ಒಡಿಶಾದ ಬಾಲಸೋರ್ನಲ್ಲಿ ನಡೆದ ತ್ರಿವಳಿ ರೈಲು ಅಪಘಾತ ಇಡೀ ದೇಶವನ್ನೇ ಒಂದು ಕ್ಷಣ ಮೌನವಾಗಿಸಿತ್ತು. ದುರಂತದಲ್ಲಿ ಸುಮಾರು 270ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದರು. ಈ ಬಗ್ಗೆ ಬಹುಭಾಷಾ ನಟ ಕಿಶೋರ್ ಪ್ರತಿಕ್ರಿಯಿಸಿದ್ದು, ಭೀಕರ ರೈಲು ದುರಂತಕ್ಕೆ ಕೇಂದ್ರ ಸರ್ಕಾರವನ್ನೇ ನೇರ ಹೊಣೆಯಾಗಿಸಿದ್ದಾರೆ. ಇಂಗ್ಲಿಷ್ ಪತ್ರಿಕೆಯಲ್ಲಿ ಬಂದ ಘಟನೆಯ ವರದಿಯನ್ನು ಪೋಸ್ಟ್ ಮಾಡಿ, ಅದರೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕಿಶೋರ್ ಪೋಸ್ಟ್ನಲ್ಲೇನಿದೆ?: "ಯಾರ ಮೇಲೆ ಕಠಿಣ ಕ್ರಮ ? ಯಾರು ಕಾರಣ ? ಇಷ್ಟು ಭೀಕರ ಸಾವು ನೋವು ತಡೆಗಟ್ಟಬಹುದಿತ್ತೇ? ರೈಲ್ವೆ ಮಂತ್ರಿ ಈಗ ಹೋಗಿ ನಿಂತು ಕ್ಯಾಮರಾ ಮುಂದೆ ಕಣ್ಣೀರು ಸುರಿಸುವ ನಾಟಕ ಬಿಟ್ಟು ಇಂದಿಗೂ ಖಾಲಿಯಿರುವ 3 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರನ್ನು 1500ಕ್ಕೂ ಹೆಚ್ಚು ರೈಲ್ವೆ ಸುರಕ್ಷತೆಗೆ ಬೇಕಾದ ಖಾಲಿಯಾಗೇ ಉಳಿದಿರುವ ಹುದ್ದೆಗಳನ್ನು ತುಂಬಿ ಹಳಿ ನಿರ್ವಹಣೆ ಸಮರ್ಪಕವಾಗಿಸಬಹುದಿತ್ತೇ? ಕೋಟ್ಯಂತರ ರೂಪಾಯಿ ವ್ಯಯಿಸಿ ತಿಂಗಳಿಗೊಂದು ರೈಲಿಗೆ ಹಸಿರು ನಿಶಾನೆ ತೋರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಬದಲು, ‘ಕವಚ’ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ಕೊಟ್ಟು ಎಲ್ಲೆಡೆ ಅಳವಡಿಸಬಹುದಿತ್ತೇ?" ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಅಪಘಾತ ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಶನ್ ನೆರವು: 10 ಅಂಶಗಳ ಯೋಜನೆ ಜಾರಿ
"ಹಾಗೆ ನೋಡಿದರೆ ಕಳೆದ 6-7 ವರ್ಷಗಳಲ್ಲಿ 1000ಕ್ಕೂ ಹೆಚ್ಚು ರೈಲುಗಳು ಹಳಿತಪ್ಪಿ ಅಪಘಾತಕ್ಕೀಡಾಗಿದ್ದರೂ, 2021ರ ಸಿಎಜಿ ರಿಪೋರ್ಟನ್ನು ಕಡೆಗಣಿಸಿ ಸುರಕ್ಷತೆಗಿಂತ ದೇಶದ ಸ್ವತ್ತನ್ನು ಮಾರಿ ದುಡ್ಡು ಮಾಡುವುದರಲ್ಲೇ ನಿರತವಾದ ಸರ್ಕಾರವೇ ಈ ದುರಂತಕ್ಕೆ ಕಾರಣವಲ್ಲವೇ? ಅಪರಾಧಿ ಸರ್ಕಾರವೇ ಅಪರಾಧದ ತನಿಖೆ ಮಾಡಿ ಅಪರಾಧಿ ಯಾರೆಂದು ಕಂಡು ಹಿಡಿಯುತ್ತದಂತೆ… ಎಂಥ ವಿಪರ್ಯಾಸ! ಇಲ್ಲಿ ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ.. ನಮ್ಮ ಸರ್ಕಾರ" ಎಂದು ಕಿಡಿಕಾರಿದ್ದಾರೆ.
"ಮೂರ್ಖ ಸರ್ಕಾರದ, ನಾಲಾಯಕ್ ಮಂತ್ರಿಗಳ, ಪ್ರಜೆಗಳೆಲ್ಲ ಬರೀ ಮತಗಳಂತೆ ಕಾಣುವ ಪ್ರಚಾರಿ ಪ್ರಧಾನಿಯ ಸಂಕುಚಿತ ದೃಷ್ಟಿಯನ್ನು ಮುಚ್ಚಿ ಹಾಕಲು ಹೋಗಿ, ಆಡಳಿತ ಪಕ್ಷ ಮತ್ತದರ ಬೂಟು ನೆಕ್ಕುವ ಮಾಧ್ಯಮಗಳು ಇಮೇಜ್ ಮ್ಯಾನೇಜ್ಮೆಂಟ್ ಮಾಡುತ್ತ ತಪ್ಪನ್ನೂ ಸರಿಯೆಂದು ಸಾಧಿಸ ಹೊರಟರೆ ಕಳೆದುಕೊಂಡ ಪ್ರಾಣಗಳಿಗೆ ನೊಂದು ಜರ್ಜರಿತವಾದ ಕುಟುಂಬಗಳ ಕಣ್ಣೀರಿಗೆ ಅರ್ಥವಿಲ್ಲದೇ ಹೋದೀತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಮಡಿದ ನೂರಾರು ಅಮಾಯಕರ ಜೀವಗಳಿಗೆ ಅಶ್ರುತರ್ಪಣ. ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಲಿ. ಅಪಘಾತಗಳನ್ನೂ ದುರಂತಗಳನ್ನೂ ತಮ್ಮ ಇಮೇಜು ಬೆಳೆಸಿಕೊಳ್ಳಲು ಬಳಸುವುದನ್ನು ಬಿಟ್ಟು ಚುನಾವಣೆಯಾಚೆಗಿನ ತಮ್ಮ ಕರ್ತವ್ಯವನ್ನು ಇನ್ನಾದರೂ ನಿಭಾಯಿಸಲಿ" ಎಂದಿದ್ದಾರೆ. ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ನಟನ ಅನಿಸಿಕೆಯನ್ನು ತಪ್ಪೆಂದು ವ್ಯಾಖ್ಯಾನಿಸಿದ್ದು, ಇನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ.
ಕಳೆದ ಶುಕ್ರವಾರ (ಜೂ.2, 2023) ಒಡಿಶಾದ ಬಾಲಸೋರ್ನಲ್ಲಿ ಎರಡು ಪ್ರಯಾಣಿಕರ ರೈಲುಗಳು ಮತ್ತು ಸರಕು ಸಾಗಣೆ ರೈಲುಗಳು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಶಾಲಿಮಾರ್ - ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಾಗ ಈ ದುರಂತ ಸಂಭವಿಸಿತ್ತು. ಇದರಿಂದಾಗಿ ಹಲವಾರು ಬೋಗಿಗಳು ಪಕ್ಕದ ಟ್ರ್ಯಾಕ್ ಮೇಲೆ ಬಿದ್ದಿದ್ದವು. ಇದೇ ಸಂದರ್ಭದಲ್ಲಿ ಇನ್ನೊಂದು ಟ್ರ್ಯಾಕ್ನಲ್ಲಿ ಚಲಿಸುತ್ತಿದ್ದ ಯಶವಂತಪುರ ಹೌರಾ ಎಕ್ಸ್‌ಪ್ರೆಸ್, ಹಳಿ ತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಹೌರಾ ಎಕ್ಸ್ಪ್ರೆಸ್ನ ಕೊನೆಯ ಬೋಗಿಗಳು ಹಳಿ ತಪ್ಪಿದ್ದವು.
ಇದನ್ನೂ ಓದಿ: ಒಡಿಶಾ ರೈಲು ದುರಂತ: ಮೊದಲ FIR ದಾಖಲಿಸಿದ ಸಿಬಿಐ; ತಪ್ಪು ಸಾಬೀತಾದರೆ ಗರಿಷ್ಠ ಶಿಕ್ಷೆ ಎಷ್ಟು ಗೊತ್ತೇ!