸುತ್ತ ನಡೆಯುವ ಕಥೆ ಎಲ್ಲರಿಗೂ ಇಷ್ಟ ಆಗುತ್ತೆ. ಕೋಳಿ ಮತ್ತು ಹೀರೋ ನಡುವಿನ ಭಾವನಾತ್ಮಕ ಕಥೆ ಇಲ್ಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ದಾವಣಗೆರೆ ಮಣ್ಣಲ್ಲಿ 'ಗರಡಿ' ಅಬ್ಬರ: ಯೋಗರಾಜ್ ಭಟ್, ಬಿ.ಸಿ ಪಾಟೀಲ್ ಪ್ರಚಾರ
ನಿರ್ದೇಶಕ ಗೊರವಾಲೆ ಮಹೇಶ್ ಮಾತನಾಡಿ, "ಈ ಚಿತ್ರವನ್ನು ಕಷ್ಟಪಟ್ಟು ಮಾಡಿದ್ದೇವೆ. ಈ ಚಿತ್ರ ಪ್ರತಿಯೊಬ್ಬರು ಇಷ್ಟ ಆಗುವ ಜೊತೆಗೆ ನಕ್ಕು ನಲಿಸುತ್ತೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ನನಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಅತೀವವಾದ ಗೌರವವಿತ್ತು. ಹಾಗಾಗಿ ಅವರ ಬಗ್ಗೆ ಹಠ ತೊಟ್ಟು ಹಾಡು ಮಾಡಿದೆವು. ಕೈಲಾಸ್ ಖೇರ್ ಹಾಡಿರುವ ಆ ಹಾಡು ಅತ್ಯುತ್ತಮವಾಗಿ ಮೂಡಿ ಬಂದಿದೆ. ವರನಟ ಡಾ.ರಾಜ್ಕುಮಾರ್ ಅವರ ಮೇಲೆ ಅತೀವವಾದ ಅಭಿಮಾನ. ಹಾಗಾಗಿ ಪುನೀತ್ ಸರ್ ಅವರಿಂದ ಒಂದು ಹಾಡು ಹಾಡಿಸಬೇಕು ಎಂದು ಮಾಡಿದ ಪ್ರಯತ್ನ ಕೂಡ ಯಶಸ್ಸು ಕಂಡಿತು. ದೇವರ ಮಗ ಅವರು. ಮಾಸ್ಟರ್ ಆನಂದ್ ಅವರಿಗೆ ನೀವು ಹಾಡಬೇಕು ಎಂದ ತಕ್ಷಣವೇ ಒಪ್ಪಿ ಹಾಡಿದರು. ಅದು ನನ್ನ ಪುಣ್ಯ" ಎಂದು ನಿರ್ಮಾಪಕ ಸೋಮಶೇಖರ್ ಸಂಸತ ಹಂಚಿಕೊಂಡರು.
ಚಿತ್ರದಲ್ಲಿ ಆನಂದ್ ಜೋಡಿಯಾಗಿ ರಾಜೇಶ್ವರಿ ನಟಿಸಿದ್ದು, ಹಿರಿಯ ನಟಿ ಭವ್ಯ ಅಲ್ಲದೇ ಶೋಭಾರಾಜ್, ಹೊನ್ನವಳ್ಳಿ ಕೃಷ್ಣ, ವೈಜನಾಥ್ ಬಿರಾದಾರ್ ಸೇರಿದಂತೆ ಕಾಮಿಡಿ ಕಿಲಾಡಿ ಶೋ ಕಲಾವಿದರು ಅಭನಯಿಸಿದ್ದಾರೆ. ಚಿತ್ರಕ್ಕೆ ಧನ್ ಪಾಲ್ ಛಾಯಗ್ರಾಹಣ, ರಾಜ್ ಎಮ್ಮಿಗನೂರ್ ಸಂಗೀತ, ಮಾಣಿಕ್ಯ ಸಿನಿಮಾ ಖ್ಯಾತಿಯ ವಿಶ್ವ ಸಂಕಲನವಿದೆ. ಸದ್ಯ ಹಾಡುಗಳು ಹಾಗೂ ಟ್ರೇಲರ್ನಿಂದ ಸದ್ದು ಮಾಡುತ್ತಿರುವ 'ನಾ ಕೋಳಿಕೆ ರಂಗ' ಸಿನಿಮಾ ಇದೇ ನವೆಂಬರ್ 10ರಂದು ತೆರೆ ಕಾಣಲಿದೆ.
ಇದನ್ನೂ ಓದಿ: 'ನಾ ಕೋಳಿಕ್ಕೆ ರಂಗ'ನಾಗಿ ಮಾಸ್ಟರ್ ಆನಂದ್; ನವೆಂಬರ್ 10ರಿಂದ ಆಟ ಶುರು