ಕೆಜಿಎಫ್ ಚಾಪ್ಟರ್ 2 ಭಾರತೀಯ ಚಿತ್ರರಂಗ ಅಲ್ಲದೇ ವಿದೇಶಗಳಲ್ಲೂ ಗ್ರ್ಯಾಂಡ್ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿರೋ ಕನ್ನಡದ ಹೆಮ್ಮೆಯ ಸಿನಿಮಾ. ಗಲ್ಲಾ ಪೆಟ್ಟಿಗೆಯಲ್ಲಿ ವಿಶ್ವದಾದ್ಯಂತ ಬರೋಬ್ಬರಿ 185 ಕೋಟಿ ಕಲೆಕ್ಷನ್ ಮಾಡಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ತಂಡದಿಂದ ಅಚ್ಚರಿಯ ಸುದ್ದಿಯೊಂದು ಹೊರ ಬಿದ್ದಿದೆ.
ವಿಶ್ವಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಸಿನಿಮಾದಲ್ಲಿ ಯಶ್ ಅಮೋಘ ಅಭಿನಯದ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್ ಸ್ಕ್ರೀನ್ ಪ್ಲೇ ಹಾಗೂ ಕ್ಯಾಮೆರಾಮ್ಯಾನ್ ಭುವನ್ ಗೌಡ ಕೈಚಳಕದ ಬಗ್ಗೆ ಟಾಕ್ ಆಗುತ್ತಿದೆ. ಇದರ ಜೊತೆಗೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಎಡಿಟರ್ ಬಗ್ಗೆಯೂ ಈಗ ಹೆಚ್ಚಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಒಂದೊಂದು ಪ್ರೇಮ್ ಎಷ್ಟು ಅದ್ಧೂರಿಯಾಗಿ ಇದಿಯೋ ಅಷ್ಟೇ ಫಾಸ್ಟ್ ಆಗಿ ಸೀನ್ಗಳು ಬಂದು ಹೋಗುತ್ವೆ. ಈ ಅದ್ಧೂರಿ ಸಿನಿಮಾವನ್ನ ಯಾರಪ್ಪ ಇಷ್ಟು ಚೆನ್ನಾಗಿ ಎಡಿಟ್ ಮಾಡಿದ್ದಾರೆ ಅಂತಾ ಒಮ್ಮೆಯಾದರೂ ಅನಿಸುತ್ತೆ. ಅಷ್ಟರಮಟ್ಟಿಗೆ ಇದನ್ನು ಸಂಕಲನ ಮಾಡಲಾಗಿದೆ. ಈ ಸಾಹಸಿ ಕೆಲಸ ಮಾಡಿದವರು 20 ವರ್ಷದ ಯುವಕ ಎಂದರೆ ನೀವು ನಂಬಲೇಬೇಕು.
ಉಜ್ವಲ್ ಕುಲಕರ್ಣಿ ಮೂಲತಃ ಗುಲ್ಬರ್ಗದವರು. ಸಿನಿಮಾ ಎಡಿಟರ್ ಆಗಿದ್ದರ ಬಗ್ಗೆ ಎಕ್ಸ್‌ಕ್ಲ್ಯೂಸಿವ್ ಆಗಿ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ. ನಾನು ಯಶ್ ಸಾರ್ ಅಪ್ಪಟ ಅಭಿಮಾನಿ. ಆಗಾಗ ಯಶ್ ಸಾರ್ರನ್ನ ಭೇಟಿ ಮಾಡುತ್ತಿದ್ದೆ. ನನಗೆ ಕೆಜಿಎಫ್ 1 ಸಿನಿಮಾ ಸಾಕಷ್ಟು ಪ್ರಭಾವ ಬೀರಿತ್ತು. ಆ ವೇಳೆ ನಾನು ಪಿಯುಸಿ ಓದುತ್ತಿದ್ದೆ. ನನ್ನ ಅಣ್ಣ ವಿನಯ್ ಅವರು ಸಿನಿಮಾಗೆ ಎಂಟ್ರಿಕೊಡು ಅಂದರು. ಅವನಿಗೋಸ್ಕರ ಎಡಿಟಿಂಗ್ ಮೇಲೆ ಆಸಕ್ತಿ ಮೂಡಿ ಈ ಕೆಲದಲ್ಲಿ ತಲ್ಲೀನನಾದೆ ಎನ್ನುತ್ತಾರೆ ಉಜ್ವಲ್.
ಇದನ್ನೂ ಓದಿ: ಭೀಕರ ಅಪಘಾತದಲ್ಲಿ ಹೊತ್ತಿ ಉರಿದ ಕಾರು; ದಂಪತಿ ಸೇರಿ ಮೂವರು ಸಜೀವ ದಹನ
ಎಡಿಟ್ ಮಾಡಿದ್ದ ಕೆಲ ಕಿರು ಚಿತ್ರಗಳನ್ನ ನಿರ್ದೇಶಕ ಪ್ರಶಾಂತ್ ನೀಲ್ ಪತ್ನಿ ಲಿಖಿತಾ ಅವರಿಗೆ ಉಜ್ವಲ್ ತೋರಿಸಿದ್ರಂತೆ. ಆಗ ಲಿಖಿತ ಅವರು ನಿರ್ದೇಶಕ ಪ್ರಶಾಂತ್ ನೀಲ್ಗೆ ತೋರಿಸಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆದ ಪ್ರಶಾಂತ್ ಅವರು, ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಕೆಲಸ ಮಾಡು ಅಂತಾ ಅವಕಾಶ ಕೊಟ್ಟಿದ್ರಂತೆ. ಪ್ರಮುಖ ವಿಷಯ ಎಂದರೆ ಆಗ ಉಜ್ವಲ್‌ಗೆ 17 ವರ್ಷ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ಎಡಿಟರ್ ಆಗೋದಿಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಕಾರಣ. ಪ್ರತಿಯೊಂದನ್ನ ಅವರೇ ಹೇಳಿ ಎಡಿಟ್ ಮಾಡಿಸಿದ್ದಾರೆ. ಈಗ ನನಗೆ 20 ವರ್ಷ. ಮೂರು ವರ್ಷಗಳಿಂದ ನಾನು ಕೆಜಿಎಫ್ ಚಾಪ್ಟರ್ 2 ಸಿನಿಮಾದ ಎಡಿಟಿಂಗ್ ಕೆಲಸಗಳನ್ನು ಮಾಡುತ್ತಿದ್ದೆ. ನನಗೆ ಪ್ರಶಾಂತ್ ಸಾರ್ ಯಾವುದೇ ತೊಂದರೆ ಕೊಡದೇ ಕೆಲಸ ಮಾಡಿಸಿದ್ದಾರೆ. ಅದು ನನ್ನ ಅದೃಷ್ಟ. ತಂದೆ-ತಾಯಿಗೆ ನಾನು ಉನ್ನತ ವಿದ್ಯಾಭ್ಯಾಸ ಮಾಡಲಿಲ್ಲ ಅಂತಾ ಕೋಪ ಇತ್ತು. ಇಂದು ಕೆಜಿಎಫ್ ಸಿನಿಮಾದಿಂದ ನನ್ನ ಬಗ್ಗೆ ಮಾತನಾಡುತ್ತಿರುವುದನ್ನ ನೋಡಿ ನನ್ನ ತಂದೆ-ತಾಯಿ ಕೂಡ ಖುಷಿಯಾಗಿರೋದು ನನಗೆ ಸಂತೋಷವಾಗಿದೆ ಅಂತಾರೆ ಉಜ್ವಲ್.