ಸ್ಯಾಂಡಲ್ವುಡ್ನಲ್ಲಿ ಬಿಚ್ಚುಗತ್ತಿ ಸಿನಿಮಾ ಮೂಲಕ ಭರವಸೆ ಮೂಡಿಸಿರೋ ನಟ ರಾಜವರ್ಧನ್. ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಸುಪುತ್ರ ರಾಜವರ್ಧನ್ ನಟಿಸುತ್ತಿರುವ ಬಹುನಿರೀಕ್ಷಿತ ಹಿರಣ್ಯ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಪ್ರವೀಣ್ ಅವ್ಯುಕ್ತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಹಿರಣ್ಯ ಸಿನಿಮಾದ ಶೂಟಿಂಗ್ ಅಡ್ಡಕ್ಕೆ ಹೆಡ್ ಬುಷ್ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಡಾಲಿ ಧನಂಜಯ್ ಭೇಟಿ ಕೊಟ್ಟಿದ್ದಾರೆ.
ಹೌದು, ಬೆಂಗಳೂರಿನ ಹೊರ ವಲಯದಲ್ಲಿ ನಡೆಯುತ್ತಿರೋ ಹಿರಣ್ಯ ಸಿನಿಮಾದ ಚಿತ್ರೀಕರಣ ಸ್ಥಳಕ್ಕೆ ಡಾಲಿ ಧನಂಜಯ್ ಸರ್ಪ್ರೈಸ್ ಭೇಟಿ ಕೊಟ್ಟು ಗೆಳೆಯ ರಾಜವರ್ಧನ್ ಮತ್ತು ಚಿತ್ರತಂಡದವರೊಂದಿಗೆ ಸಮಯ ಕಳೆದಿದ್ದಾರೆ. ಹಿರಣ್ಯ ಸಿನಿಮಾದ ಆ್ಯಕ್ಷನ್ ಸೀನ್ಗಳನ್ನು ಡಾಲಿ ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ಹೇಗೆ ಆಗುತ್ತಿದೆ ಎಂಬುದರ ಬಗ್ಗೆ ಡಾಲಿ ವಿಚಾರಿಸಿದ್ದಾರೆ.
ಹಿರಣ್ಯ ಸಿನಿಮಾದ ಟೈಟಲ್ ಮೊದಲು ಡಾಲಿ ಧನಂಜಯ್ ಬಳಿ ಇತ್ತು. ಬಳಿಕ ಡಾಲಿ ಗೆಳೆಯ ರಾಜವರ್ಧನ್ ಅವರಿಗಾಗಿ ಈ ಟೈಟಲ್ ಅನ್ನು ಕೊಟ್ಟರು. ರಾಜವರ್ಧನ್ ನಾಯಕನಾಗಿ ಮಾಸ್ ಅವತಾರದಲ್ಲಿ ಈ ಸಿನಿಮಾದಲ್ಲಿ ಮಿಂಚಲಿದ್ದು, ನಟರಾಕ್ಷಸ ಡಾಲಿ ಧನಂಜಯ್ ಸಪೋರ್ಟ್ ನೀಡಿದ್ದಾರೆ.
ಇದನ್ನೂ ಓದಿ: ಮುದ್ದಿನ ಮಗಳು ಐರಾ ಜೊತೆ ರಾಕಿಂಗ್ ಸ್ಟಾರ್ ತುಂಟಾಟ
ಪ್ರವೀಣ್ ಅವ್ಯುಕ್ತ್ ನಿರ್ದೇಶನದ ರಾಜವರ್ಧನ್ಗೆ ಜೋಡಿಯಾಗಿ ಮಾಡೆಲ್ ರಿಹಾನಾ ನಟಿಸುತ್ತಿದ್ದು ಈ ಸಿನಿಮಾ ಮೂಲಕ ರಿಹಾನಾ ಚಂದನವನ ಪ್ರವೇಶಿಸಿದ್ದಾರೆ. ವೇದಾಸ್ ಇನ್ಫಿನೈಟ್ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಪಕರಾದ ವಿಘ್ನೇಶ್ವರ ಯು ಮತ್ತು ವಿಜಯ್ ಕುಮಾರ್ ಬಿವಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಯೋಗೇಶ್ವರನ್ ಆರ್ ಛಾಯಾಗ್ರಹಣವಿದೆ. ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಸದ್ಯ ಡಾಲಿ ಧನಂಜಯ್ ಹಿರಣ್ಯ ಸಿನಿಮಾ ಶೂಟಿಂಗ್ ಅಡ್ಡಕ್ಕೆ ಬಂದಿರೋದು ಚಿತ್ರತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ.