ಬೀದರ್ : ಕಲ್ಯಾಣ ಕ್ರಾಂತಿಯ ನೆಲ, ಶರಣರು ಹಾಗೂ ವಚನ ಸಾಹಿತ್ಯದ ತವರೂರು ರಾಷ್ಟಕೂಟರು ಕಲ್ಯಾಣಿ ಚಾಲುಕ್ಯರು ಆಳಿದ ಬೀಡು ಎಂದೆಲ್ಲಾ ಖ್ಯಾತಿ ಗಳಿಸಿರುವ ಕರ್ನಾಟಕದ ಮುಕುಟ ಬೀದರ್ ಎರಡನೇ ಹಂತದ ಲೋಕಸಭಾ ಚುನಾವಣೆಯ ಹಬ್ಬಕ್ಕೆ ಸಿದ್ಧವಾಗಿದೆ.
ಕ್ಷೇತ್ರದ ಚಿತ್ರಣ
ಬೀದರ್ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳು ಸೇರಿದಂತೆ ಕಲಬುರಗಿ ಜಿಲ್ಲೆಯ ಎರಡು ಕ್ಷೇತ್ರಗಳನ್ನೊಳಗೊಂಡು ಒಟ್ಟು 8 ವಿಧಾನಸಭೆ ಕ್ಷೇತ್ರನ್ನು ಬೀದರ್ ಲೋಕಸಭೆ ಕ್ಷೇತ್ರ ಹೊಂದಿದೆ. ಗುಲ್ಬರ್ಗಾ ಜಿಲ್ಲೆಯ ಆಳಂದ, ಚಿಂಚೋಳಿ, ಬೀದರ್ ಉತ್ತರ, ಭಾಲ್ಕಿ, ಬಸವಕಲ್ಯಾಣ, ಔರಾದ್, ಹುಮನಾಬಾದ್, ಬೀದರ್ ದಕ್ಷಿಣ ಈ ವಿಧಾನಸಭೆ ಕ್ಷೇತ್ರಗಳಾಗಿದ್ದು, ಇದರಲ್ಲಿ ಆಳಂದ ಹಾಗೂ ಔರಾದ್ನಲ್ಲಿ ಬಿಜೆಪಿ ಶಾಸಕರಿದ್ದಾರೆ. ಬೀದರ್ ದಕ್ಷಿಣದಲ್ಲಿ ಜೆಡಿಎಸ್ ಶಾಸಕರಿದ್ದು, ಇನ್ನುಳಿದ ವಿಧಾಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ, ಇನ್ನು ಕಲಬುರ್ಗಿಯ ಚಿಂಚೋಳಿ ಕ್ಷೇತ್ರವು ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಅವರ ಕ್ಷೇತ್ರವಾಗಿದ್ದು, ಪ್ರಸ್ತುತ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಕಲಬುರಗಿಯಲ್ಲಿ ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಅಲ್ಲದೇ ರಾಜ್ಯ ಸರ್ಕಾರದಲ್ಲಿ ಮೂವರು ಸಚಿವರನ್ನು ಕ್ಷೇತ್ರ ಹೊಂದಿದೆ. ಬಂಡೆಪ್ಪ ಕಾಂಶೆಪೂರ್, ರಹೀಂ ಖಾನ್, ರಾಜಶೇಖರ್ ಪಾಟೀಲ್ ಮೂವರು ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದು, ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಪೂರಕವಾಗುವ ಸಾಧ್ಯತೆಗಳಿವೆ.
ಕಣದಲ್ಲಿರುವ ಘಟಾನುಘಟಿಗಳು
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಬೀದರ್ ಲೋಕಸಭಾ ಕ್ಷೇತ್ರದಿಂದ ಎರಡನೆ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿದ್ದ ಖೂಬಾ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದವರು ಕಳೆದ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಮಾಜಿ ಸಿಎಂ ದಿ. ಎನ್. ಧರಂಸಿಂಗ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಸೋಲಿಸಿದ ರಾಜಕೀಯ ಇತಿಹಾಸ ಇವರಿಗಿದೆ. ಬಿಜೆಪಿಯ ಔರಾದ್ ಶಾಸಕ ಪ್ರಭು ಚವ್ಹಾಣ ಜತೆ ಆಂತರಿಕ ಭಿನ್ನಮತ ಈ ಚುನಾವಣೆಯಲ್ಲಿ ಇವರಿಗೆ ಮಾರಕವಾಗಲಿದೆ.
ಇನ್ನು ಭಗವಂತ ಖೂಬಾ ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ. ಮಾಜಿ ಸಚಿವ, ಹಾಲಿ ಭಾಲ್ಕಿ ಶಾಸಕರೂ ಆಗಿರುವ ಈಶ್ವರ ಖಂಡ್ರೆ ಈಗ ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದ ಕೈ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಪುತ್ರಾಗಿರುವ ಈಶ್ವರ ಖಂಡ್ರೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದವರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಿರುವ ಖಂಡ್ರೆ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಕಾಂಗ್ರೆಸ್ ನ ಪ್ರಬಲ ನಾಯಕರಲ್ಲಿ ಒಬ್ಬರಾಗಿದ್ದಾರೆ.
ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಖಂಡ್ರೆಗೆ ಜಿಲ್ಲೆಯಲ್ಲಿ ಕುಟುಂಬ ರಾಜಕೀಯದ ಹಿನ್ನೆಲೆಯಿದೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಖಂಡ್ರೆ ಇಬ್ಬರು ಒಂದೆ ಸಮುದಾಯದವರಾಗಿದ್ದು, ಇಬ್ಬರ ನಡುವೆ ಪ್ರಬಲ ಪೈಪೋಟಿ ಇದೆ.
ಜಿಲ್ಲಾಡಳಿತ ಸಿದ್ಧತೆ
ಕ್ಷೇತ್ರದಲ್ಲಿ 1999 ಮತಗಟ್ಟೆಗಳಿದ್ದು ಒಟ್ಟು 1773912 ಮತದಾರರು ಇದ್ದಾರೆ. ಇದರಲ್ಲಿ 918595 ಪುರುಷ, 855214 ಮಹಿಳಾ ಮತದಾರರು ಹಾಗೂ 103 ಜನ ಇತರರು ಇದ್ದಾರೆ. ಹೊಸದಾಗಿ 2014 ರಿಂದ 2019 ಅವಧಿಯಲ್ಲಿ 2.23 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. 20219 ಜನ ವಿಶೇಷ ಚೇತನ ಮತದಾರರಿದ್ದು ಈ ಪೈಕಿ 12893 ಪುರುಷ, 7322 ಮಹಿಳಾ ಹಾಗೂ 01 ಇತರೆ ಮತದಾರರಿದ್ದಾರೆ.
ಒಟ್ಟಾರೆ 2,228 ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದು 1878 ಜನ ಜಿಲ್ಲೆಯವರಿದ್ದು ಹೊರಗಡೆಯಿಂದ 350 ಜನ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಅಲ್ಲದೆ ಎರಡು ಕ್ಯಾಂಪ್ ಸಿಆರ್ಪಿಎಫ್ ಕೂಡ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ 287 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಬಿಗಿ ಬಂದೋಬಸ್ತ್ ಅಳವಡಿಸಲಾಗಿದೆ.