ನವದೆಹಲಿ: 200 ಕೋಟಿ ರೂ ವಂಚನೆ ಆರೋಪ ಎದುರಿಸುತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿ ಎಂದು ಕೋರ್ಟ್‌ಗೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಇಡಿ ಹೆಸರಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ನಟಿಯನ್ನು ಆರೋಪಿ ಎಂದು ಉಲ್ಲೇಖಿಸಿದೆ. ಇದಕ್ಕೂ ಮೊದಲು ದೆಹಲಿ ಪೊಲೀಸರು ಸುಕೇಶ್ ಚಂದ್ರಶೇಖರ್‌ನನ್ನು ಬಂಧಿಸಿದ್ದರು. ಈತ ರಾನ್ ಬ್ಯಾಕ್ಸಿ ಔಷಧ ಕಂಪನಿಯ ಮಾಜಿ ಪ್ರಚಾರಕ ಸದಸ್ಯರಾದ ಅದಿತಿ ಸಿಂಗ್ ಮತ್ತು ಶಿವೇಂದರ್ ಸಿಂಗ್ ಅವರಿಂದ ಸುಮಾರು 215 ಕೋಟಿ ರೂ ಸುಲಿಗೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾನೆ.
ಈ ಪ್ರಕರಣದಲ್ಲಿ ಇಡಿ ಸಲ್ಲಿಸಿದ ಮೊದಲ ಚಾರ್ಜ್‌ಶೀಟ್‌ನಲ್ಲಿ ಸುಕೇಶ್ ಚಂದ್ರಶೇಖರ್ ವಂಚಿಸಿದ ಹಣವನ್ನು ಹೇಗೆ ಬಳಸಿದ್ದಾನೆ ಎಂದು ವಿವರಿಸಿದೆ. ಪೂರಕ ಆರೋಪಪಟ್ಟಿಯಲ್ಲಿ, ಈತ ವಂಚಿಸಿದ ಮೊತ್ತದಿಂದ 5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಫರ್ನಾಂಡೀಸ್ಗೆ ನೀಡಿದ್ದಾನೆ. ಅಪರಾಧದ ಆದಾಯದಿಂದಲೇ ಉಡುಗೊರೆಗಳನ್ನು ಖರೀದಿಸಲಾಗಿದೆ ಎಂಬ ವಿಚಾರ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ತಿಳಿದಿತ್ತು ಎಂದು ಇಡಿ ಹೇಳಿದೆ.
ಇದನ್ನೂ ಓದಿ: SIIMA Nominations 2021: ಕನ್ನಡ ಸೇರಿದಂತೆ ಟಾಪ್ ಸೌತ್ ಸಿನಿಮಾಗಳ ಪಟ್ಟಿ ಬಿಡುಗಡೆ