ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಚುನಾವಣೆಯಲ್ಲಿ ರಾಜಕೀಯ ಗಣ್ಯರು ಮಾತ್ರವಲ್ಲದೇ ಚಿತ್ರರಂಗದ ಸ್ಟಾರ್ ನಟರಿಗೆ ಪಕ್ಷಗಳ ಮುಖಂಡರು ಗಾಳ ಹಾಕುತ್ತಿದ್ದು ಮತಗಳಿಕೆಗೆ ತಂತ್ರ ಹೆಣೆಯುತ್ತಿದ್ದಾರೆ. ಈ ಮಧ್ಯೆ 'ಕಾಂತಾರ' ಸಿನಿಮಾ ಮೂಲಕ ವಿಶ್ವದ ಗಮನ ಸೆಳೆದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಶನಿವಾರ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
"ಸಮಾಜದಲ್ಲಿ ಬದಲಾವಣೆ ತರಲು ರಾಜಕೀಯಕ್ಕೆ ಬರಬೇಕು ಅಂತೇನಿಲ್ಲ. ಸಾಮಾನ್ಯ ಮನುಷ್ಯರಾಗಿಯೂ ಕೂಡ ಸಮಾಜದ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು. ಈಗಾಗಲೇ ಸಾಕಷ್ಟು ರಾಜಕೀಯ ಮುಖಂಡರು ತಮ್ಮ ಕ್ಷೇತ್ರ ಹಾಗೂ ಹಳ್ಳಿಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇನ್ನೂ ಕೆಲವರು ರಾಜಕೀಯಕ್ಕೆ ಬಾರದೇ ತಮ್ಮ ಊರುಗಳಲ್ಲಿ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದಾರೆ. ಅದು ತುಂಬಾ ಮುಖ್ಯ. ರಾಜಕೀಯಕ್ಕೆ ಬಂದು ಕೆಲಸ ಮಾಡಬೇಕು ಅಂತಲ್ಲ, ರಾಜಕೀಯ ಪ್ರವೇಶದ ಆಸೆ ಸದ್ಯಕ್ಕಿಲ್ಲ' ಎಂದು ರಿಷಬ್ ಶೆಟ್ಟಿ ಹೇಳಿದರು.
ಇದನ್ನೂ ಓದಿ: 'ಕನ್ನಡ ಚಿತ್ರರಂಗವೇ ನನ್ನ ಕರ್ಮಭೂಮಿ' - ರಿಷಬ್ ಶೆಟ್ಟಿ
ರಾಜಕೀಯಕ್ಕೆ ತಾರಾ ಮೆರುಗು: ಮತ್ತೊಂದೆಡೆ, ರಾಜಕೀಯ ಮುಖಂಡರು ಚಿತ್ರರಂಗದ ಸ್ಟಾರ್ ನಟರನ್ನು ಭೇಟಿ ಮಾಡಿ ತಮ್ಮ ಪಕ್ಷದ ಪ್ರಚಾರ ಕಾರ್ಯಕ್ಕೆ ಅವರನ್ನು ಕರೆತರುವ ಕೆಲಸ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಇತ್ತೀಚೆಗೆ ನಟ ಕಿಚ್ಚ ಸುದೀಪ್ ಸುದ್ದಿಯಾಗಿದ್ದರು. ಸುದೀಪ್ ಅವರಿಗೆ ರಾಜ್ಯದ ಎಲ್ಲ ರಾಜಕೀಯ ನಾಯಕರೊಂದಿಗೆ ಆತ್ಮೀಯ ಬಾಂಧವ್ಯವಿದೆ. ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಅವರನ್ನು ಭೇಟಿ ಮಾಡಿದ್ದರು. ಇದು ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಹುಟ್ಟುಹಾಕಿದೆ.
ನಟ ಶಿವರಾಜ್ ಕುಮಾರ್, ಯಶ್, ದುನಿಯಾ ವಿಜಯ್, ಸಾಧು ಕೋಕಿಲ, ಗಣೇಶ್, ಸಾಯಿಕುಮಾರ್, ರಕ್ಷಿತ್ ಶೆಟ್ಟಿ, ನಟಿಮಣಿಯರಾದ ರಮ್ಯಾ, ರಕ್ಷಿತಾ ಪ್ರೇಮ್, ರಚಿತಾ ರಾಮ್, ಸೇರಿದಂತೆ ಸಾಕಷ್ಟು ಕನ್ನಡ ತಾರೆಯರು ಈ ವರ್ಷದ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: 'ಕಾಂತಾರ 2'ನಲ್ಲಿ ಬಣ್ಣ ಹಚ್ಚಲಿದ್ದಾರೆ ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ!