ಕಲಬುರಗಿ: ಬೆಂಗಳೂರು ಉತ್ತರ ವಲಯ ಡಿಸಿಪಿ ಶಶಿಕುಮಾರ ಅವರು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ಕೆಲಸ ಮಾಡಲು ಕಲಬುರ್ಗಿಗೆ ಆಗಮಿಸಿದ್ದಾರೆ ಎಂಬ ಅನುಮಾನವಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಆರ್.ವೆಂಕಟೇಶ್ ಕುಮಾರ್‌ರನ್ನು ಭೇಟಿಯಾದ ಜಾಧವ್, ಡಿಸಿಪಿ ಶಶಿಕುಮಾರ ಕಲಬುರ್ಗಿಯಲ್ಲಿ ಬಂದು ಖರ್ಗೆ ಪರ ಪ್ರಚಾರ ನಡೆಸುತ್ತಿರುವ ಅನುಮಾನವಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಡಿಸಿಪಿ ಶಶಿಕುಮಾರ್ ಎಲ್ಲಿದ್ದಾರೆ ? ಅವರು ಕಲಬುರ್ಗಿಗೆ ಬಂದಿದ್ದರೆ, ಏಕೆ ಬಂದಿದ್ದಾರೆ? ಎನ್ನುವ ಬಗ್ಗೆ ಒಂದು ಗಂಟೆಯೊಳಗೆ ಮಾಹಿತಿ ನೀಡಲು ಉಮೇಶ್ ಜಾಧವ್ ಮನವಿ ಮಾಡಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೂ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಕೇಳಿರುವುದಾಗಿ ಉಮೇಶ್ ಜಾಧವ್ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯಿಂದ ಆಡಳಿತ ಯಂತ್ರದ ವ್ಯಾಪಕ ದುರುಪಯೋಗವಾಗುತ್ತಿದೆ. ಸೋಲಿನ ಭೀತಿಯಿಂದ ಖರ್ಗೆ ಈ ರೀತಿ ಆಡಳಿತ ಯಂತ್ರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಜಾಧವ್ ಆರೋಪಿಸಿದ್ದಾರೆ.