ಕನ್ನಡ ಚಿತ್ರರಂಗದಲ್ಲಿ ರಾಮ ಲಕ್ಷ್ಮಣರಂತೆ ಇದ್ದ ಸ್ಟಾರ್ ನಟರೆಂದ್ರೆ ಅದು ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ. ಈ ಅಣ್ಣ ತಮ್ಮನ ಬಾಂಧವ್ಯ ಹೇಗಿತ್ತು ಅನ್ನೋದು ಇಡೀ ಕರುನಾಡಿಗೆ ಗೊತ್ತು. ದಿ. ಚಿರಂಜೀವಿ ಸರ್ಜಾ ತಮ್ಮನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಅದಕ್ಕೆ ಸಾಕ್ಷಿ ಸಹೋದರರ ಸಾಕಷ್ಟು ವಿಡಿಯೋಗಳು.
ಬಾಲ್ಯದಿಂದಲೂ ಬಹಳ ಆತ್ಮೀಯವಾಗಿದ್ದು, ಅಣ್ಣ ಚಿರಂಜೀವಿ ಸರ್ಜಾ 2020ರ ಜೂನ್ 7ರಂದು ಹೃದಯಘಾತದಿಂದ ನಿಧನ ಹೊಂದಿದ್ದರು. ಇದು ನಟ ಧ್ರುವ ಸರ್ಜಾ ಜೀವನದಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತ್ತು. ಈ ಘಟನೆಯಿಂದ ಧ್ರುವ ಸರ್ಜಾರಿಗೆ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಅದಕ್ಕೆ ಸಾಕ್ಷಿ, ಧ್ರುವ ಸರ್ಜಾ ಅವರು ಅಣ್ಣನ ಸಮಾಧಿ ಬಳಿ ಮಲಗಿರುವ ವಿಡಿಯೋ.
ಹೌದು, ಕನಕಪುರದ ನೆಲಗುಳಿಯ ಫಾರ್ಮ್ ಹೌಸ್ನಲ್ಲಿ ಚಿರು ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಆ ಸ್ಥಳದಲ್ಲಿ ಚಿರಂಜೀವಿ ಸರ್ಜಾ ಸ್ಮಾರಕ ನಿರ್ಮಾಣ ಆಗಿದೆ. ಸಮಾಧಿ ಬಳಿ ಚಿರು ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಕೆತ್ತನೆ ಮಾಡಲಾಗಿದೆ. ಅಣ್ಣನ ನೆನಪಲ್ಲಿರುವ ಧ್ರುವ ಸರ್ಜಾ ಆಗಾಗ ಸಮಾಧಿ ಸ್ಥಳಕ್ಕೆ ಹೋಗಿ ಬರುತ್ತಾರೆ. ಧ್ರುವ ಸರ್ಜಾ ಆಪ್ತರು ಹೇಳುವ ಹಾಗೆ, ವಾರಕ್ಕೊಮ್ಮೆ ಚಿರು ಸಮಾಧಿ ಬಳಿ ಧ್ರುವ ಹೀಗೆ ಮಲಗುತ್ತಾರೆ. ಇದರಿಂದ ನಟ ನೆಮ್ಮದಿ ಕಂಡುಕೊಳ್ಳುತ್ತಾರಂತೆ.
ಸದ್ಯ ಮಾರ್ಟಿನ್ ಹಾಗೂ ಕೆ.ಡಿ ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿರೋ ಧ್ರುವ ಸರ್ಜಾ ಅವರ ಹುಟ್ಟು ಹಬ್ಬಕ್ಕೆ ಅಣ್ಣ ಚಿರು ನಟಿಸಿರುವ ಕೊನೆಯ ಸಿನಿಮಾ ರಾಜಮಾರ್ತಾಂಡ ಬಿಡುಗಡೆ ಆಗಲಿದೆ. ಚಿರು ತಮ್ಮ ನಿಧನಕ್ಕೂ ಮುನ್ನ ರಾಜಮಾರ್ತಾಂಡ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಚಿತ್ರೀಕರಣ ಸಹ ಮುಕ್ತಾಯವಾಗಿತ್ತು. ಆದರೆ, ಡಬ್ಬಿಂಗ್ ಮಾತ್ರ ಬಾಕಿಯಿತ್ತು. ಬಳಿಕ ಅಣ್ಣನ ಪಾತ್ರಕ್ಕೆ ತಮ್ಮ ಧ್ರುವ ಸರ್ಜಾ ಡಬ್ಬಿಂಗ್ ಕೆಲಸ ಮಾಡುವ ಮೂಲಕ ಅಣ್ಣನ ಸಿನಿಮಾ ರಿಲೀಸ್ಗೆ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಪುಷ್ಪ 2 ಶೂಟಿಂಗ್ ಸೆಟ್ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ.. ಗರಿಗೆದರಿದ ಕುತೂಹಲ
ರಾಜಮಾರ್ತಾಂಡ ಚಿತ್ರದ ನಿರ್ಮಾಪಕ ಶಿವಕುಮಾರ್ ಹೇಳುವ ಪ್ರಕಾರ, ಧ್ರುವ ಸರ್ಜಾ ಅವರು ಅಣ್ಣನ ಪಾತ್ರಕ್ಕೆ ಡಬ್ಬಿಂಗ್ ಮಾಡೋದಕ್ಕೆ ಬರೋಬ್ಬರಿ 15 ರಿಂದ 20 ದಿನ ಟೈಮ್ ತೆಗೆದುಕೊಂಡಿದ್ದಾರೆ. ಸ್ಕ್ರೀನ್ ಮೇಲೆ ಅಣ್ಣನನ್ನು ನೋಡಿ ಧ್ರುವ ಸರ್ಜಾ ಅವರಿಗೆ ಡಬ್ಬಿಂಗ್ ಮಾಡಲು ಸಾಧ್ಯವಾಗದೇ ಗಳ ಗಳ ಅತ್ತ ಕ್ಷಣಗಳಿವೆ. ಕೆಲವೊಮ್ಮೆ ಧ್ರುವ ಸರ್ಜಾ ಇಂದು ಡಬ್ಬಿಂಗ್ ಮಾಡುತ್ತೇನೆ ಎಂದು ಬಂದು ಅಣ್ಣನನ್ನು ನೆನೆದು ಹಾಗೇ ಹೋದ ದಿನಗಳುಂಟು ಎಂದು ನಿರ್ಮಾಪಕ ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: 'ಕಿಂಗ್ ಜೊತೆ ಕಿಂಗ್ ಸೈಜ್ ಎಂಟರ್ಟೈನ್ಮೆಂಟ್ ಸಿನಿಮಾ': ಜವಾನ್ ಬಗ್ಗೆ ಮಹೇಶ್ ಬಾಬು ಗುಣಗಾನ
ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಿವೇದಿತಾ ಶಿವಕುಮಾರ್ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸ್ನೇಹಿತರು ಸಿನಿಮಾ ಖ್ಯಾತಿಯ ರಾಮನಾರಾಯಣ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.