ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಗಾಗಿ ಸಮಾವೇಶ ಉದ್ದೇಶಿಸಿ ಮಾತನಾಡಲು, ಪ್ರಧಾನಿ ನರೇಂದ್ರ ಮೋದಿ ನಾಳೆ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಾಳೆ (ಎಪ್ರಿಲ್ 9) ಮೈಸೂರಿಗೆ ಪ್ರಧಾನಿ ಮೋದಿ ಆಗಮನ ಹಿನ್ನಲೆ, ಅವರ ಭದ್ರತೆಗೆ ಮೈಸೂರು ಜಿಲ್ಲಾಡಳಿತ ಸಜ್ಜಾಗಿದೆ. ಚುನಾವಣಾ ನೀತಿ ಸಂಹಿತೆ ಇಲ್ಲದಿರುವ ಸಂದರ್ಭದಲ್ಲಿ ಪ್ರಧಾನಿ ಅವರಿಗೆ ಹೇಗೆ ಭದ್ರತೆ ಒದಗಿಸಬೇಕೊ ಅದೇ ರೀತಿ ಈಗಲೂ ಭದ್ರತೆ ನೀಡಬೇಕು ಅನ್ನೋ ಕಾನೂನು ಇರುವುದರಿಂದ ಭದ್ರತೆ ನೀಡಲಾಗುತ್ತೆ ಎಂದು ತಿಳಿಸಿದರು.
ಈಗಾಗಲೇ ಮೈಸೂರಿಗೆ ಎಸ್ಪಿಜಿ ತಂಡ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಎಸ್ಪಿಜಿ ಅಧಿಕಾರಿಗಳು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸುರಕ್ಷತೆ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ಮೈಸೂರು ಏರ್ಪೋರ್ಟ್ನಿಂದ ಸಮಾವೇಶ ನಡೆಯುವ ಸ್ಥಳದವರೆಗೆ ಯಾವ ರೀತಿ ಭದ್ರತೆ ಒದಗಿಸಬೇಕು ಅನ್ನುವ ಕುರಿತು ಎಲ್ಲಾ ಇಲಾಖೆಗಳಿಗೂ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.
ಈಗಾಗಲೇ ಸುರಕ್ಷತೆ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಆರಂಭಿಸಿದ್ದೇವೆ. ನಾಳೆ ಮಧ್ಯಾಹ್ನ ಭದ್ರತೆ ವ್ಯವಸ್ಥೆ ಮಾಡಲಾಗುತ್ತೆ. ಮಹಾರಾಜ ಕಾಲೇಜು ಮೈದಾನದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಬಳಕೆಯಾಗುವ ಒಂದು ಕಚೇರಿ ಸ್ಥಾಪನೆ. ಸಂಜೆ 4:50ಕ್ಕೆ ಮೈಸೂರು ಏರ್ಪೋರ್ಟ್ ಗೆ ಮೋದಿ ಆಗಮಿಸಲಿದ್ದು, ಅಲ್ಲಿಂದ ರಸ್ತೆ ಮೂಲಕ ನಗರದ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದಾರೆ.
ಸಂಜೆ 5.50ಕ್ಕೆ ಕಾರ್ಯಕ್ರಮ ಮುಗಿಸಿ ರಸ್ತೆ ಮೂಲಕ ಏರ್ಪೋರ್ಟ್ ತಲುಪಿ ಅಲ್ಲಿಂದ ಕೊಯಿಮತ್ತೂರಿಗೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.