ಸಿನಿಮಾ ಮತ್ತು ಕಿರುತೆರೆ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ರಂಜನಿ ರಾಘವನ್ ಬರೆದಿರುವ 'ಸ್ವೈಪ್ ರೈಟ್' ಎಂಬ ಕಾದಂಬರಿಯನ್ನು ಇಂದು ಬಿಡುಗಡೆ ಮಾಡಲಾಯಿತು. ನಿರ್ದೇಶಕ ಯೋಗರಾಜ್ ಭಟ್, ಮಂಸೋರೆ ಹಾಗೂ ಸಾಹಿತಿ ಕವಿರಾಜ್, ಹಿರಿಯ ಪತ್ರಕರ್ತ ಜಿ.ಎನ್ ಮೋಹನ್ ಕಾದಂಬರಿಯನ್ನು ಬಿಡುಗಡೆ ಮಾಡಿದರು. ಕನ್ನಡತಿ ಸೀರಿಯಲ್ ಮೂಲಕ ರಾಜ್ಯದಲ್ಲಿ ಮನೆ ಮನೆಗೆ ತಲುಪುವ ಮೂಲಕ ಮನೆ ಮಗಳಾಗಿರುವ ರಂಜನಿ ರಾಘವನ್, ಓದುವ ಹಾಗೂ ಪುಸ್ತಕ ಬರೆಯುವ ಆಸಕ್ತಿ ಹೊಂದಿದ್ದಾರೆ.
ಯೋಗರಾಜ ಭಟ್ ಮಾತನಾಡಿ, ಕನ್ನಡಕ್ಕೆ ಆತಂಕವಿದೆ. ಕನ್ನಡ ಮೂಲೆಗುಂಪಾಗುತ್ತದೆ ಎನ್ನುವ ಆತಂಕ ಸುಳ್ಳು. ಕನ್ನಡ ಭಾಷೆ ಹುಟ್ಟಿದಾಗಿನಿಂದಲೂ ಭಾಷೆ ಮೂಲೆಗುಂಪಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಬೆಂಗಳೂರು ದಾಟಿದರೆ ಕನ್ನಡ ನೆಮ್ಮದಿಯಾಗಿಯೇ ಇದೆ. ಬೆಂಗಳೂರಿನಲ್ಲಿ ಮಾತ್ರ ನಾವು ಅನಗತ್ಯ ಗೊಂದಲಕ್ಕೆ ಒಳಗಾಗಿದ್ದೇವೆ ಎಂದರು.
ಇತ್ತೀಚೆಗೆ ಮಹಾಪ್ರಾಣ ಕಿತ್ತುಹಾಕಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಮಹಾಪ್ರಾಣ ಇರಬೇಕೇ, ಇಲ್ಲದಿರಬೇಕೇ ಎನ್ನುವುದಕ್ಕಿಂತ ಕನ್ನಡ ಮಾತನಾಡುತ್ತಾ ಇರಬೇಕು ಎನ್ನುವುದೇ ಮುಖ್ಯವಾಗಬೇಕು ಎಂದು ಭಟ್ರು ಕಿವಿಮಾತು ಹೇಳಿದರು. ರಂಜನಿ ರಾಘವನ್ ಅವರ ಬರಹ ಸ್ತ್ರೀ ಸಮುದಾಯಕ್ಕೆ ಸಹಜವಾಗಿ ಇರುವ ಕಥನ ಕಲೆಯ ಹಿರಿಮೆ ತೋರಿಸುತ್ತದೆ. ಕಥನ ಕಲೆ ರಂಜನಿ ಅವರಿಗೆ ಸಿದ್ಧಿಸಿದೆ ಎಂದು ಹೇಳಿದರು.
ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಕಾಲದಲ್ಲಿ ರಂಜನಿ ದೊಡ್ಡ ಸಂಖ್ಯೆಯ ಓದುಗರನ್ನು ತಮ್ಮ ಬರಹದ ಮೂಲಕ ಸೃಷ್ಟಿಸಿದ್ದಾರೆ ಎಂದು ಪ್ರಶಂಸಿಸಿದರು. ಡಿಜಿಟಲ್ ಮಾಧ್ಯಮದ ಕಾಲಘಟ್ಟದಲ್ಲಿ ನಾವೆಲ್ಲರೂ ಕಲ್ಪನೆಯ ಲೋಕವನ್ನು ಕಳೆದುಕೊಂಡಿದ್ದೇವೆ. ಬುದ್ದಿ ಪ್ರಚೋದಕವಾಗಿರಲು ಓದು ಅತಿ ಮುಖ್ಯ ಎಂದರು.
ಚಿತ್ರ ನಿರ್ದೇಶಕ ಮಂಸೋರೆ ಮಾತನಾಡಿ, ಚಿತ್ರ ನಿರ್ಮಿಸಿ ಅದರ ವಿತರಣೆ ಗೊತ್ತಾಗದೆ ಕಂಗಾಲಾಗುವಂತೆ ಪುಸ್ತಕ ಪ್ರಕಟಿಸಿ ಅದನ್ನು ಓದುಗರ ಬಳಿಗೆ ಕೊಂಡೊಯ್ಯುವ ದಾರಿ ಗೊತ್ತಾಗದೆ ಕಂಗಾಲಾಗುವ ಸ್ಥಿತಿ ಕನ್ನಡ ಪ್ರಕಾಶನ ರಂಗಕ್ಕೆ ಬಾರದಿರಲಿ ಎಂದು ಆಶಿಸಿದರು.
ನಟಿ ರಂಜನಿ ಮಾತನಾಡಿ, ಬರವಣಿಗೆ ನನಗೆ ಮುಕ್ತ ಸ್ವಾತಂತ್ರ್ಯದ ಅನುಭವ ಕೊಟ್ಟಿದೆ. ನನ್ನ ಕತೆಗಳನ್ನು ಓದಿ ಮೆಚ್ಚಿದ ಕಾರಣದಿಂದಾಗಿ ನನ್ನಲ್ಲಿ ಆತ್ಮವಿಶ್ವಾಸವೂ ಹೆಚ್ಚಿದೆ ಎಂದು ತಿಳಿಸಿದರು.
ಬಹುರೂಪಿ ಪ್ರಕಾಶನ ಹಾಗೂ ಬ್ಲಾಸಮ್ ಬುಕ್ ಹೌಸ್ ಜಂಟಿಯಾಗಿ ಈ ಪುಸ್ತಕ ಹೊರತಂದಿದೆ.
ಇದನ್ನೂ ಓದಿ :ವರವಾಯ್ತು ಕೊರೊನಾ ಲಾಕ್ಡೌನ್: ಪದವಿ ಮುಗಿಯುತ್ತಿದ್ದಂತೆ ಕಾದಂಬರಿ ಹೊರತಂದ ಯುವತಿ