ಕನ್ನಡ ಚಿತ್ರರಂಗದಲ್ಲಿ ಹೊಸ ಕಥೆ, ಹೊಸ ಪ್ರತಿಭೆಗಳನ್ನು ಗುರುತಿಸಿ ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ ಅಂದ್ರೆ ಅದು ''ಪಿ.ಆರ್.ಕೆ ಪ್ರೊಡಕ್ಷನ್ಸ್ ಹೌಸ್''. ಇದೀಗ ಮತ್ತೊಂದು ವಿಭಿನ್ನ ಕಥೆಯ ಚಿತ್ರವನ್ನು ಚಿತ್ರರಸಿಕರೆದುರು ತರಲು ಸಜ್ಜಾಗಿದೆ. ''ಆಚಾರ್ & ಕೋ'' ಸಿನಿಮಾ ಸಿನ್ಸ್ 1971 ಅನ್ನೋ ಟ್ಯಾಗ್ ಲೈನ್ ಹೊಂದಿದೆ.
ಆಚಾರ್ ಆ್ಯಂಡ್ ಕೋ ಸಿನಿಮಾದ ವಿಶೇಷತೆ ಬಗ್ಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ, ಹಿರಿಯ ನಟ ಅಶೋಕ್, ಹಿರಿಯ ನಟಿ ಸುಧಾ ಬೆಳವಾಡಿ ಸೇರಿದಂತೆ ಇಡೀ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ನಟಿಸಿರುವ ಸಿಂಧು ಶ್ರೀನಿವಾಸಮೂರ್ತಿ ಅವರು ಈ 'ಆಚಾರ್ & ಕೋ' ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಬಗ್ಗೆ ಮಾತು ಶುರು ಮಾಡಿದ ಅವರು, 1960ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಥೆ. ಆಚಾರ್ ಎಂಬ ಸುಸಂಸ್ಕೃತ ಕುಟುಂಬದಲ್ಲಿ ಹತ್ತು ಮಕ್ಕಳು ತಮ್ಮ ಕನಸುಗಳನ್ನು ಬೆನ್ನತ್ತುವ ಹಾದಿಯಲ್ಲಿ ಹೇಗೆ ಸವಾಲುಗಳನ್ನು ಎದುರಿಸುತ್ತಾರೆ, ಸಂಪ್ರದಾಯಗಳನ್ನೂ ಮೀರದೇ, ಆಧುನಿಕ ಜಗತ್ತಿನ ವಿಷಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಹೇಳುವ ಒಂದು ಭಾವನಾತ್ಮಕ ಸಿನಿಮಾ. 60ರ ದಶಕದ ಅನುಭವ ಕೊಡಲು ಬಹುತೇಕ ಮೈಸೂರಿನಲ್ಲಿ ಲೈವ್ ಆಗಿ ಹಾಗೂ ಕೆಲ ದೃಶ್ಯಗಳಿಗೆ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಸೂಕ್ತ ವಸ್ತ್ರವಿನ್ಯಾಸ ಮತ್ತು ಕಲಾ ನಿರ್ದೇಶನದ ಮೂಲಕ 60 ಮತ್ತು 70ರ ದಶಕದ ಬೆಂಗಳೂರನ್ನು ತೆರೆ ಮೇಲೆ ಸಮರ್ಥವಾಗಿ ಮರುಸೃಷ್ಟಿ ಮಾಡಲಾಗಿದೆ. ಈ ಕುಟುಂಬದ ಕಥೆಯನ್ನು ನೋಡುತ್ತಾ ಪ್ರೇಕ್ಷಕರು ತಮಗೆ ತಿಳಿಯದಂತೆ ತಮ್ಮನ್ನು ಅಂದಿನ ಕಾಲಕ್ಕೆ ಹೋಗುತ್ತಾರೆ. 60ರ ದಶಕದ ಸಾಮಾಜಿಕ ಮತ್ತು ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ಹೇಗೆ ತಮ್ಮ ಜೀವನ ನಡೆಸಲು ಹೋರಾಟ ನಡೆಸುತ್ತಾರೆ ಅನ್ನೋದು ಆಚಾರ್ & ಕೋ ಚಿತ್ರಕಥೆ. ಈ ಚಿತ್ರದಲ್ಲಿ ಭಾವನಾತ್ಮಕ ವಿಷಯದಷ್ಟೇ ಹಾಸ್ಯವೂ ಇದೆ. ಆಸಕ್ತಿಕರ ಸನ್ನಿವೇಶಗಳ ಜೊತೆಗೆ ಇಡೀ ಸಮಾಜಕ್ಕೆ ಒಂದು ಪ್ರೇರಣೆಯೂ ಇದೆ ಎಂದು ತಿಳಿಸಿದರು.
ದಿ.ಪುನೀತ್ ರಾಜ್‍ಕುಮಾರ್ ಬದುಕಿದ್ದ ವೇಳೆ ಈ ಚಿತ್ರದ ಕಥೆ ಕೇಳಿ ಓಕೆ ಮಾಡಿದ್ದರು. ಅಪ್ಪು ಅಷ್ಟೇ ಜವಾಬ್ದಾರಿಯುತವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾವನ್ನು ಈಗಾಗಲೇ ನೋಡಿರುವ ಅಶ್ವಿನಿ ಪುನೀತ್ ರಾಜ್‍ಕುಮಾರ್, ಈ ಚಿತ್ರ ಒಂದು ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಯಾರಿಗೂ ಈ ಸಿನಿಮಾ ನಿರಾಸೆ ಮಾಡಲ್ಲ ಎಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಆಚಾರ್ ಆ್ಯಂಡ್ ಕೋ ಕುಟುಂಬದ ಯಜಮಾನನ ಪಾತ್ರ ಮಾಡಿರೋ ಹಿರಿಯ ನಟ ಅಶೋಕ್ ಮಾತನಾಡಿ, ಹೊಸ ಪ್ರತಿಭೆಗಳ ಜೊತೆ ಕೆಲಸ ಮಾಡಿರೋದು ತುಂಬಾನೇ ಖುಷಿ ಕೊಟ್ಟಿದೆ. 20 ವರ್ಷದ ಹುಡುಗಿ ಸಿಂಧು ಈ ಸಿನಿಮಾವನ್ನು ಹೇಗೆ ನಿರ್ದೇಶನ ಮಾಡ್ತಾರೆ ಅನ್ನೂ ಕುತೂಹಲ ಇತ್ತು. ಆದರೆ ಸಿಂಧು ಶ್ರೀನಿವಾಸಮೂರ್ತಿ ಅವರ ಬರವಣಿಗೆ ಹಾಗೂ ನಿರ್ದೇಶನ ಮಾಡುವ ಶೈಲಿ ನಿಜಕ್ಕೂ ಖುಷಿ ಕೊಟ್ಟಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮಹಾರಾಷ್ಟ್ರ, ಆಂಧ್ರದಂತೆ ಸಿನಿಮಾ ಟಿಕೆಟ್ ಬೆಲೆ ಕಡಿಮೆ ಮಾಡಿ: ಹಿರಿಯ ನಟ ಅಶೋಕ್
ಸುಧಾ ಬೆಳವಾಡಿ ಈ ಚಿತ್ರದಲ್ಲಿ ಅಶೋಕ್ ಅವರ ಸಂಪ್ರದಾಯಬದ್ಧ ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಚಾರ್ & ಕೋ ಚಿತ್ರದ ಮತ್ತೊಂದು ಹೆಮ್ಮೆಯೆಂದರೆ ಹೆಚ್ಚಿನ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿರುವುದು. ಈ ಚಿತ್ರಕ್ಕೆ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿ, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು, ಕ್ರಿಯಾಶೀಲ ನಿರ್ಮಾಪಕರು ಸೇರಿದಂತೆ ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ನಿಭಾಯಿಸಿದ್ದಾರೆ.
ಇನ್ನೂ ಈ ಚಿತ್ರಕ್ಕೆ ಬಿಂದುಮಾಲಿನಿ ನಾರಾಯಣಸ್ವಾಮಿ ಸಂಗೀತ ನಿರ್ದೇಶನ, ಇಂಚರಾ ಸುರೇಶ್ ವಸ್ತ್ರ ವಿನ್ಯಾಸ, ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣ ಇದೆ. ಇದೇ ಜುಲೈ 28 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.