ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ''ಮುಂಗಾರು ಮಳೆ'' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ, ಇದೀಗ ಕರ್ನಾಟಕದ ಮನೆ ಮಗಳಾಗಿರುವ ನಟಿ ಪೂಜಾ ಗಾಂಧಿ. ಮೂಲತಃ ಬೆಂಗಾಲಿ ಕುಟುಂಬದವರಾದ ಪೂಜಾ ಗಾಂಧಿ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಹೌದು, ತಾವು ಪ್ರೀತಿಸಿದವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಮುಂಗಾರು ಮಳೆ, ಕೃಷ್ಣ, ಮಿಲನ, ಗೋಕುಲ, ಬುದ್ಧಿವಂತ, ಅಭಿನೇತ್ರಿ, ಟಾಟಾ ಬಿರ್ಲಾ ಹೀಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿ ಕನ್ನಡ ಕಲಿತು ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ. ನಟಿಯಾಗಿದ್ದ ಸಂದರ್ಭ ಪೂಜಾ ಗಾಂಧಿ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡಿಗನ ಕೈ ಹಿಡಿದು ಕರ್ನಾಟಕದ ಸೊಸೆ ಆಗಲು ಉತ್ತರ ಭಾರತದ ಬೆಡಗಿ ರೆಡಿ ಆಗಿದ್ದಾರೆ.
ಪೂಜಾ ಗಾಂಧಿ ಕೈ ಹಿಡಿಯಲಿರುವ ವರ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿ ಓನರ್ ವಿಜಯ್ ಎಂಬ ಮಾಹಿತಿ ಇದೆ. ನವೆಂಬರ್ 29 ಅಂದರೆ ನಾಳೆ ಬೆಂಗಳೂರಿನ ಯಲಹಂಕದಲ್ಲಿ ಮಂತ್ರಮಾಂಗಲ್ಯ ಪದ್ಧತಿಯಂತೆ ಮದುವೆ ನಡೆಯಲಿದೆ. ವಿಜಯ್ ಅವರೇ ನಟಿ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿದ್ದು ಎಂಬ ಮಾಹಿತಿಯೂ ಇದೆ. ಉತ್ತರ ಭಾರತದಿಂದ ಬಂದು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿ, ಕನ್ನಡವನ್ನು ಬಹಳ ಚೆನ್ನಾಗೇ ಮಾತನಾಡುತ್ತಾರೆ.
ಪೂಜಾ ಗಾಂಧಿ ಮೂಲತಃ ಬೆಂಗಾಲಿ ಕುಟುಂಬದವರು. ಹುಟ್ಟಿದ್ದು ಉತ್ತರಪ್ರದೇಶದ ಮೀರತ್, ಬೆಳೆದಿದ್ದು ಓದಿದ್ದು ದೆಹಲಿಯಲ್ಲಿ. ಮುಂಗಾರು ಮಳೆ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಪೂಜಾ ಸ್ಯಾಂಡಲ್ವುಡ್ನಲ್ಲಿ ಯಶಸ್ವಿ ನಟಿಯಾಗಿ ಮಿಂಚಿದರು. ಕನ್ನಡ ಅಲ್ಲದೇ ಮಲಯಾಳಂ, ಬೆಂಗಾಲಿ ಸಿನಿಮಾರಂಗಗಳಲ್ಲಿಯೂ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ. ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ಪೂಜಾ ಗಾಂಧಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.
ಇದನ್ನೂ ಓದಿ: ತೆಲುಗು ನಟ ಸುಧೀರ್ ಬಾಬು ಸಿನಿಮಾಗೆ ಕಿಚ್ಚ ಸುದೀಪ್ ಸಾಥ್: ಟೀಸರ್ ಅನಾವರಣ
2017ರಲ್ಲಿ ಉದ್ಯಮಿ ಆನಂದ್ ಗೌಡ ಅವರ ಜೊತೆ ಪೂಜಾ ಗಾಂಧಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ವೈಯಕ್ತಿಕ ಕಾಣಗಳಿಂದ ಈ ನಿಶ್ಚಿತಾರ್ಥ ಕೆಲ ತಿಂಗಳಲ್ಲಿ ಮುರಿದುಬಿದ್ದಿತ್ತು. ಇದೀಗ ಗೆಳೆಯ ವಿಜಯ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ನಾಳೆ ಮಂತ್ರ ಮಾಂಗಲ್ಯ ಮೂಲಕ ಮದುವೆ ಆಗಲಿದ್ದೇವೆ ಎಂದು ತಮ್ಮ ಕೈಯಾರೆ ಕನ್ನಡದಲ್ಲಿ ಬರೆದ ಪತ್ರದ ಮೂಲಕ ನಟಿ ಪೂಜಾ ಗಾಂಧಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ತೆಲುಗು ನಟ ಸುಧೀರ್ ಬಾಬು ಸಿನಿಮಾಗೆ ಕಿಚ್ಚ ಸುದೀಪ್ ಸಾಥ್: ಟೀಸರ್ ಅನಾವರಣ