ಮುಂಬೈ (ಮಹಾರಾಷ್ಟ್ರ): ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೋರ್ಸ್' ವೆಬ್ ಸಿರೀಸ್ಗೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಸೇರ್ಪಡೆಯಾಗಿದ್ದಾರೆ. ಶಸ್ತ್ರಸಜ್ಜಿತ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿರುವ ಒಬೆರಾಯ್ ಅವರ ಫೋಟೋವನ್ನು ಚಿತ್ರದ ನಿರ್ಮಾಪಕರೂ ಆಗಿರುವ ರೋಹಿತ್ ಶೆಟ್ಟಿ ಮಂಗಳವಾರ ಹಂಚಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಒಟಿಟಿಗೆ ಇಳಿಯುತ್ತಿರುವ ರೋಹಿತ್ ಶೆಟ್ಟಿ ಅವರಿಗಿದು ಚೊಚ್ಚಲ ವೆಬ್ ಸಿರೀಸ್. ಆ್ಯಕ್ಷನ್ ವೆಬ್ ಸಿರೀಸ್ ಇದಾಗಿದ್ದು ನಿರ್ದೇಶನ ಜೊತೆಗೆ ನಿರ್ಮಾಣದ ಹೊಣೆಯೂ ಅವರದ್ದೇ ಆಗಿದೆ.
- " class="align-text-top noRightClick twitterSection" data="
">
ಹೊಸ ಪಾತ್ರ ಪ್ರವೇಶ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಇವರು ನಮ್ಮ ಪಡೆಯಲ್ಲಿರುವ ಅತ್ಯಂತ ಅನುಭವಿ ಹಿರಿಯ ಅಧಿಕಾರಿ. ನೀವೂ ಸಹ ಭೇಟಿ ಮಾಡಿ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಜೊತೆಗೆ ಅವರು #IndianPoliceForce ಮತ್ತು #filmingnow ಟ್ಯಾಗ್‌ಗಳನ್ನೂ ಬಳಸಿದ್ದಾರೆ. ಭರ್ಜರಿ ಎಂಟ್ರಿ ಕೊಟ್ಟ ಒಬೆರಾಯ್ ಪ್ರತಿಯಾಗಿ ಧನ್ಯವಾದ ತಿಳಿಸಿದ್ದಾರೆ. ಸೂಪರ್ ಕಾಪ್ ಪಾತ್ರ ನಿರ್ವಹಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಶೇರ್ಷಾ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಅವರು ದೆಹಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಇವರ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಸಹ ಸೇರಿಕೊಂಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ದೊಡ್ಡ ತಾರಾಬಳಗವೊಂದು ಇಂತಹ ವೆಬ್ ಸಿರೀಸ್ನಲ್ಲಿ ಕಾಣಿಸಿಕೊಳ್ಳುತ್ತಿದೆ.
ಇಂತಹ ಆ್ಯಕ್ಷನ್ ಸಿನಿಮಾಗಳಿಗೆ ಹೆಚ್ಚು ಒತ್ತು ಕೊಡುವ ರೋಹಿತ್ ಶೆಟ್ಟಿ ಇದಕ್ಕೂ ಮುನ್ನ ಅಜಯ್ ದೇವಗನ್ ನಟನೆಯ ಸಿಂಗಂ (ಭಾಗ 1 ಮತ್ತು 2), ರಣವೀರ್ ಸಿಂಗ್ ನಟನೆಯ ಸಿಂಬಾ ಹಾಗೂ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.
ಕಂಪನಿ, ಧಮ್, ಸಾಥಿಯಾ, ಯುವ, ಶೂಟೌಟ್ ಅಟ್ ಲೋಖಂಡ್‌ವಾಲಾದಂತಹ ಹಿಟ್ ಚಲನಚಿತ್ರಗಳಿಗೆ ಹೆಸರುವಾಸಿಯಾದ ಒಬೆರಾಯ್ ಇನ್‌ಸೈಡ್ ಎಡ್ಜ್ ಎಂಬ ವೆಬ್ ಸಿರೀಸ್ನಲ್ಲಿಯೂ ನಟಿಸಿದ್ದಾರೆ. ರೋಹಿತ್ ಶೆಟ್ಟಿ ಪಿಕ್ಚರ್ಸ್ ಸಹಯೋಗದೊಂದಿಗೆ ಅಮೆಜಾನ್ ಒರಿಜಿನಲ್ ವೆಬ್ ಸರಣಿಯಾದ ಇಂಡಿಯನ್ ಪೊಲೀಸ್ ಫೋರ್ಸ್ ಶೂಟಿಂಗ್ ಸದ್ಯ ಮುಂಬೈನಲ್ಲಿ ನಡೆಯುತ್ತಿದೆ. ಮುಂದಿನ ವರ್ಷ ಪ್ರೈಮ್ ವಿಡಿಯೋದಲ್ಲಿ ವೆಬ್ ಸಿರೀಸ್ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.